ETV Bharat / state

ಅವರು ಆಕಾಶದಲ್ಲಿ ಇರುವವರು, ನಾನು ಭೂಮಿಯಲ್ಲಿ ಇರುವವನು : ಹೆಚ್​ಡಿಕೆ ವ್ಯಂಗ್ಯ

author img

By

Published : Jan 26, 2023, 7:10 PM IST

Updated : Jan 27, 2023, 8:18 AM IST

ರಾಯಚೂರಿನಲ್ಲಿ ಪಂಚರತ್ನ ರಥಯಾತ್ರೆ - ಸಂಸದೆ ಸುಮಲತಾ ಬಗ್ಗೆ ಹೆಚ್​ಡಿಕೆ ಪ್ರತಿಕ್ರಿಯೆ - ಮಸರಕಲ್ ಗ್ರಾಮದಲ್ಲಿ ಧ್ವಜಾರೋಹಣ ಮಾಡಿದ ಕುಮಾರಸ್ವಾಮಿ

former-minister-hd-kumarswamy-spoke-about-mp-sumalatha
ಅವರು ಆಕಾಶದಲ್ಲಿ ಇರುವವರು, ನಾನು ಭೂಮಿಯಲ್ಲಿ ಇರುವವನು : ಹೆಚ್​ಡಿಕೆ ವ್ಯಂಗ್ಯ

ಹೆಚ್​ಡಿಕೆ ಭಾಷಣ

ರಾಯಚೂರು : ಮಂಡ್ಯ ಸಂಸದೆ ಸುಮಲತಾ ಹೆಸರು ಹೇಳದೇ ನಾನು, ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ. ಅವರು ಆಕಾಶದಲ್ಲಿ ಇರುವವರು, ನಾನು ಭೂಮಿಯಲ್ಲಿ ಇರುವವನು. ಅವರ ಬಗ್ಗೆ ಮಾತನಾಡಲು ಆಗುತ್ತಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಮೂರನೇ ದಿನದ ಪಂಚರತ್ನ ಯಾತ್ರೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶ ಮಾಡಿತು. ಈ ವೇಳೆ, ರಾಯಚೂರು ತಾಲೂಕಿನ ಕಲ್ಮಲ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಂಸದೆ ಸುಮಲತಾ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಾನು ಅವರಿಂದ ಪಬ್ಲಿಸಿಟಿ ತೆಗೆದುಕೊಳ್ಳಲು ಆಗುತ್ತಾ?. ಅವರ ಬಗ್ಗೆ ಚರ್ಚೆ ಮಾಡುವ ಯೋಗ್ಯತೆಯೂ ನನಗೆ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್​ನ ಭಾಗ್ಯಗಳ ಬಗ್ಗೆ ವ್ಯಂಗ್ಯ : ಕಾಂಗ್ರೆಸ್​​​ನ ಭಾಗ್ಯಗಳ ಬಗ್ಗೆ ಮಾತನಾಡಿದ ಹೆಚ್​ಡಿಕೆ, ಈಗ ಕಾಂಗ್ರೆಸ್​​ನವರು ಖಚಿತ, ಉಚಿತ ಎಂದು ತೋರಿಸುತ್ತಿದ್ದಾರೆ. 200 ಯುನಿಟ್ ಖಚಿತ, 2000 ಉಚಿತ ಎಂದು ಹೇಳುತ್ತಿದ್ದಾರೆ. ಆಗ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಕೊಡಲಿಲ್ಲ. ನಾನು ಅಧಿಕಾರದಲ್ಲಿದ್ದಾಗ ನನಗೆ ಸ್ವತಂತ್ರ ಸರ್ಕಾರ ಇರಲಿಲ್ಲ. ಹಾಗಾಗಿಯೇ ಬಡವರ ಕಷ್ಟವನ್ನು ನೋಡಿಯೇ ಈ ಪಂಚರತ್ನ ಯಾತ್ರೆ ಶುರು ಮಾಡಿದ್ದೇನೆ. ಈಗ ಜನತೆಯಲ್ಲಿ ಐದು ವರ್ಷದ ಸರ್ಕಾರ ನೀಡಲು ಮನವಿ ಮಾಡುತ್ತಿದ್ದೇನೆ ಎಂದರು.

ಹಾಸನದಲ್ಲಿ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿ, ನಾಲ್ವರು ಮಹಿಳೆಯರಿಗೆ ಟಿಕೆಟ್​ ಘೋಷಣೆ ಮಾಡಿದ್ದೇವೆ. ನಿನ್ನೆ ಏನು ಹೇಳಬೇಕೋ ಅದು ಹೇಳಿ ಆಗಿದೆ. ನಾವು ಕುಟುಂಬದಿಂದ ಯಾರನ್ನು ಸ್ಪರ್ಧೆಗೆ ಇಳಿಸಲ್ಲ. ಕೆಲವರಿಗೆ ವೈಯಕ್ತಿಕ ಪ್ರೀತಿ ವಿಶ್ವಾಸವಿರುತ್ತದೆ. ಅಭಿಮಾನದಿಂದ ಮಾತನಾಡಿದ್ದಾರೆ. ಈ ಬಗ್ಗೆ ಮನೆಯಲ್ಲಿ ಕುಳಿತು ಮತ್ತು ಪಕ್ಷದ ಚೌಕಟ್ಟಿನಲ್ಲಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಜೆಡಿಎಸ್​ನ ಬಿ.ಫಾರ್ಮ್ ದೇವೇಗೌಡರೇ ಕೊಡುವುದು. ಪ್ರಜ್ವಲ್​ ಹೇಳಿಕೆಯಲ್ಲಿ ತಪ್ಪು ಏನು ಇಲ್ಲ. ಬಿ.ಫಾರ್ಮ್​ಗೆ ಸಹಿ ಮಾಡುವುದು ದೇವೇಗೌಡರೇ. ಅಂತಿಮವಾಗಿ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿಕೆಯನ್ನು ಬೆಂಬಲಿಸಿದರು. ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರಲ್ಲ. ಯಾವುದೇ ರೀತಿಯ ಸಂಘರ್ಷವೂ ಆಗಲ್ಲ. ಯಾರೂ ಆತಂಕಕ್ಕೊಳಗಾಗಬೇಡಿ ಎಂದು ಸ್ಪಷ್ಟಪಡಿಸಿದರು.

ಪಂಚರತ್ನ ರಥಯಾತ್ರೆ : ಪಂಚರತ್ನ ಯಾತ್ರೆ ಜನರ ಸಮೀಪಕ್ಕೆ ಹೋಗುತ್ತಿರುವ ಯಾತ್ರೆಯಾಗಿದೆ. ನಮ್ಮ ಯಾತ್ರೆ ಮತ್ತು ಬೇರೆ ಪಕ್ಷದ ಕಾರ್ಯಕ್ರಮದ ನಡುವೆ ಬಹಳ ಅಂತರವಿದೆ. ಜನರ ಆಶೀರ್ವಾದ ಜನತಾದಳದ ಮೇಲೆ ಇದೆ. ಪಂಚರತ್ನ ಯಾತ್ರೆಗಳ ಮುಖಾಂತರ ನಾಡಿನ ಜನತೆಯ ಕಷ್ಟಗಳಿಗೆ ನಾವು ಸ್ಪಂದಿಸುವುದಾಗಿ ತಿಳಿಸಿದರು. ನೂರಕ್ಕೆ ನೂರು ಕಾಂಗ್ರೆಸ್​​ ಸರ್ಕಾರಕ್ಕೆ ಬರುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಯಾರು ಏನು ಬೇಕೋ ಅದು ಹೇಳುತ್ತಾರೆ. ಆದರೆ ಅಂತಿಮ ತೀರ್ಮಾನ ಮಾಡುವುದು ರಾಜ್ಯದ ಜನರು. ನನಗೆ ಯಾವುದೇ ಸಂಶಯವಿಲ್ಲ. ನನಗೆ ಈ ಬಾರಿ ಜನರು ಸಂಪೂರ್ಣ ಬಹುಮತ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಮಸರಕಲ್ ಗ್ರಾಮದಲ್ಲಿ ಧ್ವಜಾರೋಹಣ : ಇಲ್ಲಿನ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಜ್ಞಾನಸಿಂಧು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಬಾಬಾ ಸಾಹೇಬ್ ಅವರು ಎಲ್ಲರಿಗೂ ಸರಿ ಸಮಾನ ಹಕ್ಕುಗಳನ್ನು ಕಲ್ಪಿಸಿದರು. ನಮ್ಮದು ಸರ್ವಶ್ರೇಷ್ಠ ಸಂವಿಧಾನ. ಸರ್ವಶ್ರೇಷ್ಠ ಪ್ರಜಾತಂತ್ರ ದೇಶ. ನಮ್ಮ ದೇಶದ ಒಕ್ಕೂಟದ ವ್ಯವಸ್ಥೆ ಆದರ್ಶಪ್ರಾಯವಾದದ್ದು. ಆದರೂ ಈ ದೇಶ ಅನೇಕ ಆತಂಕಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.

ಬಡತನ ನಿವಾರಣೆಗೆ ಹೆಚ್ಚು ಒತ್ತು ಕೊಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ ಇನ್ನೂ ಈಡೇರಿಲ್ಲ. ಸಂಪತ್ತು ಸಮಾನ ಹಂಚಿಕೆ ಆಗದೆ ಅವರ ಕನಸು ಅವರ ಆಶಯ ನೆರವೇರದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು, ಮಸರಕಲ್ ವಿರಕ್ತ ಮಠದ ಶ್ರೀ ಶ್ರೀ ಮುರುಗೇಂದ್ರ ಸ್ವಾಮೀಜಿ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮೋದಿ ಕರ್ನಾಟಕಕ್ಕೆ ಎಷ್ಟು ಬಾರಿ ಬಂದರೂ ಏನೂ ಪ್ರಯೋಜನವಿಲ್ಲ : ಡಿ.ಕೆ ಶಿವಕುಮಾರ್ ವ್ಯಂಗ್ಯ

Last Updated :Jan 27, 2023, 8:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.