ETV Bharat / state

ಜೆಡಿಎಸ್ 20 ಸ್ಥಾನ ಸಹ ಗೆಲ್ಲುವುದಿಲ್ಲ ಎನ್ನುವ ಭಯ ಕುಮಾರಸ್ವಾಮಿಗೆ ಕಾಡುತ್ತಿದೆ: ನಳಿನ್ ಕುಮಾರ್ ಕಟೀಲ್

author img

By

Published : Feb 5, 2023, 8:13 PM IST

ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ - ಪಂಚರತ್ನ ಈಗ ಪಂಕ್ಚರ್ ಆಗಿದೆ, ಪ್ರಜಾಧ್ವನಿ ಬಸ್​ ಬ್ರೇಕ್ ಫೆಲ್ಯೂರ್ ಆಗ್ತಿದೆ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ENalin Kumar Kateel reaction hd kumaraswamy
ಜೆಡಿಎಸ್ 20 ಸ್ಥಾನವು ಗೆಲ್ಲುವುದಿಲ್ಲ ಎನ್ನುವ ಭಯ ಕುಮಾರಸ್ವಾಮಿಯವರಿಗೆ ಕಾಡುತ್ತಿದೆ:ನಳಿನ್ ಕುಮಾರ್ ಕಟೀಲ್

ಜೆಡಿಎಸ್ 20 ಸ್ಥಾನ ಸಹ ಗೆಲ್ಲುವುದಿಲ್ಲ ಎನ್ನುವ ಭಯ ಕುಮಾರಸ್ವಾಮಿಗೆ ಕಾಡುತ್ತಿದೆ: ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 20 ಸ್ಥಾನವನ್ನು ಸಹ ಗೆಲ್ಲುವುದಿಲ್ಲ ಎನ್ನುವ ಭಯ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರಿಗೆ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್​ಡಿಕೆಗೆ ಚುನಾವಣೆಯ ಬಗ್ಗೆ ಹಲವು ಭ್ರಾಂತಿಗಳು ಕಾಡುತ್ತಿವೆ ಎಂದರು.

9 ಜನ ಉಪ ಮುಖ್ಯಮಂತ್ರಿಗಳು ಆಗುತ್ತಾರೆ ಎನ್ನುವ ಹೇಳಿಕೆ ಕುರಿತು ಮಾತನಾಡಿದ ಪ್ರತಿಕ್ರಿಯಿಸಿದ ಕಟೀಲ್​ ಅವರು, ಕುಮಾರಸ್ವಾಮಿ ಅವರ ಮನೆ ನೋಡಿ ಹೇಳಿರಬಹುದು. ಯಾಕೆಂದರೆ ಅವರು ಅದೇ ರಾಜಕಾರಣ ಮಾಡಿಕೊಂಡು ಬಂದವರು. ಒಂದು ಕುಟುಂಬ ರಾಜಕಾರಣ, ಇನ್ನೊಂದು ಒಡೆದಾಳುವ ರಾಜಕಾರಣ. ಹಾಗಾಗಿ ಅವರು ಉಲ್ಲೇಖ ಮಾಡಿರಬಹುದು ಎಂದು ಟಾಂಗ್ ನೀಡಿದರು. ಸಮುದಾಯಗಳ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಆಗಿರುವವರು ಅವರು ರಾಜ್ಯದ ಎಲ್ಲಾ ಸಮುದಾಯಗಳ ಬಗ್ಗೆ ಗೌರವ ಕೊಡಬೇಕು. ಈ ರೀತಿಯ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೇನು ಎಂದು ತಿಳಿಯಲು, ಅದರ ಒಳಗೆ ಬಂದು ಅಧ್ಯಯನ ಮಾಡುವುದು ಒಳ್ಳೆಯದು. ಈ ರೀತಿ ಹೇಳಿಕೆ ಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಕುಮಾರಣ್ಣನ ಹೇಳಿಕೆ ಇದೇನು ಮೊದಲಲ್ಲ, ಈ ಹಿಂದೆ ಸಹ ಸುಮಾರು ಹೇಳಿಕೆಗಳನ್ನು ನೀಡಿದ್ದಾರೆ. ಈ ಹೇಳಿಕೆ ಅವರು ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭೀತಿಯಿಂದ ಹೇಳುವ ಮಾತುಗಳು ಎಂದರು. ಡಿಕೆ ಶಿವಕುಮಾರ್​ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲಾ ಎಂದಿರುವ ಡಿ ಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಹೌದು ಖಂಡಿತ ಹೇಳಿಕೆ ಕೊಡುವ ನೈತಿಕತೆ ನಮಗಿಲ್ಲ. ಯಾಕೆಂದರೆ ನಮ್ಮಲ್ಲಿ ತಿಹಾರ್ ಜೈಲಿಗೆ ಹೋಗಿ ಬಂದವರಿಲ್ಲ ಎಂದು ಕಟೀಲ್​ ಟಾಂಗ್ ನೀಡಿದರು.

ಪಂಚರತ್ನ ಈಗ ಪಂಕ್ಚರ್ ಆಗಿದೆ: ಇದಕ್ಕೂ ಮೊದಲು ನಗರದ ಎನ್ಇಎಸ್ ಮೈದಾನದಲ್ಲಿ ನಡೆದ ರಾಜ್ಯದ ಮೊದಲ ಪೇಜ್ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕಟೀಲ್​, ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಕಾವಿನ ನಡುವಿನ ಪಂಚರತ್ನ, ಪ್ರಜಾ ಧ್ವನಿ ರಾಜ್ಯದಲ್ಲಿ ನಡೆಯುತ್ತಿದೆ. ಪಂಚರತ್ನ ಈಗ ಪಂಕ್ಚರ್​ ಆಗಿದೆ. ಪ್ರಜಾಧ್ವನಿ ಬಸ್​ ಬ್ರೇಕ್ ಫೆಲ್ಯೂರ್ ಆಗ್ತಿದೆ. ಆದರೆ ಬಿಜೆಪಿ ಸಂಕಲ್ಪ ಯಾತ್ರೆ ಮಾತ್ರ ನಿರಂತರವಾಗಿ ಮುಂದುವರಿಯುತ್ತೆ ಎಂದರು.

ಬೂತ್ ಗೆದ್ದರೇ, ದೇಶವನ್ನು ಗೆಲ್ಲಬಹುದು. ಹೀಗಾಗಿ ಬೂತ್ ಗೆಲ್ಲಬೇಕು. ಶಿವಮೊಗ್ಗದಿಂದಲೇ ಬಿಜೆಪಿ ಪ್ರಮುಖರ ಸಮಾವೇಶ ಆರಂಭವಾಗಿದೆ. ಶಕ್ತಿ ಕೇಂದ್ರವಾದ ಶಿವಮೊಗ್ಗದಿಂದಲೇ ಬಿಜೆಪಿಯ ವಿಜಯಯಾತ್ರೆ ಆರಂಭವಾಗಲಿದೆ. ನಾನು ಕರಾವಳಿಯಿಂದ ನಿಮಗೆ ಪ್ರೇರಣೆ ಕೊಡಲು ಬಂದಿಲ್ಲ. ಮಲೆನಾಡಿನಿಂದ ನಾನೇ ಕರಾವಳಿ ಹಾಗೂ ರಾಜ್ಯಕ್ಕೆ ಪ್ರೇರಣೆ ಪಡೆಯಲು ಬಂದಿದ್ದೇನೆ. ಆ ಮೂಲಕ ಬಿಜೆಪಿಯ ವಿಜಯ ಪತಾಕೆ ರಾಜ್ಯದಲ್ಲಿ ಹಾರಬೇಕು. ರಾಜ್ಯದಲ್ಲಿ ಇವತ್ತು ಕಾಂಗ್ರೆಸ್ ಎಲ್ಲಿದೆ, ಕಾಂಗ್ರೆಸ್ ಡಿ ಕೆ ಶಿವಕುಮಾರ್ ಮನೆ ಹಾಗೂ ಸಿದ್ದರಾಮಯ್ಯರ ಮನೆಯಲ್ಲಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಇವತ್ತು ಧ್ವನಿ ಇಲ್ಲ. ಹಾಗಾಗಿ ಪ್ರಜಾಧ್ವನಿ ಹಿಡಿದುಕೊಂಡು ಹೊರಟಿದ್ದಾರೆ ಎಂದು ಕಟೀಲ್​ ವ್ಯಂಗವಾಡಿದರು.

ನಂತರ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯದ 224 ಕ್ಷೇತ್ರದಲ್ಲಿ ಪೇಜ್ ಪ್ರಮುಖರ ಸಭೆ ನಡೆಯಲಿದೆ. ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕಾದರೆ ಪೇಜ್ ಪ್ರಮುಖರ ಪಾತ್ರ ಮುಖ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಬಿಎಸ್​ವೈ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಹಾಗಾಗೀ ಪೇಜ್ ಪ್ರಮುಖರು ಎರಡು ಸರ್ಕಾರದ ಸಾಧನೆಯನ್ನು ಮತದಾರರಿಗೆ ತಲುಪಿಸಲಿದ್ದಾರೆ. ರಾಜ್ಯದಲ್ಲಿ ಸಂಘಟನೆ ಇರೋ ಪಕ್ಷ ಬಿಜೆಪಿ ಮಾತ್ರ ಎಂದರು.

ನಮ್ಮ ಪಕ್ಷದ ಗೆಲುವು ನಿಶ್ಚಿತ: ಸಂಘಟನೆಯ ಹುಲಿ ನಳಿನ್ ಕುಮಾರ್ ನೇತೃತ್ವದಲ್ಲಿ ಪಕ್ಷ ಸಂಘಟನೆಯಾಗುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್ ಯಾತ್ರೆ ಮಾಡುತ್ತಿದ್ದಾರೆ. ಅವರು ಮಾಡಲಿ, ಆದರೆ ನಮ್ಮ ಪಕ್ಷದ ಗೆಲುವು ನಿಶ್ಚಿತ. ಅಭಿವೃದ್ಧಿ, ಸಂಘಟನೆ ಮತ್ತು ನೇತೃತ್ವ ನಮ್ಮ ಪಕ್ಷದ ವಿಶೇಷತೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತಿದ್ದಾರೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ನೇತೃತ್ವದಲ್ಲಿ ಚುನಾವಣೆ ಗೆಲ್ಲುತ್ತಾ ಬಂದಿದ್ದೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಮ್ಮ ಪ್ರಧಾನಿ ಹಾಗೂ ಸಿಎಂ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಏಕೆಂದರೆ ಅವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡಲು ವಿಷಯವೇ ಇಲ್ಲ. ಹಾಗಾಗಿ 150 ಸ್ಥಾನ ಪಡೆದು ವಿಧಾನಸೌಧದಲ್ಲಿ ಅಧಿಕಾರ ಹಿಡಿಯಲಿದ್ದೇವೆ. ಶಿವಮೊಗ್ಗ ನಗರದಲ್ಲಿ ಕನಿಷ್ಠ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪ್ರಹ್ಲಾದ್ ಜೋಶಿ ನಮ್ಮ ಬ್ರಾಹ್ಮಣರಲ್ಲ, ಅವರನ್ನು ಮುಂದಿನ‌ ಸಿಎಂ ಮಾಡಲು ಆರ್​ಎಸ್ಎಸ್ ನಿರ್ಧರಿಸಿದೆ: ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.