ETV Bharat / state

SSLC ಪರೀಕ್ಷೆ: ಗಡಿದಾಟಿ ಬರಲಿರುವ 67 ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ

author img

By

Published : Jul 19, 2021, 9:20 AM IST

SSLC
SSLC ಪರೀಕ್ಷೆ

ಗೋವಾದಲ್ಲಿ ಕನ್ನಡ ವ್ಯಾಸಂಗ ಮಾಡುತ್ತಿರುವ ಎಸ್ಎಸ್ಎಲ್​ಸಿಯ ಒಟ್ಟು 67 ವಿದ್ಯಾರ್ಥಿಗಳು ಕೂಡ ರಾಜ್ಯಕ್ಕೆ ಬಂದು ಇಂದು SSLC ಪರೀಕ್ಷೆ ಬರೆಯಲಿದ್ದಾರೆ. ಈ ಹಿನ್ನೆಲೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ.

ಕಾರವಾರ: ಕೋವಿಡ್ ಮುನ್ನೆಚ್ಚರಿಕೆ ಕ್ರಮದೊಂದಿಗೆ SSLC ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಕೇವಲ ಎರಡು ದಿನ ಮಾತ್ರ ನಡೆಯುವ ಈ ಹೊಸ ಮಾದರಿಯ ಪರೀಕ್ಷೆಗೆ ರಾಜ್ಯದ ವಿದ್ಯಾರ್ಥಿಗಳು ಮಾತ್ರವಲ್ಲದೇ ಗಡಿ ರಾಜ್ಯದ ವಿದ್ಯಾರ್ಥಿಗಳು ಕೂಡ ಹಾಜರಾಗುತ್ತಿದ್ದು, ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದೆ.

SSLC ವಿದ್ಯಾರ್ಥಿಗಳಿಗೆ ಮಾಡಿರುವ ವ್ಯವಸ್ಥೆ ಕುರಿತು ಮಾಹಿತಿ ನೀಡಿದ ಉಪ ನಿರ್ದೇಶಕ

ಕಳೆದ ಎರಡು ವರ್ಷದಿಂದ ಬಿಟ್ಟೂ ಬಿಡದೇ ಕಾಡುತ್ತಿರುವ ಕೊರೊನಾದಿಂದಾಗಿ ಆಟ ಪಾಠ ಯಾವುದು ಸರಿಯಾಗಿ ಇಲ್ಲದೇ ಮಕ್ಕಳ ಭವಿಷ್ಯ ಅಲ್ಲೋಲ ಕಲ್ಲೋಲವಾಗಿದೆ. ಆದರೆ, ಇದೀಗ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿಯಂತಿದ್ದ ಎಸ್ಎಸ್​​​ಎಲ್​​ಸಿ ಪರೀಕ್ಷೆಯನ್ನು ನಡೆಸಲು ಮುಂದಾಗಿರುವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮವಹಿಸಿ ರಾಜ್ಯಾದ್ಯಂತ ಇಂದು ಮತ್ತು ಜುಲೈ 22 ರಂದು ಪರೀಕ್ಷೆ ನಡೆಸಲು ಸಜ್ಜಾಗಿದೆ.

ಒಟ್ಟು ಆರು ವಿಷಯಗಳನ್ನು ಕೇವಲ ಎರಡು ಪತ್ರಿಕೆಗಳ ಮೂಲಕ ಹೊಸ ಮಾದರಿಯಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸುತ್ತಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 9,665 ಮಂದಿ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆ ಎದುರಿಸಲಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 10,100 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿಶೇಷ ಅಂದ್ರೆ, ಗೋವಾದಲ್ಲಿ ಕನ್ನಡ ವ್ಯಾಸಂಗ ಮಾಡುತ್ತಿರುವ ಎಸ್ಎಸ್ಎಲ್​ಸಿಯ ಒಟ್ಟು 67 ವಿದ್ಯಾರ್ಥಿಗಳು ಕೂಡ ರಾಜ್ಯಕ್ಕೆ ಬಂದು ಪರೀಕ್ಷೆ ಬರೆಯಲಿದ್ದಾರೆ.

ವಿದ್ಯಾರ್ಥಿಗಳು ಆರ್​ಟಿಪಿಸಿಆರ್ ಟೆಸ್ಟ್ ಮಾಡಿಸಿ, ಕಾರವಾರದ ಉಳಗಾ ಪ್ರೌಢ ಶಾಲೆಯಲ್ಲಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆ ಉಪ ನಿರ್ದೇಶಕರಾದ ಹರೀಶ್ ಮಾಹಿತಿ ನೀಡಿದ್ದಾರೆ.

ರಾಜ್ಯದಿಂದ ವಲಸೆ ಹೋದ ಕಾರ್ಮಿಕರ ಮಕ್ಕಳು ಅಲ್ಲಿಯೇ ಇರುವ ಹಲವು ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದೀಗ ಶಿಕ್ಷಣ ಇಲಾಖೆ ರಾಜ್ಯಕ್ಕೆ ಅವರನ್ನು ಕರೆತಂದು ಪರೀಕ್ಷೆ ಬರೆಸಲು ಕ್ರಮ ಕೈಗೊಂಡಿದೆ. ಕಳೆದ ಹಲವು ವರ್ಷಗಳಿಂದ ಅಲ್ಲಿಯೇ ಪರೀಕ್ಷಾ ಕೇಂದ್ರ ತೆರೆಯಲು ಒತ್ತಾಯಿಸಲಾಗುತ್ತಿದೆಯಾದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.

ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಗಮನ ಹರಿಸಿ ಅಲ್ಲಿಯೇ ಪರೀಕ್ಷಾ ಕೇಂದ್ರ ತೆರೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.