ETV Bharat / state

ಪ್ರವಾಹದ ಬೆನ್ನಲ್ಲೆ ಹೆದ್ದಾರಿ ಮೇಲೆ ಗುಡ್ಡ ಕುಸಿತ; ಪರದಾಡುತ್ತಿರುವ ಪ್ರಯಾಣಿಕರು

author img

By

Published : Jul 28, 2021, 8:11 PM IST

karwar
ಹೆದ್ದಾರಿ ಮೇಲೆ ಗುಡ್ಡ ಕುಸಿತ

ಉತ್ತರ ಕನ್ನಡ ಜಿಲ್ಲೆಯಲ್ಲಿಯ ಧಾರಾಕಾರ ಮಳೆಗೆ ಹಲವೆಡೆ ಗುಡ್ಡ ಕುಸಿದು ಅನಾಹುತ ಸೃಷ್ಟಿ ಮಾಡಿದೆ. ಗುಡ್ಡ ಕುಸಿತದಿಂದ ಕಾರವಾರದಿಂದ ಬೆಳಗಾವಿಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿನ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತದಿಂದ ರಸ್ತೆಯೇ ಪ್ರಪಾತಕ್ಕೆ ಕುಸಿದು ಸಂಪರ್ಕವನ್ನೇ ಕಳೆದುಕೊಳ್ಳುವಂತಾಗಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎದುರಾದ ಭೀಕರ ಪ್ರವಾಹದಿಂದ ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ. ಗುಡ್ಡ ಕುಸಿತದಿಂದಾಗಿ ಅಣಶಿ ಘಟ್ಟದಲ್ಲಿ ಪ್ರಮುಖ ಹೆದ್ದಾರಿಯ ಸಂಪರ್ಕವೇ ಕಳೆದುಕೊಂಡು ಪ್ರಯಾಣಿಕರು ಪರದಾಡುವಂತಾಗಿದೆ.

ಹೆದ್ದಾರಿ ಮೇಲೆ ಗುಡ್ಡ ಕುಸಿತ

ರಸ್ತೆ ಸಂಚಾರ ಸ್ಥಗಿತ:

ಕಾರವಾರದಿಂದ ಜೋಯಿಡಾ, ದಾಂಡೇಲಿ, ಬೆಳಗಾವಿ, ಧಾರವಾಡಕ್ಕೆ ತೆರಳಲು ಇದು ಪ್ರಮುಖ ರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ಜನರು ಓಡಾಡುತ್ತಿದ್ದರು. ಕಳೆದ ಜುಲೈ 23ನೇ ತಾರೀಕಿನಂದು ಗುಡ್ಡ ಕುಸಿತವಾಗಿ ಸಂಪೂರ್ಣ ರಸ್ತೆಯೇ ಪ್ರಪಾತಕ್ಕೆ ಕುಸಿದಿದ್ದರಿಂದ ರಸ್ತೆ ಸಂಚಾರ ಸ್ಥಗಿತ ಮಾಡಲಾಗಿದ್ದು, ಇನ್ನು ರಸ್ತೆ ಸರಿಪಡಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿಲ್ಲ.

ನೂರಾರು ಕಿ.ಮೀ. ಸುತ್ತಿ ಬರುವ ಪರಿಸ್ಥಿತಿ:

ಜೋಯಿಡಾ ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ಕದ್ರಾ, ಕೈಗಾಕ್ಕೆ ಕೆಲಸಕ್ಕಾಗಿ ಜನರು ಬರುತ್ತಿದ್ದರು. ಅಲ್ಲದೇ ಕದ್ರಾ, ಕೈಗಾ ಭಾಗದಿಂದ ಧಾರವಾಡ, ಬೆಳಗಾವಿಗೆ ಸಾಕಷ್ಟು ಜನರು ಓಡಾಡುತ್ತಿದ್ದು ಇದೀಗ ರಸ್ತೆ ಸಂಪರ್ಕ ಇಲ್ಲದೇ ನೂರಾರು ಕಿಲೋ ಮೀಟರ್ ಸುತ್ತಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆ:

ಧಾರವಾಡ, ಬೆಳಗಾವಿ ಭಾಗದಿಂದ ಪ್ರತಿನಿತ್ಯ ಇದೇ ಮಾರ್ಗವಾಗಿ ಕಾರವಾರಕ್ಕೆ ಹಾಲು, ತರಕಾರಿ, ಸೇರಿ ಅಗತ್ಯ ವಸ್ತುಗಳು ಬರುತ್ತಿದ್ದು ಇದೀಗ ರಸ್ತೆ ಸಂಪರ್ಕವಿಲ್ಲದೇ ಕಾರವಾರಕ್ಕೆ ಅಗತ್ಯ ವಸ್ತುಗಳ ಪೂರೈಕೆ ಮಾಡಲು ವಾಹನಗಳು ಸುತ್ತು ಹಾಕಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವಾಹನಗಳು ಬರುವುದನ್ನೇ ನಿಲ್ಲಿಸಿವೆ.

ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ:

ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಿದರೆ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಬೆಳಗಾವಿಯಲ್ಲಿ ಆರ್ಮಿ ಟೀಮ್ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದವರ ನೆರವಿಗೆ ಕೆಲಸ ಮಾಡುತ್ತಿದೆ. ಈ ಕಾರ್ಯಾಚರಣೆ ಮುಗಿದ ನಂತರ ಉತ್ತರ ಕನ್ನಡ ಜಿಲ್ಲೆಗೆ ಬರುತ್ತಾರೆ, ಆಗ ಸರಿಪಡಿಸುವ ಕಾರ್ಯಕ್ಕೆ ಮುಂದಾಗಲಿದ್ದೇವೆ ಎನ್ನುತ್ತಾರೆ.

ಪ್ರವಾಸೋದ್ಯಮದ ಮೇಲೂ ದೊಡ್ಡ ಹೊಡೆತ:

ಜೋಯಿಡಾ ಹಾಗೂ ದಾಂಡೇಲಿ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದ್ದು, ಕಾರವಾರಕ್ಕೆ ಬರುವ ಪ್ರವಾಸಿಗರು, ದಾಂಡೇಲಿ ಕಡೆ ತೆರಳಲು, ಅಲ್ಲದೇ ದಾಂಡೇಲಿಗೆ ಬಂದ ಪ್ರವಾಸಿಗರು ಕರಾವಳಿ ಕಡೆ ಬರಲು ಇದೇ ರಸ್ತೆ ಪ್ರಮುಖ ರಸ್ತೆಯಾಗಿದ್ದು, ಸದ್ಯ ರಸ್ತೆ ಸಂಪರ್ಕ ಕಡಿತವಾಗಿದ್ದರಿಂದ ಪ್ರವಾಸೋದ್ಯಮದ ಮೇಲೂ ದೊಡ್ಡ ಹೊಡೆತ ಬಿದ್ದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.