ETV Bharat / state

ಕುಕ್ಕರ್ ಬಾಂಬ್ ಸ್ಫೋಟ: ಉಗ್ರ ಶಾರೀಕ್​ನನ್ನ  ಶಿವಮೊಗ್ಗಕ್ಕೆ ಕರೆ ತಂದು ವಿಚಾರಣೆ

author img

By

Published : Jun 17, 2023, 1:15 PM IST

Shariq
ಉಗ್ರ ಶಾರೀಕ್​

ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ನನ್ನು ಶಿವಮೊಗ್ಗಕ್ಕೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಶಿವಮೊಗ್ಗ : ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಉಗ್ರ ಶಾರೀಕ್ ನನ್ನು ಶಿವಮೊಗ್ಗ ಪೊಲೀಸರು ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೀನು ಮಾರುಕಟ್ಟೆ ಬಳಿಯ‌ ನಿವಾಸಿ ಆಗಿರುವ ಶಾರೀಕ್, ಶಿವಮೊಗ್ಗದಲ್ಲಿ ನಡೆದ ರಾಷ್ಟ್ರಧ್ವಜ ಸುಟ್ಟ ಪ್ರಕರಣ ಹಾಗೂ ಬಾಂಬ್ ಟ್ರಯಲ್ ಬ್ಲಾಸ್ಟ್ ಸ್ಫೋಟ ಕೇಸ್​ಗೆ ಸಹ ಸಂಬಂಧ ಪಟ್ಟಿದ್ದಾನೆ.

ಶಿವಮೊಗ್ಗದ ಪೊಲೀಸರು ನ್ಯಾಯಾಲಯದ ಅನುಮತಿಯ ಮೇರೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ‌ ಜಿಲ್ಲೆಗೆ ಕರೆತಂದು ನಿನ್ನೆಯಿಂದ ವಿಚಾರಣೆ ನಡೆಸುತ್ತಿದ್ದಾರೆ. ಪೂರ್ವ ವಲಯ ಐಜಿಪಿ ತ್ಯಾಗರಾಜನ್ ನೇತೃತ್ವದಲ್ಲಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನು ಶಾರೀಕ್ ಯುಎಪಿಎ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪೊಲೀಸರು ವಶಕ್ಕೆ ಪಡೆದು ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇರಿಸಿದ್ದರು. ಈ ಹಿಂದೆ ಸಹ ಅಂದ್ರೆ, ಮಾರ್ಚ್​ 8, 2023 ರಂದು ಶಾರೀಕ್​ನನ್ನು ರಾಷ್ಟ್ರೀಯ ತನಿಖಾ ದಳ ಶಿವಮೊಗ್ಗ ಜಿಲ್ಲೆಗೆ ಕರೆತಂದು ವಿವಿಧಡೆ ಸ್ಥಳ ಮಹಜರು ನಡೆಸಿತ್ತು.

ಇದನ್ನೂ ಓದಿ : ಕುಕ್ಕರ್​ ಬಾಂಬ್ ಸ್ಫೋಟ : ಪುರುಷೋತ್ತಮ ಪೂಜಾರಿಗೆ ರಿಕ್ಷಾ, 5 ಲಕ್ಷ ಪರಿಹಾರ: ಶಾಸಕ ಕಾಮತ್

ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಸ್ಫೋಟ : ಕಳೆದ ನವೆಂಬರ್ 19 ರಂದು ಮಂಗಳೂರು ನಗರದ ಕಂಕನಾಡಿ ಬಳಿಯ ಗರೋಡಿ ಎಂಬಲ್ಲಿ ಕುಕ್ಕರ್​ ಬಾಂಬ್​ ಸ್ಫೋಟಗೊಂಡಿತ್ತು. ಶಂಕಿತ ಉಗ್ರ ಶಾರೀಕ್ ಕುಕ್ಕರ್ ಬಾಂಬ್​ನೊಂದಿಗೆ ಪುರುಷೋತ್ತಮ್​ ಅವರ ಆಟೋರಿಕ್ಷಾ ಏರಿದ್ದ. ಈ ವೇಳೆ ಶಾರೀಕ್​ ಬಳಿಯಿದ್ದ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಉಗ್ರ ಶಾರೀಕ್ ಮತ್ತು ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗೆ ಸುಟ್ಟ ಗಾಯಗಳಾಗಿದ್ದವು. ಬಳಿಕ, ಆರೋಪಿ ಶಾರೀಕ್ ಮತ್ತು ಪುರುಷೋತ್ತಮನನ್ನು ಇಲ್ಲಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ : ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ಸಂತ್ರಸ್ತ ಚಾಲಕನಿಗೆ ರಿಕ್ಷಾ, 5 ಲಕ್ಷ ರೂ. ಹಸ್ತಾಂತರ

ಇನ್ನು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಗಾಯಾಳು ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗೆ ಹೊಸ ಆಟೋ ರಿಕ್ಷಾ ಮತ್ತು 5 ಲಕ್ಷ ರೂಪಾಯಿ ಚೆಕ್​ ಅನ್ನು ಕಳೆದ ಮಾರ್ಚ್​ ತಿಂಗಳಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸ್ತಾಂತರಿಸಿದ್ದರು. ಉಜ್ಜೋಡಿಯಲ್ಲಿರುವ ಪುರುಷೋತ್ತಮ ಪೂಜಾರಿ ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ರಿಕ್ಷಾ ಮತ್ತು 5 ಲಕ್ಷ ರೂ. ಗಳ ಚೆಕ್ ಅನ್ನು ನೀಡಲಾಗಿತ್ತು.

ಇದನ್ನೂ ಓದಿ : ಶಿವಮೊಗ್ಗದ ವಿವಿಧೆಡೆ ಶಂಕಿತ ಉಗ್ರ ಶಾರಿಕ್​ ಕರೆದೊಯ್ದು ಸ್ಥಳ ಮಹಜರು ನಡೆಸಿದ ಎನ್ಐಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.