ETV Bharat / state

Cauvery Water: ತಮಿಳುನಾಡು ಆತುರಪಡುವ ಅಗತ್ಯವಿಲ್ಲ, ಕಾವೇರಿ ನೀರು ನೀಡಲು ಬದ್ಧ- ಡಿಸಿಎಂ ಡಿ.ಕೆ.ಶಿವಕುಮಾರ್

author img

By

Published : Aug 14, 2023, 8:31 PM IST

Updated : Aug 14, 2023, 10:35 PM IST

D K Shivakumar: ನಮ್ಮ ಪ್ರಮಾಣದ ಕುಡಿಯುವ ನೀರು ಇಟ್ಟುಕೊಂಡು ತಮಿಳುನಾಡಿಗೆ ನೀರು ನೀಡಲು ಬದ್ಧರಾಗಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್
ಡಿಸಿಎಂ ಡಿ.ಕೆ ಶಿವಕುಮಾರ್

ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿನವರು ಇಷ್ಟು ಆತುರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಅಗತ್ಯ ಇರಲಿಲ್ಲ ಎಂದು ಬೃಹತ್ ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ಕೆಂಪೇಗೌಡ ಬಡಾವಣೆ ಪರಿಶೀಲನೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರವಾಗಿ ನಾವು ನ್ಯಾಯಾಲಯದ ಸಂಕಷ್ಟ ಸ್ಥಿತಿ ನೀರು ಹಂಚಿಕೆ ಸೂತ್ರವನ್ನು ಗೌರವಿಸುತ್ತೇವೆ. ಎರಡೂ ರಾಜ್ಯಗಳ ಹಿತ ಕಾಯಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ತಮಿಳುನಾಡು ಸರಕಾರ ಕಾವೇರಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಅಂಗೀಕಾರ ಆಗಿದೆ. ಈ ಸಂಬಂಧವಾಗಿ ಡಿ.ಕೆ ಶಿವಕುಮಾರ್​ ಮಾತನಾಡಿ, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಹಂಗಾಮಿನಲ್ಲಿ ಬೀಳುತ್ತಿರುವ ಮಳೆ ಹಾಗೂ ಆಣೆಕಟ್ಟುಗಳಿಗೆ ಒಳಹರಿವು ಪ್ರಮಾಣ ಆಧರಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಮಂಡ್ಯದ ರೈತರಿಗೆ ಯಾವುದೇ ರೀತಿಯ ಬಿತ್ತನೆ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಹಾಗು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಈಗಾಗಲೇ ಮನವಿ ಮಾಡಿದ್ದಾರೆ.

ನಮ್ಮ ಅಗತ್ಯ ಪ್ರಮಾಣದ ಕುಡಿಯುವ ನೀರು ಇಟ್ಟುಕೊಂಡು ತಮಿಳುನಾಡಿಗೆ ನೀರು ನೀಡಲು ಬದ್ಧರಾಗಿದ್ದೇವೆ. ನೀರು ಹರಿಸುವ ಸಂಪೂರ್ಣ ಅಧಿಕಾರ ಪ್ರಾಧಿಕಾರದ ಬಳಿ ಇದೆ. ನಾವು ಎರಡೂ ರಾಜ್ಯದ ರೈತರನ್ನು ಉಳಿಸಬೇಕಿದೆ. ಎಲ್ಲರೂ ವಾಸ್ತವಾಂಶ ಅರಿತು ಹೆಜ್ಜೆ ಇಡಬೇಕಿದೆ. ನಮ್ಮ ರೈತರ ಜಮೀನು ಒಣಗಬಾರದು, ಅದೇ ರೀತಿ ತಮಿಳುನಾಡಿನ ರೈತರ ಜಮೀನು ಒಣಗಬಾರದು. ಹಾಗೆ ಕ್ರಮ ಕೈಗೊಳ್ಳಬೇಕಿದೆ. ತಮಿಳುನಾಡಿನ ಅರ್ಜಿ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೇನೆ. ನಾವು ಯಾವುದೇ ಸಂಘರ್ಷಕ್ಕೆ ಮುಂದಾಗುವ ಮನಸ್ಥಿತಿ ಇಲ್ಲ. ನಾವೆಲ್ಲರೂ ಅಣ್ಣತಂಮ್ಮಂದಿರಂತೆ. ಸಂಘರ್ಷಕ್ಕೆ ಇಳಿಯದೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಿಎಂಗೆ ಮಾಜಿ ಸಿಎಂ ಬೊಮ್ಮಾತಿ ಪತ್ರ : ತಮಿಳುನಾಡಿಗೆ ಸೌಥ್ ವೆಸ್ಟ್ ಮತ್ತು ನಾರ್ಥ್ ಈಸ್ಟ್ ಮಾನ್ಸೂನ್ ಮಳೆ ಆಗುತ್ತಿದೆ. ಇದರಿಂದ ಕೆಆರ್​ಎಸ್‌ನಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಗಟ್ಟಿ ನಿಲುವು ತೆಗೆದುಕೊಳ್ಳುವಂತೆ ಮತ್ತು ಕಾವೇರಿ ಜಲಾನಯನ ಪ್ರದೇಶದ ನೀರಿನ ಹಿತಾಸಕ್ತಿ ಕಾಪಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ.

ನಮ್ಮ ನಾಲ್ಕು ಡ್ಯಾಮ್‌ಗಳ ನೀರಿನ ಮಟ್ಟ ಬೆಂಗಳೂರು ನಗರ, ಕಾವೇರಿ ಜಲಾನಯನ ಪ್ರದೇಶದ ನಗರ ಮತ್ತು ಗ್ರಾಮಗಳ ಕುಡಿಯುವ ನೀರಿಗೆ ಕೊರತೆಯಾಗುತ್ತದೆ. ಅದೇ ರೀತಿ ಕಾವೇರಿ ಜಲಾನಯನ ಪ್ರದೇಶದ ಖಾರೀಫ್ ಬೆಳೆಗಳಿಗೆ ನೀರಿನ ಕೊರತೆಯಾಗುತ್ತದೆ. ಹೀಗಾಗಿ ನೀರು ಬಿಡುವುದು ಕರ್ನಾಟಕದ ಜನತೆ ಮತ್ತು ರೈತರನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಹೀಗಾಗಿ ಈ ವಾಸ್ತವಾಂಶದ ಮೇಲೆ ನಾವು ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಪತ್ರದ ಮೂಲಕ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ : Cauvery Water: ತಮಿಳುನಾಡಿಗೆ ನೀರು ಬಿಡಬೇಡಿ, ಕಾವೇರಿ ಜಲಾನಯನ ಜನತೆಯ ಹಿತ ಕಾಪಾಡಿ- ಸಿಎಂಗೆ ಬೊಮ್ಮಾಯಿ ಪತ್ರ

Last Updated :Aug 14, 2023, 10:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.