ETV Bharat / state

ಶಿವಮೊಗ್ಗ ಜನ ಸಂತೃಪ್ತಿಯಿಂದ ಇರುವುದು ಡಿ.ಕೆ.ಶಿವಕುಮಾರ್​​ಗೆ ಇಷ್ಟವಿಲ್ಲದಂತೆ ಕಾಣುತ್ತಿದೆ: ಈಶ್ವರಪ್ಪ

author img

By

Published : Apr 6, 2022, 1:16 PM IST

ಈಶ್ವರಪ್ಪ
ಈಶ್ವರಪ್ಪ

ಶಿವಮೊಗ್ಗದ ಜನ ಸಂತೃಪ್ತಿಯಿಂದ ವ್ಯಾಪಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇದು ಡಿ.ಕೆ.ಶಿವಕುಮಾರ್ ಅವರಿಗೆ ಇಷ್ಟವಿಲ್ಲದಂತೆ ಕಾಣುತ್ತಿದೆ. ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ಗೊಂದಲಕ್ಕೆ ಅವಕಾಶ ನೀಡುವುದಿಲ್ಲ. ಎಲ್ಲ ವ್ಯಾಪಾರ ನಡೆಸಿಕೊಂಡು ಹೋಗಲು ಜನ ತೀರ್ಮಾನ ಮಾಡಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗ: ಶಿವಮೊಗ್ಗದ ಜಿಲ್ಲೆಯ ಜನ ಸಂತೃಪ್ತಿಯಿಂದ ಅವರ ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಶಿವಮೊಗ್ಗದ ಜನ ಸಂತೃಪ್ತಿಯಿಂದ ಇರುವುದು ಡಿ.ಕೆ.ಶಿವಕುಮಾರ್​ಗೆ ಇಷ್ಟವಿಲ್ಲದಂತೆ ಕಾಣುತ್ತಿದೆ. ಇದರಿಂದಲೇ ಶಿವಮೊಗ್ಗದ ಜನತೆಗೆ ಭಯಭೀತಿಯನ್ನುಂಟು ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.

ನಿನ್ನೆ ಡಿಕೆಶಿ ಶಿವಮೊಗ್ಗದಲ್ಲಿ ಪದೇ ಪದೆ ಗಲಾಟೆ, 144 ಸೆಕ್ಷನ್ ಹಾಕುತ್ತಿದ್ದರೆ ಜನ ವ್ಯಾಪಾರ ವಹಿವಾಟು ಇಲ್ಲದೇ, ಬೇರೆ ಕಡೆ ಹೋಗುತ್ತಾರೆ. ಜಿಲ್ಲೆಗೆ ಯಾರೂ ಸಹ ಹೂಡಿಕೆದಾರರು ಬರುವುದಿಲ್ಲ ಎಂಬ ಹೇಳಿಕೆ ನೀಡಿದ್ದರು.

ಡಿಕೆ ಶಿವಕುಮಾರ್ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ

ಡಿಕೆಶಿಗೆ ಈಶ್ವರಪ್ಪ ತಿರುಗೇಟು: ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ, ಶಿವಮೊಗ್ಗದಲ್ಲಿ ಕಿಡಿಗೇಡಿಗಳು ಹರ್ಷನ ಕೊಲೆ ನಡೆಸಿದ ನಂತರ ರಾಜ್ಯ ಸರ್ಕಾರ ಕೊಲೆಗಡುಕರನ್ನ ತಕ್ಷಣ ಬಂಧಿಸಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಇದನ್ನು ಶಿವಮೊಗ್ಗ ಜಿಲ್ಲೆಯ ಜನತೆ ಸರ್ಕಾರವನ್ನು ಅಭಿನಂದಿಸಿದ್ದಾರೆ. ಕೊಲೆಗಡುಕರನ್ನು ಬಂಧಿಸಿ ಎನ್ಐಎಗೆ ಕೊಟ್ಟಿರುವುದಕ್ಕೆ ಸಂತೋಷ ಪಡುತ್ತಿದ್ದಾರೆ.

ಇದರಿಂದ ಜನ ಸಂತೃಪ್ತಿಯಿಂದ ವ್ಯಾಪಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇದು ಡಿ.ಕೆ.ಶಿವಕುಮಾರ್ ಅವರಿಗೆ ಇಷ್ಟವಿಲ್ಲದಂತೆ ಕಾಣುತ್ತಿದೆ. ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ಗೊಂದಲಕ್ಕೆ ಅವಕಾಶ ನೀಡುವುದಿಲ್ಲ. ಎಲ್ಲ ವ್ಯಾಪಾರ ನಡೆಸಿಕೊಂಡು ಹೋಗಲು ಜನ ತೀರ್ಮಾನ ಮಾಡಿದ್ದಾರೆ ಎಂದರು.

ಸಿಎಂ ಬದಲಾವಣೆಯಿಲ್ಲ : ಸಿಎಂ ಬಸವರಾಜ ಬೊಮ್ಮಾಯಿ ಅವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಒಳ್ಳೆಯ ಕೆಲಸ ಕೂಡಾ ಮಾಡುತ್ತಿದ್ದಾರೆ. ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಿ, 150 ಸೀಟುಗಳನ್ನು ತರುತ್ತೇವೆ.

ಬೊಮ್ಮಾಯಿ ಅವರ ನೇತೃತ್ವದಲ್ಲಿ ಅವಧಿ ಪೂರ್ಣಗೊಳಿಸುತ್ತೇವೆ. ಅವಧಿಗೂ ಮುನ್ನ ಚುನಾವಣೆ ನಡೆಸುವುದಿಲ್ಲ. ಅವಧಿಗೂ ಮುನ್ನ ಚುನಾವಣೆ ಬರುತ್ತದೆ ಎಂದು ಕಾಂಗ್ರೆಸ್ ಸುಳ್ಳು ಸುದ್ದಿ ಹುಟ್ಟು ಹಾಕುತ್ತಿದೆ ಎಂದು ದೂರಿದರು.

ನಾಲ್ಕು ಸಚಿವ ಸ್ಥಾನ ಖಾಲಿ : ಸದ್ಯ ರಾಜ್ಯದಲ್ಲಿ ನಾಲ್ಕು ಸಚಿವ ಸ್ಥಾನ ಖಾಲಿ ಇದೆ.‌ ಕೇಂದ್ರದ ನಾಯಕರು ಹಾಗೂ ಸಿಎಂ ಕೂತು ಚರ್ಚೆ ಮಾಡಿ ನಾಲ್ಕನ್ನು ಮಾತ್ರ ತುಂಬಬೇಕೇ ಅಥವಾ ಹೊಸ ಸಂಪುಟ‌ ರಚನೆ ಮಾಡಬೇಕೆ ಎಂದು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಕ್ಕೆ ನಾವು ಬದ್ದ. ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ಅವರ ಅವಧಿ ಇನ್ನೂ ಇದೆ. ಅವರು ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಚುನಾವಣೆ ಗೆದ್ದಿದ್ದೇವೆ ಎಂದರು.

ಕಮಿಷನ್ ವರದಿ ನಂತರ ಜಿ.ಪಂ ಮತ್ತು ತಾ.ಪಂ ಚುನಾವಣೆ : ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಕುರಿತು ಸರ್ವ ಪಕ್ಷದ ಸಭೆ ನಡೆಸಲಾಗಿದೆ. ಸುಪ್ರೀಂಕೋರ್ಟ್ ನಂತೆ ಚುನಾವಣೆ ನಡೆಸಿದರೆ ಓಬಿಸಿ ರವರಿಗೆ ಅನ್ಯಾಯಾವಾಗುತ್ತದೆ. ಇದರಿಂದ ಇದಕ್ಕಾಗಿ ಒಂದು ಕಮಿಷನ್ ನೇಮಕ ಮಾಡಲಾಗಿದೆ. ಈ ಕಮಿಷನ್ ವರದಿ ನೀಡಿದ ನಂತರ ಚುನಾವಣಾ ಆಯೋಗ ಹಾಗೂ ಸುಪ್ರೀಂಕೋರ್ಟ್​​​ಗೆ ಸಹ ಮಾಹಿತಿ ನೀಡಿ ಚುನಾವಣೆ ನಡೆಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.