ETV Bharat / state

ರಾಯಚೂರಿನಲ್ಲಿ ಬಿಜೆಪಿ ಸಮಾವೇಶ: ರಾಹುಲ್​ ಗಾಂಧಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ

author img

By

Published : Apr 17, 2023, 4:20 PM IST

central-minister-prahlad-joshi-slams-rahul-gandhi-and-siddaramaih
ರಾಯಚೂರಿನಲ್ಲಿ ಬಿಜೆಪಿ ಸಮಾವೇಶ : ರಾಹುಲ್​ ಗಾಂಧಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ

ರಾಯಚೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ ನಡೆಸಿದರು.​

ರಾಹುಲ್​ ಗಾಂಧಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ

ರಾಯಚೂರು : ಮೋದಿ ಬರುವ ಮುಂಚೆ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಎಲ್ಲೆಂದರಲ್ಲಿ ಬಾಂಬ್​​​ ಸ್ಫೋಟ ನಡೆಯುತ್ತಿತ್ತು. ಎಲ್ಲೆಂದರಲ್ಲಿ ಗುಂಡಿನ ದಾಳಿ ನಡೆಯುತ್ತಿತ್ತು. ಆದರೆ, ನರೇಂದ್ರ ಮೋದಿ ಅವರು ಬಂದ ಮೇಲೆ ಈಗ ಎಲ್ಲಿಯೇ ಬಾಂಬ್ ಹಾಕಿದರೂ ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುವ ಸ್ವಾತಂತ್ರ್ಯ ಯೋಧರಿಗೆ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತ ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಾಗ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ದಾಖಲೆಗಳನ್ನು ಕೊಡಿ ಎಂದು ಕೇಳಿದ್ದರು. ಆದರೆ, ಪಾಕಿಸ್ತಾನವೇ ನಮ್ಮ ಮೇಲೆ ಭಾರತ ದಾಳಿ ಮಾಡಿದೆ ಎಂದು ಹೇಳಿದರೂ ಇವರು ದಾಖಲೆಗಳನ್ನು ಕೇಳುತ್ತಿದ್ದಾರೆ. ನಮ್ಮ ಸೈನಿಕರು ಹೇಳಿದ ಮೇಲೆ ನಾವು ಅದನ್ನೂ ನಂಬುತ್ತೇವೆ ಎಂದು ಜೋಶಿ ಹೇಳಿದರು.

ಕಾಂಗ್ರೆಸ್​​ನಿಂದ ಸುಳ್ಳು ಭರವಸೆ- ಜೋಶಿ ಆರೋಪ: ಇನ್ನು ಕಾಂಗ್ರೆಸ್​​ ಉಚಿತ ವಿದ್ಯುತ್​ ನೀಡುವ ಬಗ್ಗೆ ಹೇಳುತ್ತಿದ್ದಾರೆ. 200 ಯುನಿಟ್​​ ವಿದ್ಯುತ್​ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಉಚಿತ ಮತ್ತು ಖಚಿತ ಎಂದು ಅನೇಕ ಉಚಿತ ಯೋಜನೆಗಳನ್ನು ನೀಡುವುದಾಗಿ ಹೇಳುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಇದ್ದಾಗ ವಿದ್ಯುತ್​ ನೀಡಲಿಲ್ಲ. ವಿದ್ಯುತ್​ ಉತ್ಪಾದನೆ ಮಾಡುವ ತಾಕತ್ತೂ ಕೂಡ ಕಾಂಗ್ರೆಸ್​​ಗೆ ಇರಲಿಲ್ಲ. 2013ರಿಂದ 2018ರವೆರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಆಗ ಯಾಕೆ ವಿದ್ಯುತ್​ ಉಚಿತವಾಗಿ ಕೊಡಲಿಲ್ಲ ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದರು. ಕಾಂಗ್ರೆಸ್​ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ. ಈ ಮೂಲಕ ಬಡವರಿಗೆ ದಾರಿ ತಪ್ಪಿಸುವ ಕಾರ್ಯವನ್ನು ಕಾಂಗ್ರೆಸ್​ ಮಾಡುತ್ತಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಭ್ರಷ್ಟಾಚಾರ ನಿರ್ಮೂಲನೆ, ವ್ಯವಸ್ಥೆ ಸುಧಾರಣೆ ಹಾಗೂ ಪಾರದರ್ಶಕವಾಗಿ ವ್ಯವಹಾರಗಳು, ಯೋಜನೆಗಳನ್ನು ಜಾರಿಗೆ ತರುವ ಕೆಲಸವನ್ನು ಇಂದಿನ ಬಿಜೆಪಿ ಸರ್ಕಾರ ಮಾಡುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರ ಇತ್ತೀಚಿಗೆ ಆಧಾರ ಹಾಗೂ ಪ್ಯಾನ್ ಜೋಡಣೆ ಮಾಡುವಂತೆ ಆದೇಶಿಸಿತ್ತು. ದಾಖಲೆಗಳನ್ನು ಜೋಡಣೆ ಮಾಡುವುದಕ್ಕೆ ನನ್ನಲ್ಲಿ ಆಧಾರ ಕಾರ್ಡ್ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕೊರೊನಾ ಸಂದರ್ಭದಲ್ಲಿ ನಮ್ಮ ಪ್ರಧಾನಿ ಎಲ್ಲರಿಗೂ ರೇಷನ್ ವಿತರಣೆ ಮಾಡಿದರು. ನಮ್ಮ ದೇಶದ 230 ಕೋಟಿ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಿದರು. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್​​ ಮುಂತಾದ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮೋದಿ ನೇತೃತ್ವದಲ್ಲಿ ಭ್ರಷ್ಟಾಚಾರ, ಕಮಿಷನ್ ಮುಕ್ತ ಭಾರತವನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಪಟ್ಟಣದ ಜಹಿರುದ್ದೀನ್ ಸರ್ಕಲ್ ನಿಂದ ವೇದಿಕೆಯವರೆಗೂ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಸೇರಿದಂತೆ ಹಲವು ಮುಖಂಡರು ‌ಭಾಗವಹಿಸಿದ್ದರು. ದೇವದುರ್ಗ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಪಾಲಿಕೆ ಸದಸ್ಯರು, ಪಕ್ಷದ ಪದಾಧಿಕಾರಿಗಳೊಂದಿಗೆ ಸಚಿವ ಪ್ರಹ್ಲಾದ್ ಜೋಶಿ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.