ETV Bharat / state

ಚುನಾವಣೆಗೆ ಸ್ಪರ್ಧೆ: ಪಕ್ಷದ ನಿರ್ಧಾರಕ್ಕೆ ಬದ್ಧ- ಬಿ.ವೈ.ವಿಜಯೇಂದ್ರ

author img

By

Published : Feb 26, 2023, 2:26 PM IST

BY Vijayendra
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ

ಶಿಕಾರಿಪುರ ತಾಲೂಕು ಯಡಿಯೂರಪ್ಪ ಅವರಿಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ. ಹಾಗಾಗಿ ಶಿಕಾರಿಪುರದ ಹಿರಿಯರು ನನ್ನನ್ನು ಅಲ್ಲಿ ನಿಲ್ಲಿಸಬೇಕು ಎಂದಾಗ ತಂದೆಯವರು ನನ್ನ ಹೆಸರು ಘೋಷಣೆ ಮಾಡಿದ್ದಾರೆ.- ಬಿ.ವೈ.ವಿಜಯೇಂದ್ರ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಪಕ್ಷದ ನಿರ್ಧಾರಕ್ಕೆ ನಾನು ಬದ್ಧ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ನಾನು ರಾಜ್ಯದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಕೆಲಸ ಮಾಡಿದ್ದೇನೆ. ಪಕ್ಷ ಸಂಘಟನೆಯ ಕೆಲಸ ಮಾಡಿದ್ದೇನೆ. ಇಂದು ರಾಜ್ಯದ ಉಪಾಧ್ಯಕ್ಷನಾಗಿ ಮೋರ್ಚಾಗಳ ಜವಾಬ್ದಾರಿ ವಹಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದರು.

ಸಹಜವಾಗಿಯೇ ವರುಣದಲ್ಲಿ ಸ್ಪರ್ಧಿಸಬೇಕೆನ್ನುವ ಚರ್ಚೆಗಳು ಆಗುತ್ತಿವೆ. ಇನ್ನೊಂದೆಡೆ ಶಿಕಾರಿಪುರ ತಾಲೂಕು ಯಡಿಯೂರಪ್ಪರಿಗೆ ರಾಜಕೀಯ ಜನ್ಮ ಕೊಟ್ಟಂತಹ ಕ್ಷೇತ್ರ. ಹಾಗಾಗಿ ಶಿಕಾರಿಪುರದ ಹಿರಿಯರು ನನ್ನನ್ನು ಅಲ್ಲಿ ನಿಲ್ಲಿಸಬೇಕು ಎಂದಾಗ ತಂದೆಯವರು ನನ್ನ ಹೆಸರು ಘೋಷಣೆ ಮಾಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಹಾಗಾಗಿ ಅಂತಿಮವಾಗಿ ಪಕ್ಷ ಏನು ತೀರ್ಮಾನ ಮಾಡುತ್ತೋ ಅದಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ನಿರ್ಧಾರವನ್ನು ಕಾದು ನೋಡುತ್ತಿದ್ದೇನೆ ಎಂದು ಹೇಳಿದರು.

ನಾಳೆ(ಫೆ.27)ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನ್ಮದಿನದಂದು ನಮ್ಮ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಆಗುತ್ತಿದೆ. ಇದು ಶಿವಮೊಗ್ಗ ಜಿಲ್ಲೆಯ ಜನತೆ ಅಷ್ಟೇ ಅಲ್ಲ, ಮಧ್ಯ ಕರ್ನಾಟಕದ ಇತರ ಜಿಲ್ಲೆಗಳು ಸಹ ಹೆಮ್ಮೆಪಡುವಂತಹ ಅಮೃತ ಘಳಿಗೆ ಎಂದರು.

ವಿಮಾನ ನಿಲ್ದಾಣದ ವಿಶೇಷತೆಗಳೇನು?: ಶಿವಮೊಗ್ಗ ತಾಲೂಕು ಸೋಗಾನೆ ಗ್ರಾಮದ ವ್ಯಾಪ್ತಿಯಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಒಟ್ಟು 775 ಎಕರೆ ಪ್ರದೇಶದಲ್ಲಿ 449.22 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ರಾತ್ರಿ ವೇಳೆ ವಿಮಾನಗಳು ಇಳಿಯಲು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ನಂತರದ ಅತಿದೊಡ್ಡ ವಿಮಾನ ನಿಲ್ದಾಣ ಇದಾಗಿದೆ. ಎಟಿಆರ್ 72 ನಿಂದ ಪ್ರಾರಂಭವಾಗಿ ಏರ್ ಬಸ್ 320ರ ವರೆಗೆ ಎಲ್ಲಾ ರೀತಿಯ ವಿಮಾನಗಳು ಹಗಲು ಹಾಗೂ ರಾತ್ರಿ ಕಾರ್ಯಾಚರಣೆ ಮಾಡುವಂತೆ ನಿರ್ಮಾಣ ಮಾಡಲಾಗಿದೆ. 3.2 ಕಿಲೋ ಮೀಟರ್​ನ ರನ್ ವೇ ಇದೆ. ಇದು ಬೆಂಗಳೂರು ಹೊರತುಪಡಿಸಿದರೆ ಎರಡನೇ ಅತಿ ದೊಡ್ಡ ರನ್ ವೇ ಆಗಿದೆ. 3,050 ಮೀಟರ್ ಉದ್ದ ಹಾಗೂ 45 ಮೀಟರ್ ಅಗಲ ಹೊಂದಿದೆ.

ಶಿವಮೊಗ್ಗದ ವಿಮಾನ ನಿಲ್ದಾಣವು ಮುಂಭಾಗದಲ್ಲಿ ಕಮಲ ಮತ್ತು ಹಿಂಭಾಗದಲ್ಲಿ ಹದ್ದು ಪಕ್ಷಿಯ ಆಕಾರವನ್ನು ಹೊಂದಿದೆ. ಅತ್ಯಂತ ನೈಪುಣ್ಯತೆಯಿಂದ ಏರ್​ಪೋರ್ಟ್​ನಿರ್ಮಾಣ ಮಾಡಲಾಗಿದ್ದು, ಟರ್ಮಿನಲ್ ಕಟ್ಟಡ 106 ಮೀಟರ್ ಉದ್ದ, 66 ಮೀಟರ್ ಅಗಲ ಹೊಂದಿದೆ. ಇದು ಗೋಪುರ ಮಾದರಿಯಲ್ಲಿ ಬಂದಿದ್ದು, ಟರ್ಮಿನಲ್​ನ ಬಲ ಮತ್ತು ಎಡ ತುದಿಗಳು 9 ಮೀಟರ್ ಎತ್ತರವಿದ್ರೆ, ಮಧ್ಯಭಾಗ 20 ಮೀಟರ್ ಎತ್ತರವಿದೆ. ಟರ್ಮಿನಲ್ ಅನ್ನು 74 ಪಿಲ್ಲರ್​ಗಳಿಂದ ನಿಲ್ಲಿಸಲಾಗಿದೆ. ಇದರ ಮೇಲ್ಛಾವಣಿಯನ್ನು ಎಸಿಪಿ ಎಂ.ಎಸ್ ನಿಂದ ಮುಚ್ಚಲಾಗಿದೆ. ಟರ್ಮಿನಲ್​ನಲ್ಲಿ 6 ಚೆಕ್ ಇನ್ ಕೌಂಟರ್​ಗಳಿವೆ. ಇದರಲ್ಲಿ ವಿಐಪಿಗಳಿಗೆ ಪ್ರತ್ಯೇಕ ಎರಡು ಚೆಕ್ ಇನ್ ಕೌಂಟರ್, ಉಳಿದ ನಾಲ್ಕು ಸಾಮಾನ್ಯ ಚೆಕ್ ಇನ್ ಕೌಂಟರ್​ಗಳಾಗಿವೆ. ಒಂದು ಕ್ಯಾಂಟೀನ್ ಇದೆ. ಎರಡು ಸ್ನ್ಯಾಕ್ಸ್ ಬಾರ್​ಗಳಿವೆ. ಚೈಲ್ಡ್ ಕೇರ್ , ಡಾಕ್ಟರ್ಸ್, ಏರ್ ಲೈನ್ ಆಫೀಸ್, ಲಾಸ್ಟ್ ಅಂಡ್ ಫೈನ್, ಸ್ಟಾಫ್ ಎಲ್ಲಾ ಸೇರಿ ಟರ್ಮಿನಲ್​ನಲ್ಲಿ 35 ರೂಮ್​ಗಳಿವೆ.

ಇದನ್ನೂ ಓದಿ: ಕ್ಷೇತ್ರದ ಬಗ್ಗೆ ಅಲ್ಲ, ಕರ್ನಾಟಕದ ಬಗ್ಗೆ ಒಲವಿದೆ: ಬಿ.ವೈ. ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.