ETV Bharat / state

ಉತ್ತರಕನ್ನಡದಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್; ಜಿಲ್ಲಾಸ್ಪತ್ರೆಯಲ್ಲೇ 225ಕ್ಕೂ ಹೆಚ್ಚು ಕೇಸ್​ ಪತ್ತೆ

author img

By ETV Bharat Karnataka Team

Published : Dec 10, 2023, 3:52 PM IST

Updated : Dec 10, 2023, 4:08 PM IST

ಕಾರವಾರ
ಕಾರವಾರ

ಕಳೆದ ಜನವರಿಯಿಂದ ಇಲ್ಲಿಯವರೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಯೊಂದರಲ್ಲಿಯೇ ಸುಮಾರು 225ಕ್ಕೂ ಅಧಿಕ ಕ್ಯಾನ್ಸರ್​ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಲಕರ್

ಕಾರವಾರ (ಉತ್ತರ ಕನ್ನಡ) : ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ದಶಕಗಳಿಂದ ಕೂಗು ಕೇಳಿ ಬರುತ್ತಲೇ ಇದೆ. ಆದರೆ ಈವರೆಗೂ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಆಸ್ಪತ್ರೆಗಳಿಲ್ಲ. ಇದರ ನಡುವೆ ಮಾರಕ ಕ್ಯಾನ್ಸರ್ ರೋಗ ಜಿಲ್ಲೆಯಲ್ಲಿ ಸದ್ದಿಲ್ಲದೇ ಹೆಚ್ಚುತ್ತಿದೆ. ಕಳೆದ ಜನವರಿಯಿಂದ ಈವರೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಯೊಂದರಲ್ಲಿಯೇ ಸುಮಾರು 225ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಪ್ರತಿ ತಿಂಗಳು ಕ್ಯಾನ್ಸರ್​ಗೆ ತುತ್ತಾಗುವವರ ಸಂಖ್ಯೆ ಏರುತ್ತಲೇ ಇದೆ.

ಹೌದು, ಕ್ಯಾನ್ಸರ್ ಮಾರಕ ಕಾಯಿಲೆ ಎಂದೇ ಹೇಳಲಾಗುತ್ತದೆ. ಒಮ್ಮೆ ಕ್ಯಾನ್ಸರ್​ಗೆ ತುತ್ತಾದರೆ ಯಾವುದೇ ರೋಗಿ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಸಾವು ಸಂಭವಿಸುವುದೇ ಹೆಚ್ಚು. ಇಂತಹ ಮಾರಕ ಕಾಯಿಲೆ ಸದ್ಯ ಜಿಲ್ಲೆಯಲ್ಲಿ ಪ್ರತಿ ತಿಂಗಳು ಏರುತ್ತಲೇ ಇದ್ದು, ಇದಕ್ಕೆ ಕಾರಣ ಏನು? ಅನ್ನುವುದು ಮಾತ್ರ ನಿಗೂಢವಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆಂದು ಬಂದು ಪರೀಕ್ಷೆಗೊಳಪಟ್ಟು ಕ್ಯಾನ್ಸರ್ ಎಂದು ದೃಢಪಟ್ಟವರ ಸಂಖ್ಯೆ ಕಳೆದ ಜನವರಿಯಿಂದ ಈವರೆಗೆ 225ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಕಳೆದ ಜನವರಿಯಲ್ಲಿ 24 ಪ್ರಕರಣ ಪತ್ತೆಯಾದರೆ, ಫೆಬ್ರವರಿಯಲ್ಲಿ 48, ಮಾರ್ಚ್​ನಲ್ಲಿ 17, ಏಪ್ರಿಲ್​ನಲ್ಲಿ 17, ಮೇ ನಲ್ಲಿ 25, ಜೂನ್​ನಲ್ಲಿ 25, ಜುಲೈನಲ್ಲಿ 18, ಆಗಸ್ಟ್​ನಲ್ಲಿ 20, ಸೆಪ್ಟೆಂಬರ್​ನಲ್ಲಿ 25, ಅಕ್ಟೋಬರ್​ನಲ್ಲಿ 11 ಹಾಗೂ ನವೆಂಬರ್​ನಲ್ಲಿ 17 ಕೇಸ್​ಗಳು ಪತ್ತೆಯಾಗಿವೆ.

ಈ ಪೈಕಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಜನವರಿಯಿಂದ ಸುಮಾರು 55 ಪ್ರಕರಣ ಬ್ರೆಸ್ಟ್ ಕ್ಯಾನ್ಸರ್ ಎಂದು ದೃಢಪಟ್ಟಿದ್ದು, ಇದರೊಟ್ಟಿಗೆ ತಂಬಾಕು ಸೇವನೆ, ಇನ್ನಿತರ ಕಾರಣದಿಂದ ಕೆಲವರಿಗೆ ಕ್ಯಾನ್ಸರ್ ವಕ್ಕರಿಸಿದೆ.

ಜಿಲ್ಲೆಯಲ್ಲಿ ಕ್ಯಾನ್ಸರ್ ಸಂಖ್ಯೆ ಕಳೆದ ನಾಲ್ಕೈದು ವರ್ಷದಲ್ಲಿ ನೋಡಿದರೆ ಪ್ರತಿ ವರ್ಷ ಏರುತ್ತಲೇ ಇದೆ. ಇದಕ್ಕೆ ಕಾರಣ ಏನೆಂಬುದು ಮಾತ್ರ ನಿಗೂಢವಾಗಿದೆ. ಯಲ್ಲಾಪುರ, ಶಿರಸಿ, ಸಿದ್ದಾಪುರ, ಅಂಕೋಲಾದ ಅಚವೆ, ಅಗಸೂರು ಭಾಗದಲ್ಲಿ ಹಾಗೂ ಕಾರವಾರ ತಾಲೂಕಿನ ಕದ್ರಾ ಸುತ್ತಮುತ್ತಲಿನ ಭಾಗದಲ್ಲಿ ಕ್ಯಾನ್ಸರ್ ಸಂಖ್ಯೆ ಪತ್ತೆಯಾಗಿದೆ. ಇದಕ್ಕೆ ಕಾರಣ ತಿಳಿಯುವ ಕೆಲಸವನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡುತ್ತಿದೆ.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಪ್ರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಸದ್ಯ ಇನ್ನೂ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಎರಡು ವರ್ಷಗಳ ನಂತರವೇ ಈ ಚಿಕಿತ್ಸೆ ಪ್ರಾರಂಭವಾಗುವ ಸಾಧ್ಯತೆ ಇದೆ. ಸದ್ಯ ಕ್ಯಾನ್ಸರ್ ಪತ್ತೆಯಾದವರು ಬೇರೆ ಜಿಲ್ಲೆಗಳಲ್ಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಎದುರಾಗಿದ್ದು, ಜಿಲ್ಲೆಯಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿರುವುದನ್ನ ಗಂಭೀರವಾಗಿ ತೆಗೆದುಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞರ ನೇಮಕ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಅನುವಂಶೀಯ ಕಾರಣ : ಜಿಲ್ಲೆಯಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ವಿಕಿರಣ, ತಂಬಾಕು ಸೇವನೆ, ಆಹಾರ ಪದ್ಧತಿ ಜೊತೆಗೆ ಅನುವಂಶೀಯ ಕಾರಣ ಇರಬಹುದು. ಕ್ಯಾನ್ಸರ್ ಒಮ್ಮೆಲೇ ಬರುವ ಕಾಯಿಲೆಯಲ್ಲ. ದೇಹದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ಬಗ್ಗೆ ಜನರಿಗೆ ಮುಂಜಾಗ್ರತೆ ಇದ್ದರೆ ಹೋರಾಟ ಮಾಡಿ ಕ್ಯಾನ್ಸರ್ ಗೆದ್ದು ಬರಬಹುದು ಎನ್ನುವುದು ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಲಕರ್ ಅಭಿಪ್ರಾಯ.

ಶೀಘ್ರದಲ್ಲೇ ಆಸ್ಪತ್ರೆ ನಿರ್ಮಾಣ: ಕ್ಯಾನ್ಸರ್ ಎಂದು ಪತ್ತೆಯಾದರೆ ನುರಿತ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯಬೇಕು. ದೇಹದಲ್ಲಿ ಬದಲಾವಣೆಗಳಾಗುತ್ತಿದ್ದರೂ ನಿರ್ಲಕ್ಷ್ಯ ತೋರಬಾರದು. ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ನೂತನ ಕಟ್ಟಡದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಆಸ್ಪತ್ರೆ ನಿರ್ಮಾಣವಾಗಲಿದೆ ಎನ್ನುತ್ತಾರೆ ಶಿವಾನಂದ ಕುಡ್ತಲಕರ್.

500ಕ್ಕೂ ಅಧಿಕ ಪ್ರಕರಣ ಪತ್ತೆ: ಕೇವಲ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣವೇ 225ಕ್ಕೂ ಅಧಿಕವಾಗಿದ್ದು, ಖಾಸಗಿ ಆಸ್ಪತ್ರೆ, ಮೃತಪಟ್ಟ ಪ್ರಕರಣಗಳನ್ನು ಕ್ರೋಢೀಕರಿಸಿದರೆ ಜಿಲ್ಲೆಯಲ್ಲಿ ವರ್ಷಕ್ಕೆ 500ಕ್ಕೂ ಅಧಿಕ ಪ್ರಕರಣ ಪತ್ತೆಯಾಗಿರುವ ಶಂಕೆ ಇದೆ. ಕ್ಯಾನ್ಸರ್ ನಿಂದ ಚಿಕಿತ್ಸೆ ಸಿಗದೇ ಮನೆಯಲ್ಲಿಯೇ ಹಲವರು ಮೃತಪಟ್ಟರೆ, ಇನ್ನೂ ಹಲವರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿ ಕ್ಯಾನ್ಸರ್ ದೃಢಪಟ್ಟರೇ ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತವರ ಲೆಕ್ಕ ಸರ್ಕಾರದ ಬಳಿಯೂ ಸಿಗುತ್ತಿಲ್ಲ. ಸದ್ಯ ಜಿಲ್ಲೆಯಲ್ಲಿ ಈ ಸಂಖ್ಯೆ 500 ದಾಟಿರಬಹುದು, ಕ್ಯಾನ್ಸರ್ ಹೆಚ್ಚಳಕ್ಕೆ ನಿಖರ ಕಾರಣ ಕಂಡು ಹಿಡಿದು ಪರಿಹಾರ ತಿಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಇದನ್ನೂ ಓದಿ: ಕಾರವಾರದ ಜಿಲ್ಲಾಸ್ಪತ್ರೆ ಸೂಪರ್ ಸ್ಪೆಷಾಲಿಟಿಯಾಗಿ ಮೇಲ್ದರ್ಜೆಗೆ : ಸಚಿವ ಶರಣಪ್ರಕಾಶ ಪಾಟೀಲ್

Last Updated :Dec 10, 2023, 4:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.