ETV Bharat / state

ಅಧಿಕಾರ ವಿಕೇಂದ್ರೀಕರಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಡಾ. ಶರಣಪ್ರಕಾಶ ಪಾಟೀಲ್

author img

By

Published : Aug 15, 2023, 6:22 AM IST

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಸ್ಥಳೀಯ ಮಟ್ಟದ ಆಡಳಿತವನ್ನು ಬಲಪಡಿಸಲು ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.

ಅಧ್ಯಕ್ಷರು, ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ
ಅಧ್ಯಕ್ಷರು, ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ

ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್

ರಾಯಚೂರು: ಅಧಿಕಾರ ವಿಕೇಂದ್ರೀಕರಣದಿಂದ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ದೂರದ ಪ್ರದೇಶಗಳಿಂದ ಅಭಿವೃದ್ಧಿ ಮಾಡಲು ಆಗುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ಏನೇ ಸಮಸ್ಯೆಗಳು ಇರಲಿ, ಅವುಗಳಿಗೆ ತಕ್ಷಣದ ಪರಿಹಾರ ಕೊಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪಂಚಮುಖಿ ಗಾಣಧಾಳ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳಲ್ಲಿ ಎರಡನೇ ಅವಧಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಅಧಿಕಾರ ವಿಕೇಂದ್ರೀಕರಣ 73/74ನೇ ತಿದ್ದುಪಡಿ ಮಾಡಿ, ಕಾಂಗ್ರೆಸ್ ಸರ್ಕಾರವು ಸರ್ಕಾರದ ಯೋಜನೆಗಳನ್ನು ಸರ್ಕಾರದ ಸಮಾಜದ ಕಟ್ಟಕಡೆಯ ಪ್ರಜೆಗೆ ಮುಟ್ಟಬೇಕೆಂದು ಅಧಿಕಾರ ವಿಕೇಂದ್ರೀಕರಣವನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧೀಜಿ ಅವರು ಜಾರಿಗೆ ತಂದರು.

ವಿಶೇಷವಾಗಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್​, ಗ್ರಾಮ ಪಂಚಾಯತ್ ಇವುಗಳಿಗೆ ಭದ್ರ ಬುನಾದಿ ಹಾಕಿದ್ದು, ಕಾಂಗ್ರೆಸ್ ಸರ್ಕಾರ. ಗ್ರಾಮ ಪಂಚಾಯಿತಿಗೆ ಹೆಚ್ಚಿನ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ಸೇತರ ಸರ್ಕಾರ ಬಂದಾಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಷ್ಟೊಂದು ಅಭಿವೃದ್ಧಿಯಾಗಿಲ್ಲ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್​ಗಳನ್ನ ಕಾಲ ಕಾಲಕ್ಕೆ ಸರಿಯಾಗಿ ನಡೆಸದೇ ಮುಂದೂಡುತ್ತಾ ಬಂದಿತ್ತು.

ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಸ್ಥಳೀಯ ಮಟ್ಟದ ಆಡಳಿತವನ್ನು ಬಲಪಡಿಸಲು ಶ್ರಮಿಸುತ್ತಿದೆ. ಸ್ಥಳೀಯ ಸರ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿಶೇಷವಾಗಿ ಪಂಚಾಯತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ತಂದಿದ್ದು, ನಮ್ಮ ಸರ್ಕಾರ ಎಂದರು.

ಮನಮೋಹನ್ ಸಿಂಗ್ ಅವರ ಸರ್ಕಾರ ಉದ್ಯೋಗಖಾತರಿ ಯೋಜನೆ ಜಾರಿ ಮಾಡಿ, ವಿಶೇಷವಾಗಿ ಬಡವರು, ಕೂಲಿ ಕಾರ್ಮಿಕರು, ಗುಳೆ ಹೋಗುವುದನ್ನು ತಪ್ಪಿಸಿತು. ಇದರಿಂದ ಸ್ಥಳೀಯವಾಗಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಸಹ ಅಧಿಕಾರವನ್ನು ಸಮರ್ಪಕವಾಗಿ ಬಳಸಿ, ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ 40ರಷ್ಟು ಕಮಿಷನ್ ನೇಮಕಾತಿಯಲ್ಲಿ ಹಗರಣ ಮಾಡುತ್ತಾ ಅಧಿಕಾರ ನಡೆಸಿತು. ರಾಜ್ಯದಲ್ಲಿ ಈಗ ಸ್ಪಷ್ಟ ಬಹುಮತದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಸ್ವಚ್ಛವಾದ ಅಧಿಕಾರ ನೀಡುತ್ತದೆ. ನೇಮಕಾತಿಗಳಲ್ಲಿ ಪಾರದರ್ಶಕವಾಗಿ ತಂದು, ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಲಾಗುತ್ತದೆ. ನುಡಿದಂತೆ ನಡೆಯುವ ಸರ್ಕಾರ ಕಾಂಗ್ರೆಸ್ ಸರ್ಕಾರ. ರಾಹುಲ್ ಗಾಂಧಿ ಜಿ, ಮಲ್ಲಿಕಾರ್ಜುನ ಖರ್ಗೆ ಜಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳು ಡಿ ಕೆ ಶಿವಕುಮಾರ್ ಮತ್ತು ಸಚಿವ ಸಂಪುಟ ನಿರಂತರವಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.

ಇದನ್ನೂ ಓದಿ: Cauvery Water: ತಮಿಳುನಾಡು ಆತುರಪಡುವ ಅಗತ್ಯವಿಲ್ಲ, ಕಾವೇರಿ ನೀರು ನೀಡಲು ಬದ್ಧ- ಡಿಸಿಎಂ ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.