ETV Bharat / state

ಸೋಂಕಿತರ ಸಂಖ್ಯೆ ಹೆಚ್ಚಳ.. ಉತ್ತರಕನ್ನಡ ಜಿಲ್ಲಾಡಳಿತದ ಮುಂದಿದೆ ದೊಡ್ಡ ಸವಾಲು!

author img

By

Published : May 4, 2021, 10:02 PM IST

Updated : May 4, 2021, 10:48 PM IST

Corona
Corona

ಜಿಲ್ಲೆಯಲ್ಲಿ ಇರುವ ಏಕೈಕ ಮೆಡಿಕಲ್ ಕಾಲೇಜಿನ ಅತಿ ದೊಡ್ಡ ಕೋವಿಡ್ ಆಸ್ಪತ್ರೆ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಅಲ್ಲದೆ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ಅಥವಾ ಸರ್ಕಾರಿ ದೊಡ್ಡ ಮಟ್ಟದ ಆಸ್ಪತ್ರೆಗಳು ಹೆಚ್ಚಿನ ಕೋವಿಡ್ ಚಿಕಿತ್ಸೆಗೆ ಇಲ್ಲದಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ..

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಸೋಂಕಿನಿಂದ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಇರುವ ಒಂದು ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡ್ ಬಹುತೇಕ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಮತ್ತೆ ದಾಖಲಾಗುವ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು, ನರ್ಸ್ ಹಾಗೂ ತಾಂತ್ರಿಕ ಸಿಬ್ಬಂದಿ ನಿಯೋಜನೆ ಇದೀಗ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ.

ರಾಜ್ಯದಲ್ಲಿಯೇ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಉತ್ತರಕನ್ನಡದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದೆ.

ನಿತ್ಯ 800ಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದು, ಜಿಲ್ಲೆಯಲ್ಲಿ ಇರುವ ಏಕೈಕ ಮೆಡಿಕಲ್ ಕಾಲೇಜಿನ ಅತಿ ದೊಡ್ಡ ಕೋವಿಡ್ ಆಸ್ಪತ್ರೆ ಭರ್ತಿಯಾಗುವ ಹಂತಕ್ಕೆ ತಲುಪಿದೆ.

ಅಲ್ಲದೆ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ಅಥವಾ ಸರ್ಕಾರಿ ದೊಡ್ಡ ಮಟ್ಟದ ಆಸ್ಪತ್ರೆಗಳು ಹೆಚ್ಚಿನ ಕೋವಿಡ್ ಚಿಕಿತ್ಸೆಗೆ ಇಲ್ಲದಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಉತ್ತರಕನ್ನಡ ಜಿಲ್ಲಾಡಳಿತದ ಮುಂದಿದೆ ದೊಡ್ಡ ಸವಾಲು!

ಸದ್ಯ ಸೋಂಕಿಗೆ ತುತ್ತಾದವರ ಪೈಕಿ ಗಂಭೀರ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕರಿಗೆ ಹೋಂ ಐಸೋಲೇಷನ್ ಮೂಲಕವೇ ಚಿಕಿತ್ಸೆಗೆ ಸೂಚಿಸಲಾಗಿದೆ. ಸದ್ಯ 3,459 ಸಕ್ರಿಯ ಸೋಂಕಿತ ಪ್ರಕರಣಗಳಿವೆ.

ಅದರಲ್ಲಿ 3,009 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ 450 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 233 ಮಂದಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ಐಸಿಯು ಆಕ್ಸಿಜನ್ ಬೆಡ್ ಕೊರತೆ : ಜಿಲ್ಲೆಯಲ್ಲಿರುವ ಬೆಡ್‌ಗಳ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಸದ್ಯ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗಾಗಿ ಆಕ್ಸಿಜನ್ ಬೆಡ್ ಮತ್ತು ಸಾಮಾನ್ಯ ಬೆಡ್ ವ್ಯವಸ್ಥೆ ಇದೆ. ಆದರೆ, ಐಸಿಯು ಆಕ್ಸಿಜನ್ ಬೆಡ್ ಕೊರತೆ ಇದೆ.

ಉತ್ತರಕನ್ನಡ ಜಿಲ್ಲಾಡಳಿತದ ಮುಂದಿದೆ ದೊಡ್ಡ ಸವಾಲು!

ಜಿಲ್ಲೆಯ ಯಾವುದೇ ತಾಲೂಕಿನ ಕೋವಿಡ್ ವಾರ್ಡ್‌ಗಳಲ್ಲಿ ಐಸಿಯು ಆಕ್ಸಿಜನ್ ಬೆಡ್‌ನಲ್ಲಿ ಕೆಲಸ ಮಾಡಲು ವೈದ್ಯಕೀಯ ಸಿಬ್ಬಂದಿ ಇಲ್ಲ. ಕಾರವಾರದಲ್ಲಿ ಮಾತ್ರ ಈ ಸೌಲಭ್ಯ ಇರುವುದರಿಂದ ಗಂಭೀರ ಪ್ರಕರಣಗಳ ದಾಖಲಿಸಿ ಇದು ಕೂಡ ಭರ್ತಿಯಾಗುತ್ತಿದೆ.

ಆದರೆ, ಇದೀಗ ಅಂಕೋಲಾದಲ್ಲಿ ಕೂಡ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ತಾಲೂಕಾಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಬೆಡ್ ಬಳಕೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವೈದ್ಯರು ವೈದ್ಯಕೀಯ ಸಿಬ್ಬಂದಿ ಕೊರತೆ : ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಮೆಡಿಕಲ್ ಕಾಲೇಜು ಹೊರತುಪಡಿಸಿ ಎಲ್ಲಿಯೂ ತಜ್ಞ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ಇಲ್ಲದ ಕಾರಣ ಗಂಭೀರ ಪ್ರಕರಣಗಳನ್ನು ಮಾತ್ರ ಇಲ್ಲಿಗೆ ತರಲಾಗುತ್ತಿದೆ.

ಉಳಿದ ಕೋವಿಡ್ ಸೋಂಕಿತರಿಗೆ ಆಯಾ ತಾಲೂಕಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಕೊರತೆ ನೀಗಿಸುವ ಸಂಬಂಧ ಈಗಾಗಲೇ ತರಬೇತಿ ವೈದ್ಯರ ನೇಮಕಕ್ಕೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಕೊರೊನಾ ವಾರಿಯರ್ಸ್ ಗೂ ಸೋಂಕು! : ಜಿಲ್ಲೆಯ ಮೆಡಿಕಲ್ ಕಾಲೇಜು, ಕೋವಿಡ್ ಲ್ಯಾಬ್ ಸೇರಿದಂತೆ ತಾಂತ್ರಿಕ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.‌ ಆದರೂ ನಿತ್ಯ 1,700ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.

ಸದ್ಯ ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆ ಸ್ಥಿತಿಗತಿ ಬಗ್ಗೆ ತಿಳಿದು ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಕೋವಿಡ್ ವಾರ್ ರೂಮ್ ರಚಿಸಲಾಗುತ್ತಿದೆ.

ಹೋಂ ಐಸೋಲೇಷನನಲ್ಲಿರುವವರ ನೆರವಿಗೆ ಶಿಕ್ಷಕರು : ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಸಾಮಾನ್ಯ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.‌ ಇಂತವರಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್‌ ಸಿಇಒ ಅಧ್ಯಕ್ಷತೆಯಲ್ಲಿ ಶಿಕ್ಷಕರ ಕಮಿಟಿ ನೇಮಕವಾಗಿದೆ.

ಇವರು ಹೋಂ ಐಸೋಲೇಷನ್‌ನಲ್ಲಿರುವವರಿಂದ ಫೋನ್ ಮೂಲಕ ಮಾಹಿತಿ ಪಡೆದು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರ ಪಟ್ಟಿ ಸಿದ್ದಪಡಿಸಲಿದ್ದಾರೆ.

Last Updated :May 4, 2021, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.