ETV Bharat / state

ರಾಯಚೂರು : ದೇವದುರ್ಗ ಉಪಕಾರಾಗೃಹದಿಂದ ವಿಚಾರಣಾಧೀನ ಕೈದಿ ಪರಾರಿ

author img

By ETV Bharat Karnataka Team

Published : Sep 3, 2023, 4:42 PM IST

prisoner-escaped-from-devadurga-sub-jail-in-raichur
ರಾಯಚೂರು : ದೇವದುರ್ಗ ಉಪಕಾರಾಗೃಹದಿಂದ ವಿಚಾರಣಾಧೀನ ಖೈದಿ ಪರಾರಿ

ರಾಯಚೂರು ಜಿಲ್ಲೆಯ ದೇವದುರ್ಗದ ಉಪಕಾರಾಗೃಹದ ವಿಚಾರಣಾಧೀನ ಕೈದಿ ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ರಾಯಚೂರು : ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕೈದಿ ಕಾರಾಗೃಹದಿಂದ ಪರಾರಿಯಾಗಿರುವ ಘಟನೆ ಜಿಲ್ಲೆಯ ದೇವದುರ್ಗದ ಉಪಕಾರಾಗೃಹದಲ್ಲಿ ನಡೆದಿದೆ. ವಿಚಾರಣಾಧೀನ ಕೈದಿ ಅನ್ವರ‌ಬಾಷಾ ಪರಾರಿಯಾಗಿರುವ ಕೈದಿ.

ವಿಜಯನಗರ ಜಿಲ್ಲೆಯ ರಾಮನಗರ ನಿವಾಸಿಯಾಗಿದ್ದ ಅನ್ವರಬಾಷಾ ಪೇಂಟಿಂಗ್​ ಕೆಲಸ ಮಾಡುತ್ತಿದ್ದ. ಕಳೆದ ಮೇ ತಿಂಗಳಲ್ಲಿ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾಶಾಳ ಹತ್ತಿರ ನಡೆದ ಕೊಲೆ ಪ್ರಕರಣ ಸಂಬಂಧ ಅನ್ವರಬಾಷಾನನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿ, ಇಂದು ಬೆಳಗ್ಗೆ ಜೈಲಿನ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗ ಠಾಣೆ ಪೊಲೀಸರು ಪ್ರತಿಕ್ರಿಯಿಸಿ, ವಿಚಾರಾಧೀನ ಕೈದಿಯೋರ್ವ ಪರಾರಿಯಾಗಿದ್ದಾನೆ. ಈ ಸಂಬಂಧ ಜೈಲರ್ ದೂರು ದಾಖಲಿಸಿದ್ದು, ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದಿದ್ದಾರೆ.

ಚಾಮರಾಜನಗರದ ವಿಚಾರಣಾಧೀನ ಕೈದಿ ಪರಾರಿ : ಕಳೆದ ಆಗಸ್ಟ್​ ತಿಂಗಳಲ್ಲಿ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಚಾರಣಾಧೀನ ಕೈದಿ ಪರಾರಿಯಾಗಿದ್ದ ಘಟನೆ ತಮಿಳುನಾಡಿನ ಆಸನೂರು ಎಂಬಲ್ಲಿ ನಡೆದಿತ್ತು. ಚಾಮರಾಜನಗರದ 25 ವರ್ಷದ ಯುವಕ ಪರಾರಿಯಾಗಿದ್ದ ಕೈದಿ.

ಈತನ ವಿರುದ್ಧ ಚಾಮರಾಜನಗರ ಗ್ರಾಮಾಂತರ ಠಾಣೆ, ಪೂರ್ವ ಠಾಣೆ ವ್ಯಾಪ್ತಿಯಲ್ಲಿ ದೇವಾಲಯ ಹುಂಡಿ ಕಳವು, ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಅದೇ ರೀತಿ, ತಮಿಳುನಾಡಿನ ಈರೋಡ್ ಜಿಲ್ಲಾ ವ್ಯಾಪ್ತಿಯಲ್ಲೂ ಈತನ ವಿರುದ್ಧ ಹಲವು ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ತಮಿಳುನಾಡು ಸತ್ಯಮಂಗಲಂನ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದೊಯ್ಯುವಾಗ ಆರೋಪಿ ಆಸನೂರಿನ ಹೋಟೆಲ್​ ಬಳಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ. ಈ ಸಂಬಂಧ ಚಾಮರಾಜನಗರ ಪೊಲೀಸರು, ಆಸನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಹುಡುಕಾಟಕ್ಕೆ ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಈ ಬಗ್ಗೆ ಮಾಹಿತಿ ನೀಡಿದ್ದ ಚಾಮರಾಜನಗರ ಎಸ್​ಪಿ ಪದ್ಮಿನಿ ಸಾಹು,"ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಕಳವು ಪ್ರಕರಣ ಸಂಬಂಧ ಈತನ ವಿರುದ್ಧ ಪ್ರಕರಣ​ ದಾಖಲಾಗಿತ್ತು. ಆರೋಪಿ ಚಾಮರಾಜನಗರದಲ್ಲಿ ಬಂಧನದಲ್ಲಿದ್ದ. ಈರೋಡ್​ನಲ್ಲಿಯೂ ಈತನ ವಿರುದ್ಧ ಕಳವು ಪ್ರಕರಣ ದಾಖಲಾಗಿತ್ತು. ಹೀಗಾಗಿ ತಮಿಳುನಾಡು ಸತ್ಯಮಂಗಲಂ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದುಕೊಂಡು ಹೋಗುವಾಗ ಆರೋಪಿ ಪರಾರಿಯಾಗಿದ್ದಾನೆ" ಎಂದು ತಿಳಿಸಿದ್ದರು.

ಇದನ್ನೂ ಓದಿ : ಚಾಮರಾಜನಗರ: ಕೋರ್ಟ್‌ಗೆ ಕರೆದೊಯ್ಯುವಾಗ ವಿಚಾರಣಾ ಕೈದಿ ಪರಾರಿ; ಈತ ಹತ್ತಾರು ಕಳವು ಪ್ರಕರಣಗಳ ಆರೋಪಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.