ETV Bharat / state

ಸರ್ಕಾರಿ ಗೌರವದೊಂದಿಗೆ ಅರಣ್ಯ ರಕ್ಷಕ ಸುಂದರೇಶ್ ಅಂತ್ಯಸಂಸ್ಕಾರ

author img

By

Published : Feb 19, 2023, 1:06 PM IST

Forest guard Sundaresh cremated
ಸರ್ಕಾರಿ ಗೌರವದೊಂದಿಗೆ ಅರಣ್ಯ ರಕ್ಷಕ ಸುಂದರೇಶ್ ಅಂತ್ಯಸಂಸ್ಕಾರ

ಸರ್ಕಾರಿ ಗೌರವದೊಂದಿಗೆ ಅರಣ್ಯ ರಕ್ಷಕ ಸುಂದರೇಶ್ ಅಂತ್ಯಸಂಸ್ಕಾರ ನೆರವೇರಿತು.

ಸರ್ಕಾರಿ ಗೌರವದೊಂದಿಗೆ ಅರಣ್ಯ ರಕ್ಷಕ ಸುಂದರೇಶ್ ಅಂತ್ಯಸಂಸ್ಕಾರ

ಶಿವಮೊಗ್ಗ: ಹಾಸನ ಜಿಲ್ಲೆ ಕಾಡುಮನೆ ಮಣಿಬೀಡು ದೇವಸ್ಥಾನ ಸಮೀಪದ ಪಶ್ಚಿಮ ಘಟ್ಟದ ಕಾಡಿನಲ್ಲಿ ಬೆಂಕಿ‌ ನಂದಿಸಲು ಹೋಗಿ ಸಾವನ್ನಪ್ಪಿದ ಸುಂದರೇಶ್​ಗೆ ಹುಟ್ಟೂರಿನಲ್ಲಿ ಅರಣ್ಯ ಇಲಾಖೆಯಿಂದ ಅಂತಿಮ ನಮನ ಸಲ್ಲಿಸಲಾಯಿತು. ಸುಂದರೇಶ್ ತೀರ್ಥಹಳ್ಳಿ ತಾಲೂಕು ನಾಲೂರು ಬಳಿಯ ಸಂಪೇಕಟ್ಟೆಯ ನಿವಾಸಿ. ಇವರು ಹಾಸನ ಜಿಲ್ಲೆಯಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ಮೂರು ದಿನಗಳ ಹಿಂದೆ ಕಾಡುಮನೆಯ ಮಣಿಬೀಡು ದೇವಾಸ್ಥಾನದ ಬಳಿ ಕಾಡಿಗೆ ಬಿದ್ದ ಬೆಂಕಿ ನಂದಿಸಲು ಹೋಗಿ ಗಾಯಗೊಂಡಿದ್ದರು. ಗಾಯಗೊಂಡ ಇವರನ್ನು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ನಿನ್ನೆ(ಶನಿವಾರ) ಸ್ವಗ್ರಾಮ ಸಂಪೇಕಟ್ಟೆಗೆ ತರಲಾಗಿತ್ತು.

ಗೃಹ ಸಚಿವರಿಂದ ಅಂತಿಮ ನಮನ: ಗೃಹ ಸಚಿವ ಆರಗ ಜ್ಞಾ‌ನೇಂದ್ರ ಸುಂದರೇಶ್ ಅಂತಿಮ ದರ್ಶನ ಪಡೆದುಕೊಂಡರು. ಮೃತ ದೇಹದ ಮುಂದೆ ಹೂವಿನ ಹಾರ ಇಟ್ಟು ಅಂತಿಮ ನಮನ ಸಲ್ಲಿಸಿದರು. ನಂತರ ಮೂರು ಸುತ್ತು ಕುಶಲತೋಪು ಹಾರಿಸಿ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.

ಸುಂದರೇಶ್ ಕಳೆದ 15 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ನೌಕರಿಯಲ್ಲಿ ಅತ್ಯಂತ ಪ್ರಮಾಣಿಕರಾಗಿದ್ದರು. ಇವರು ತಂದೆ, ಪತ್ನಿ ಹಾಗೂ 5 ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ. ಇನ್ನು ಮೃತ ಸುಂದರೇಶ್ ಪತ್ನಿಗೆ ಅರಣ್ಯ ಇಲಾಖೆಯಿಂದ ನೌಕರಿ ಒದಗಿಸುವ ಭರವಸೆ ನೀಡಲಾಗಿದೆ.

ಪಶ್ಚಿಮ ಘಟ್ಟದಲ್ಲಿ ಬೆಂಕಿ ಅವಘಡ: ಹಾಸನ ತಾಲೂಕಿನ ಕಾಡುಮನೆ ಮಣಿಬೀಡು ದೇವಸ್ಥಾನದ ಸಮೀಪವಿರುವ ಪಶ್ಚಿಮ ಘಟ್ಟದ ಕಾಡಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನಂದಿಸಲು ಹೋದ ಅರಣ್ಯ ಇಲಾಖೆಯ ಮಂಜುನಾಥ್, ಅರಣ್ಯ ರಕ್ಷಕ ಸುಂದರೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಅರಣ್ಯ ವೀಕ್ಷಕ ತುಂಗೇಶ್ ಹಾಗೂ ಮಹೇಶ್ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದರು.

ಫೆ.16 (ಗುರುವಾರ) ಮಧ್ಯಾಹ್ನ ಸುಮಾರು 1.30 ರ ವೇಳೆಗೆ ಘಟನೆ ನಡೆದಿತ್ತು. ಬೆಂಕಿಯಲ್ಲಿ ಕಾಡಿನ ನಡುವೆ ಸಿಲುಕಿದ ಸಿಬ್ಬಂದಿಯನ್ನು ಗ್ರಾಮಸ್ಥರು ಹಾಗೂ ಇತರ ಇಲಾಖೆ ಸಿಬ್ಬಂದಿ ಸುಮಾರು 12 ಕಿ.ಮೀ ದೂರ ಎತ್ತಿಕೊಂಡು ಬಂದಿದ್ದರು. ನಂತರ ಆ್ಯಂಬುಲೆನ್ಸ್ ಮುಖಾಂತರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಕರೆತಂದು ಹಾಸನದ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು.

ಇದನ್ನೂ ಓದಿ: ಪಶ್ಚಿಮ ಘಟ್ಟದಲ್ಲಿ ಬೆಂಕಿ ಅವಘಡ: ನಾಲ್ವರು ಅರಣ್ಯ ಸಿಬ್ಬಂದಿಗೆ ಗಾಯ

ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ಚಿಕ್ಕಮಗಳೂರು ಜಿಲ್ಲೆಯ ಚುರ್ಚೆ ಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸಿ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಕಾಡ್ಗಿಚ್ಚಿನಿಂದ ಹಲವಾರು ಗಿಡ, ಮರಗಳು ಸುಟ್ಟು ಕರಕಲಾಗಿದ್ದವು. ಅಲ್ಲದೇ ಘಟನೆಯಲ್ಲಿ ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು: ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.