ETV Bharat / state

ಪ್ರತಿ ಮನೆಯಲ್ಲೂ ಜ್ಯೋತಿ ಬೆಳಗಲಿ ಎಂದು ಗೃಹ ಜ್ಯೋತಿ ಯೋಜನೆ ಜಾರಿ: ಸಚಿವ ಮಧು ಬಂಗಾರಪ್ಪ

author img

By

Published : Aug 5, 2023, 8:24 PM IST

Updated : Aug 5, 2023, 10:08 PM IST

ನಿಮ್ಮಿಂದ ಮತವನ್ನು ಪಡೆದು ಈಗ ನಿಮಗೆ ಯೋಜನೆಗಳ ಮೂಲಕ ನಮ್ಮ‌ ಕರ್ತವ್ಯವನ್ನು ಮಾಡುತ್ತಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

minister-madhu-bangarappa-reaction-on-congress-guarantees
ಆರ್ಥಿಕವಾಗಿ ಸಂಕಷ್ಟದಲ್ಲಿವವರು ಮನೆ ನಿಭಾಯಿಸಲು ಮಹಿಳೆಯರಿಗೆ ಗೃಹ ಲಕ್ಷ್ಮಿ ನೀಡಲಾಗುತ್ತಿದೆ: ಮಧು ಬಂಗಾರಪ್ಪ

ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಪ್ರತಿ ಮನೆಯಲ್ಲೂ ಜ್ಯೋತಿ ಇರಬೇಕೆಂದು ಗೃಹ ಜ್ಯೋತಿ ಯೋಜನೆ ಜಾರಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗ ತಾಲೂಕಿನ ಸಂತೆಕಡೂರು ಗ್ರಾಮದಲ್ಲಿ 58 ಲಕ್ಷ ರೂ. ವೆಚ್ಚದಲ್ಲಿ‌ ನಿರ್ಮಾಣವಾಗಿರುವ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಗೃಹ ಜ್ಯೋತಿ ಫಲಾನುಭವಿಗಳಿಗೆ ಪತ್ರ ವಿತರಣೆ ಮಾಡಿ‌ ಮಾತನಾಡಿದ ಅವರು, ಈಗ ನಮ್ಮ ಸರ್ಕಾರ ಗೃಹ ಜ್ಯೋತಿ ನೀಡಿದಂತೆ, ನಮ್ಮ ತಂದೆ ಎಸ್​ ಬಂಗಾರಪ್ಪ ಅವರು ರೈತರ ಪಂಪ್ ಸೆಟ್​ಗೆ ಉಚಿತವಾಗಿ 10 ಹೆಚ್​ಪಿ ಮೋಟಾರ್​ಗೆ ವಿದ್ಯುತ್ ನೀಡಿದ್ದರು‌ ಎಂದು ನೆನಪಿಸಿಕೊಂಡರು.

ನಿಮ್ಮಿಂದ ಮತವನ್ನು ಪಡೆದು ಈಗ ನಿಮಗೆ ಯೋಜನೆಗಳ ಮೂಲಕ ನಮ್ಮ‌ ಕರ್ತವ್ಯವನ್ನು ಮಾಡುತ್ತಿದ್ದೇವೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ನಿಮಗೆ ಪ್ರಾರಂಭದಲ್ಲಿ ತೊಂದರೆಯಾಗಿರಬಹುದು. ಮುಂದೆ ಹೆಚ್ಚಿನ ಬಸ್ ಬಿಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿ ಮನೆಯಲ್ಲೂ ಜ್ಯೋತಿ ಇರಬೇಕೆಂದು ಗೃಹ ಜ್ಯೋತಿ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಯಡಿ ಕೋಟ್ಯಂತರ ಜನರು ಉಪಯೋಗ ಪಡೆಯುತ್ತಿದ್ದಾರೆ ಎಂದರು.

ಬಡವರ ಮನೆಯಲ್ಲೂ ಬೆಳಕಿರಬೇಕು ಎಂದು ಯೋಜನೆ ಜಾರಿ ಮಾಡಲಾಗಿದೆ. ಯಾರು ಉಚಿತ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವೋ ಅವರು ಬೇಗ ಅರ್ಜಿ ಹಾಕುವಂತೆ ಸಚಿವರು ಮನವಿ ಮಾಡಿದರು. ಗ್ಯಾಸ್ ಸಿಲಿಂಡರ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಇದು ತೊಂದರೆಯಾಗಿ ಪರಿಣಮಿಸಿದೆ. ಹೀಗಾಗಿ ಮನೆ ನಿಭಾಯಿಸುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ನೆರವು ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯಾದ್ಯಂತ ಓಡಾಡಬೇಕು. ಹೆಣ್ಣು ಮಕ್ಕಳ ಪಾದದ ಧೂಳಿನಿಂದ ರಾಜ್ಯ ಅಭಿವೃದ್ಧಿಯಾಗಬೇಕು ಎಂಬ ಕನಸನ್ನು ಸಿಎಂ ಸಿದ್ದರಾಮಯ್ಯ ಕಟ್ಟಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ 3.96 ಲಕ್ಷ ಜನ ಅರ್ಜಿ ಹಾಕಿದ್ದಾರೆ. ಯಾರು ಯೋಜನೆಗೆ ಅರ್ಜಿ ಹಾಕಿಲ್ಲ ಅವರಿಗೆ ಅರ್ಜಿ ಹಾಕಲು ತಿಳಿಸಿ ಎಂದು ಮಹಿಳೆಯರಿಗೆ ಮನವಿ ಮಾಡಿದರು. ಆಗಸ್ಟ್ 15ರ ಒಳಗೆ ಜಿಲ್ಲೆಯಲ್ಲಿ ಶೇ 100 ರಷ್ಟು ಮಹಿಳೆಯರು ಅರ್ಜಿ ಹಾಕಿಸುವಂತಹ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದ ಸಚಿವರು ಗ್ರಾಮ ಪಂಚಾಯಿತಿ ಕಟ್ಟಡವನ್ನು 58 ಲಕ್ಷ ರೂ. ನಲ್ಲಿ ನಿರ್ಮಿಸಲಾಗಿದೆ. ಕಟ್ಟಡವು ಸುಂದರವಾಗಿದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾ ನಾಯ್ಕ, ತರೀಕೆರೆ ವಿಧಾನಸಭಾ ಕ್ಷೇತ್ರದ‌ ಶಾಸಕ ಜಿ. ಹೆಚ್​. ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಲೋಕಂಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ದೇಶವನ್ನು ದಿವಾಳಿ ಮಾಡಿದ್ದು ಮೋದಿ ಸರ್ಕಾರ ಹೊರತು ನಾವಲ್ಲ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Last Updated : Aug 5, 2023, 10:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.