ETV Bharat / state

ಶಿವಮೊಗ್ಗದಲ್ಲಿ ಚಿರತೆ ದಾಳಿಗೆ ರೈತ ಮಹಿಳೆ ಬಲಿ.. ಜನರಲ್ಲಿ ಹೆಚ್ಚಿದ ಆತಂಕ

author img

By

Published : Aug 9, 2023, 7:01 PM IST

ಚಿರತೆ ದಾಳಿಗೆ ರೈತ ಮಹಿಳೆ ಬಲಿ
ಚಿರತೆ ದಾಳಿಗೆ ರೈತ ಮಹಿಳೆ ಬಲಿ

ಶಿವಮೊಗ್ಗ ತಾಲೂಕಿನ ಬಿಕ್ಕೋನಹಳ್ಳಿಯಲ್ಲಿ ಜಮೀನಿಗೆ ತೆರಳಿದ್ದ ಮಹಿಳೆ ಮೇಲೆ ಚಿರತೆ ದಾಳಿ ಮಾಡಿ, ಕೊಂದುಹಾಕಿದೆ.

ಜಮೀನಿಗೆ ತೆರಳಿದ್ದ ಮಹಿಳೆ ಮೇಲೆ ಚಿರತೆ ದಾಳಿ

ಶಿವಮೊಗ್ಗ : ಹೊಲದಲ್ಲಿ ಕೆಲಸ‌ ಮಾಡುತ್ತಿದ್ದ ರೈತ ಮಹಿಳೆ ಮೇಲೆ ಚಿರತೆಯೊಂದು ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ಮಂಗಳವಾರ ಸಂಜೆ ವೇಳೆ ಶಿವಮೊಗ್ಗ ತಾಲೂಕು ಬಿಕ್ಕೋನಹಳ್ಳಿ ಗ್ರಾಮದಲ್ಲಿ‌ ನಡೆದಿದೆ. ಯಶೋದಮ್ಮ(45) ಚಿರತೆ ದಾಳಿಯಿಂದ ಸಾವನ್ನಪ್ಪಿದ‌ವರು. ಮೃತ ರೈತ ಮಹಿಳೆ ಕೂಲಿ‌ ಕೆಲಸ ಮಾಡುತ್ತಿದ್ದು, ಎಂದಿನಂತೆ ಕೆಲಸಕ್ಕೆಂದು ಹೊಲಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ.

ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ‌ ಇಲಾಖೆ ಸಿಬ್ಬಂದಿ ಹಾಗೂ ಇನ್ನಿತರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ 15 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಇಂದು ಮೊದಲ ಹಂತವಾಗಿ 5 ಲಕ್ಷ ರೂ. ಚೆಕ್ ನೀಡುತ್ತಿದ್ದಾರೆ. ಉಳಿದ 10 ಲಕ್ಷ ರೂ. ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ. ಅಲ್ಲದೆ ಈ ಸಂಬಂಧ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಚಿರತೆಯನ್ನು ಸೆರೆ ಹಿಡಿಯಲು ಆದೇಶ ಕೊಟ್ಟಿದ್ದು, ಘಟನೆ ನಡೆದ ಸ್ಥಳದಲ್ಲಿ ಅರಣ್ಯಾಧಿಕಾರಿಗಳು ಬೋನು ಇಟ್ಟಿದ್ದಾರೆ.

ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥ ಷಣ್ಮುಗಪ್ಪ ಎಂಬವರು, ಯಶೋದಮ್ಮ ಅವರು ಕೂಲಿ ಕೆಲಸಕ್ಕೆಂದು ಬೆಳಗ್ಗೆಯೇ ಹೋಗಿ ಮಧ್ಯಾಹ್ನ ಊಟದ ಸಮಯಕ್ಕೆ ವಾಪಸ್ ಆಗುತ್ತಿದ್ದರು. ಆದರೆ ನಿನ್ನೆ ಮಧ್ಯಾಹ್ನ 2:30 ಆದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಕರೆ ಮಾಡಿದ್ದಾರೆ. ಕರೆಯನ್ನು ಯಶೋದಮ್ಮ ರಿಸಿವ್ ಮಾಡಿಲ್ಲ. ಬಳಿಕ ಪಕ್ಕದ ಹೊಲದವರಿಗೆ ಕರೆ ಮಾಡಿ ಯಶೋದಮ್ಮ ಬಗ್ಗೆ ಕುಟುಂಬಸ್ಥರು ವಿಚಾರಿಸಿದ್ದಾರೆ. ಪಕ್ಕದ ಹೊಲದವರು ಹೋಗಿ ನೋಡಿದಾಗ ಮಹಿಳೆ ಚಿರತೆ ದಾಳಿಗೆ ಬಲಿಯಾಗಿರುವುದು ಕಂಡು ಬಂದಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ ಮಾನವ ಜೀವನಕ್ಕೆ ಹಾನಿ ಆಗಿರುವ ಈ ಘಟನೆ ಬಿಕ್ಕೋನಹಳ್ಳಿಯಲ್ಲಿ ಪ್ರಥಮ ಬಾರಿಗೆ ನಡೆದಿದೆ. ದಾಳಿಯಿಂದ ಗ್ರಾಮಸ್ಥರು ಹಾಗು ಅಕ್ಕ ಪಕ್ಕದ ಊರಿನವರು ನಿನ್ನೆಯ ಘಟನೆಯಿಂದ ಭಯಭೀತರಾಗಿ ಇಂದು ಯಾರು ಸಹ ಹೊಲಗಳಿಗೆ, ತೋಟಗಳಿಗೆ ತೆರಳಿಲ್ಲ. ಕೆಲ ತಿಂಗಳ ಹಿಂದೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಫಲವನಹಳ್ಳಿ ಗ್ರಾಮದ ಬಳಿ ಸಹ ಇದೇ ರೀತಿ‌ ರೈತ ಮಹಿಳೆ ಚಿರತೆ ದಾಳಿಯಿಂದ ಮೃತಪಟ್ಟಿದ್ದರು. ಅರಣ್ಯ ಇಲಾಖೆಯವರು ಅದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರಾದ ಪಾಲಾಕ್ಷಪ್ಪ ಒತ್ತಾಯಿಸಿದರು.

ಚಿರತೆ ದಾಳಿಗೊಳಗಾಗಿದ್ದ ಬಾಲಕಿ ಸಾವು: ಕಳೆದ ಜೂ‌ನ್​ 26 ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ 6 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿತ್ತು.‌ ಬಾಲಕಿ 15 ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ ಅಸುನೀಗಿದ್ದಳು. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಸುಶೀಲಾ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯುವ ವೇಳೆ ಬಾಲಕಿ ಜೋರಾಗಿ ಬೊಬ್ಬೆ ಹಾಕಿದ್ದು, ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದರು. ಆಗ ಭಯದಿಂದ ಚಿರತೆ ಬಾಲಕಿಯನ್ನು ಬಿಟ್ಟುಹೋಗಿತ್ತು. ಈ ವೇಳೆ ಬದುಕುಳಿದಿದ್ದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ : ಚಾಮರಾಜನಗರ: ಶಾಲೆಗೆ ಅರಣ್ಯ ಇಲಾಖೆ ಕಣ್ಗಾವಲು - ವಿದ್ಯಾರ್ಥಿಗಳಿಗೆ ಫಾರೆಸ್ಟ್ ಸಿಬ್ಬಂದಿ ಬಿಗಿ ಭದ್ರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.