ETV Bharat / state

ಪ್ರತ್ಯೇಕ ಕಾಮಗಾರಿ ಸೇರಿಸಿ ಪ್ಯಾಕೇಜ್: ಶಾಸಕಿ ವಿರುದ್ಧ ಸಿಡಿದ ಗುತ್ತಿಗೆದಾರರು

author img

By

Published : Jul 11, 2021, 7:17 AM IST

Updated : Jul 11, 2021, 10:26 AM IST

karwar
ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಸಿಡಿದ ಗುತ್ತಿಗೆದಾರರು

ಕಾರವಾರದಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಗುತ್ತಿಗೆದಾರರ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ. ಅನಧಿಕೃತವಾಗಿ ಪ್ರತ್ಯೇಕ ಕಾಮಗಾರಿಗಳನ್ನ ಒಗ್ಗೂಡಿಸಿ ಪ್ಯಾಕೇಜ್ ಮಾಡಲು ಶಾಸಕಿ ಮುಂದಾಗಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.

ಕಾರವಾರ: ಕಡಲ ನಗರಿ ಕಾರವಾರದಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಗುತ್ತಿಗೆದಾರರ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ. ಕೆಲ ದಿನದ ಹಿಂದೆ ಪರ್ಸಂಟೇಜ್ ಆರೋಪದ ಮೇಲೆ ಶಾಸಕಿ ಹೆಸರು ಉಲ್ಲೇಖಿಸಿ ಎಸಿಬಿಗೆ ದೂರು ನೀಡಲಾಗಿತ್ತು. ಇದೀಗ ಅನಧಿಕೃತವಾಗಿ ಶಾಸಕಿ ರೂಪಾಲಿ ನಾಯ್ಕ ಪ್ರತ್ಯೇಕ ಕಾಮಗಾರಿಗಳನ್ನ ಒಗ್ಗೂಡಿಸಿ ಪ್ಯಾಕೇಜ್ ಮಾಡಿ, ಒಬ್ಬನೇ ಗುತ್ತಿಗೆದಾರನಿಗೆ ಉಪಯೋಗ ಮಾಡಿಕೊಡಲು ಮುಂದಾಗಿದ್ದಾರೆ ಎಂದು ಗುತ್ತಿಗೆದಾರರು ಸಿಡಿದೆದ್ದಿದ್ದಾರೆ.

ಕಾರವಾರದಲ್ಲಿ ಕೆಲ ದಿನಗಳಿಂದ ಶಾಸಕಿ ಮೇಲಿನ ಭ್ರಷ್ಟಾಚಾರ ಆರೋಪ ಸಾಕಷ್ಟು ಸದ್ದು ಮಾಡುತ್ತಿದೆ. ಆಸ್ಪತ್ರೆ ನಿರ್ಮಾಣ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲು ತಡವಾಗುತ್ತಿದ್ದು, ಸ್ಥಳೀಯ ಜನಪ್ರತಿನಿಧಿಯೊಬ್ಬರ ಪರ್ಸಂಟೇಜ್ ಒತ್ತಡವೇ ಕಾರಣ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದು. ಈ ಬಗ್ಗೆ ಸ್ಥಳೀಯ ಸಂಘಟನೆ ಮುಂಖಡನೋರ್ವ ಶಾಸಕಿ ವಿರುದ್ಧ ಎಸಿಬಿಗೆ ದೂರನ್ನ ನೀಡಿದ್ದರು. ಇದೀಗ ಲೊಕೋಪಯೋಗಿ ಇಲಾಖೆಯ ಕಾಮಗಾರಿಯಲ್ಲಿ ಶಾಸಕಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ.

ಶಾಸಕಿ ರೂಪಾಲಿ ನಾಯ್ಕ ಪ್ರತ್ಯೇಕ ಕಾಮಗಾರಿಗಳನ್ನ ಒಟ್ಟುಗೂಡಿಸಿ ಪ್ಯಾಕೇಜ್ ಮಾಡಿ ಒಬ್ಬನೇ ಗುತ್ತಿಗೆದಾರನಿಗೆ ಕೊಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಪ್ರತ್ಯೇಕ ಕಾಮಗಾರಿಗಳನ್ನ ಒಂದು ಗೂಡಿಸುವ ಪದ್ಧತಿಯೇ ಇಲ್ಲ. ಅದು ಅನಧಿಕೃತ ಪದ್ಧತಿಯಾಗಿದ್ದು, ಓರ್ವ ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡಲು ಈ ಪ್ಯಾಕೇಜ್ ಪದ್ಧತಿಗೆ ರೂಪಾಲಿ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ.

ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಸಿಡಿದ ಗುತ್ತಿಗೆದಾರರು

ಶಾಸಕಿ ಮೇಲಿನ ಆರೋಪಕ್ಕೆ ಜಿಲ್ಲಾ ಬಿಜೆಪಿಯಿಂದ ವಿರೋಧ ವ್ಯಕ್ತಪಡಿಸಿದ್ದು, ಆರೋಪ ಮಾಡುವವರು ದಾಖಲೆಗಳನ್ನ ಇಟ್ಟು ಆರೋಪ ಮಾಡಲಿ. ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ಮಾಡಬಾರದು ಎಂದು ಕಿಡಿಕಾರಿದ್ದಾರೆ.

ಬಿಜೆಪಿಗರ ಆರೋಪಕ್ಕೆ ಗುತ್ತಿಗೆದಾರ ಸಂಘ ಸಹ ದಾಖಲೆ ಬಿಡುಗಡೆ ಮಾಡಿದೆ. ಶಾಸಕಿ ಪ್ಯಾಕೇಜ್ ಮಾಡುವಂತೆ ಲೊಕೋಪಯೋಗಿ ಇಲಾಖೆ ಇಂಜಿನಿಯರ್​ಗಳಿಗೆ ಬರೆದ ಪತ್ರವನ್ನು ಹಾಗೂ ಒಮ್ಮೆ ಇಂಜಿನಿಯರ್ ತಿರಸ್ಕಾರ ಮಾಡಿ ಅಂತಿಮವಾಗಿ ಒಪ್ಪಿಗೆ ನೀಡಿರುವ ದಾಖಲೆಯನ್ನ ಸಹ ನೀಡಲು ಮುಂದಾಗಿದ್ದಾರೆ. ಪ್ರತ್ಯೇಕ ಕಾಮಗಾರಿಗಳಿಗೆ ಟೆಂಡರ್ ಕರೆದಾಗ ಪ್ರತ್ಯೇಕ ಗುತ್ತಿಗೆದಾರರು ಕಾಮಗಾರಿಯನ್ನು ಗುತ್ತಿಗೆ ಪಡೆದು ಕೆಲಸ ಮಾಡುತ್ತಾನೆ. ಇದರಿಂದ ಹೆಚ್ಚಿನ ಟೆಂಡರ್ ಫೀಸ್ ಸರ್ಕಾರಕ್ಕೆ ಸಿಗಲಿದ್ದು, ಕಾಮಗಾರಿಯ ಗುಣಮಟ್ಟ ಸಹ ಚೆನ್ನಾಗಿರುತ್ತದೆ. ಆದರೆ ಒಬ್ಬನಿಗೆ ಗುತ್ತಿಗೆ ಕೊಡುವುದು ಹೇಗೆ ಸಾಧ್ಯ. ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರಕ್ಕೆ ಈ ಪ್ಯಾಕೇಜ್ ಪದ್ಧತಿ ಕಾರಣವಾಗಲಿದೆ ಎನ್ನುವುದು ಗುತ್ತಿಗೆದಾರ ಸಂಘದವರ ಅಭಿಪ್ರಾಯ.

ಸದ್ಯ ಅನಧಿಕೃತ ಪ್ಯಾಕೇಜ್ ಪದ್ಧತಿಯನ್ನು ರದ್ದು ಮಾಡುವಂತೆ ಗುತ್ತಿಗೆದಾರರ ಸಂಘ ಅಧಿಕಾರಿಗಳಿಗೆ ಮನವಿ ಮಾಡಿಕೊಟ್ಟಿದ್ದು, ಒಂದೊಮ್ಮೆ ಪ್ಯಾಕೇಜ್ ಪದ್ಧತಿಗೆ ಮುಂದಾದರೆ ಶಾಸಕಿ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಕಾರವಾರದಲ್ಲಿ ಇದೀಗ ಶಾಸಕಿ ಹಾಗೂ ಗುತ್ತಿಗೆದಾರರ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದ್ದು, ಪ್ರಕರಣಕ್ಕೆ ರಾಜಕೀಯ ಬಣ್ಣ ತಗುಲಿದರೆ ಇನ್ನಷ್ಟು ದೊಡ್ಡದಾಗುವುದರಲ್ಲಿ ಅನುಮಾನವಿಲ್ಲ.

Last Updated :Jul 11, 2021, 10:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.