ETV Bharat / state

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಬಳಕೆ ನಿಷೇಧ: ತುಮಕೂರು ಡಿಸಿ ಆದೇಶ

author img

By

Published : May 1, 2021, 9:53 AM IST

Tumakur
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಬಳಕೆ ನಿಷೇಧ: ತುಮಕೂರು ಡಿಸಿ

ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಗೆ ವೈರಸ್​ಗಳು ದೇಹವನ್ನು ಪ್ರವೇಶಿಸುವ ಸಾಧ್ಯತೆಯಿದ್ದು, ಸೋಂಕು ದೇಹದ ಇತರೆ ಭಾಗಗಳಿಗೆ ಹರಡಿ ಶ್ವಾಸಕೋಶ, ಹೃದಯ ಸಂಬಂಧಿತ ಕಾಯಿಲೆಗಳು ಬರಬಹುದು. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಆದೇಶ ಹೊರಡಿಸಿದ್ದಾರೆ.

ತುಮಕೂರು: ಕೋವಿಡ್​ ಸೋಂಕು ವ್ಯಾಪಕವಾಗಿ ಉಲ್ಬಣವಾಗುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಆದೇಶಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್​ ಮಸಾಲ (ಬೀಡಿ, ಸಿಗರೇಟ್) ಜರ್ದಾ, ಖೈನಿ ಇತ್ಯಾದಿ ಬಳಕೆ (ಜಗಿದು)ಮಾಡಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ಸಾಂಕ್ರಾಮಿಕ ರೋಗಗಳಾದ ಕ್ಷಯ, ನ್ಯುಮೋನಿಯ ಮತ್ತು ಕೋವಿಡ್-19 ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಕಾರಣವಾಗಬಹುದು. ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಗೆ ವೈರಸ್​ಗಳು ದೇಹವನ್ನು ಪ್ರವೇಶಿಸುವ ಸಾಧ್ಯತೆಯಿದ್ದು, ಸೋಂಕು ದೇಹದ ಇತರೆ ಭಾಗಗಳಿಗೆ ಹರಡಿ ಶ್ವಾಸಕೋಶ, ಹೃದಯ ಸಂಬಂಧಿತ ಕಾಯಿಲೆಗಳು ಬರಬಹುದು. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಬಳಕೆಯನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದಾರೆ.

ತಿಪಟೂರಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಸೋಂಕಿನ ಲಕ್ಷಣವಿರುವವರನ್ನು ಕೋವಿಡ್ ಪರೀಕ್ಷೆಗೊಳಪಡುವಂತೆ ಅರಿವು ಮೂಡಿಸಬೇಕು. ಪಾಸಿಟಿವ್ ಬಂದ ಸೋಂಕಿತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಬೇಕು ಎಂದು ಸೂಚಿಸಿದರು.

ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಆರ್​ಟಿಪಿಸಿಆರ್ ಅಥವಾ ರ್ಯಾಟ್(ಖಂಖಿ) ಪರೀಕ್ಷೆ ಮಾಡಿಸಬೇಕು. ಇಲ್ಲವೇ ಗ್ರಾಮ ಪಂಚಾಯತ್ ಪಿಡಿಒಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಕೋವಿಡ್ ನಿಯಂತ್ರಣದ ಹಿನ್ನೆಲೆ ಸರ್ಕಾರ ಜಾರಿಗೊಳಿಸಿರುವ ಕಫ್ರ್ಯೂ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾರು ಅನಗತ್ಯವಾಗಿ ಹೊರಗಡೆ ತಿರುಗಾಡಬಾರದು.

ಕೋವಿಡ್-19 ಚಿಕಿತ್ಸೆಗಾಗಿ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯದಲ್ಲಿ ಸಮಸ್ಯೆಯಿರುವ ಸೋಂಕಿತರು ಮೊದಲು ತಾಲೂಕು ಆಸ್ಪತ್ರೆಗಳಿಗೆ ದಾಖಲಾಗಬೇಕು. ಅಲ್ಲಿ ಸೂಚಿಸಿದರಷ್ಟೇ ಜಿಲ್ಲಾ ಕೇಂದ್ರ ಆಸ್ಪತ್ರೆಗಳಿಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಪ್ರತಿ ಗ್ರಾಮ ಮಟ್ಟದ ಕಾರ್ಯಪಡೆ ಬೆಂಗಳೂರಿನಿಂದ ಗ್ರಾಮಗಳಿಗೆ ಆಗಮಿಸುವವರ ಮೇಲೆ ನಿಗಾವಹಿಸಬೇಕು. ಗ್ರಾಮಕ್ಕೆ ಬಂದವರನ್ನು ಹೋಂ ಐಸೋಲೇಷನ್​ಲ್ಲಿಡಲು ಮತ್ತು ಅವರಲ್ಲಿ ಲಕ್ಷಣಗಳು ಕಂಡು ಬಂದರೆ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಬೆಂಗಳೂರಿನಿಂದ ಬರುವವರ ಸಂಪರ್ಕಕ್ಕೆ ಬರಬಾರದು. ಈ ಬಗ್ಗೆ ಜಾಗೃತರಾಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.