ETV Bharat / state

ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಲು ಕಾರಣಗಳೇನು?: ತಜ್ಞರು ಸಲಹೆಗಳೇನು?

author img

By

Published : Feb 25, 2023, 7:52 PM IST

cybercrime
ತಜ್ಞ ರೇಣುಕಾರಾಧ್ಯ

ಇತ್ತೀಚೆಗೆ ದೇಶಾದ್ಯಂತ ಪ್ರತಿನಿತ್ಯ ಸೈಬರ್ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಈ ಬಗ್ಗೆ ಪ್ರತಿನಿತ್ಯ ದೂರುಗಳು ದಾಖಲಾಗುತ್ತಿವೆ. ಆದರೆ, ದಾಖಲಾದ ದೂರುಗಳ‌ ಬಗ್ಗೆ ತನಿಖೆ ನಡೆಸುವಾಗ, ಮಾಹಿತಿ ಕೊರತೆಯಿಂದ ಪ್ರಕರಣಗಳನ್ನು ಭೇದಿಸುವುದು ಕಷ್ಟವಾಗಿದೆ.

ಸೈಬರ್ ಕ್ರೈಂ ಕುರಿತು ಮಾಹಿತಿ ನೀಡಿದ ತಜ್ಞರಾದ ರೇಣುಕಾರಾಧ್ಯ

ಮೈಸೂರು: ಇಂದಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಸ್ಮಾರ್ಟ್​ಫೋನ್ ಇದ್ದೇ ಇರುತ್ತದೆ. ಇಂತಹ ಸ್ಮಾರ್ಟ್​ಫೋನ್​ಗಳಿಗೆ ಬರುವ ವಿಪರೀತ ಕರೆ, ಸಂದೇಶಗಳು ಹಾಗೂ ಲಿಂಕ್​ಗಳಿಂದ ಲಕ್ಷಾಂತರ ರೂಪಾಯಿ ಕ್ಷಣ ಮಾತ್ರದಲ್ಲಿ‌ ಕಳೆದುಕೊಂಡ ಉದಾಹರಣೆಗಳಿವೆ. ಹೀಗಾಗಿ, ಪ್ರತಿಯೊಬ್ಬರಿಗೂ ಸೈಬರ್ ಅಪರಾಧದ ಬಗ್ಗೆ ತಿಳುವಳಿಕೆ ಮುಖ್ಯ. ಈ ಕುರಿತು ತಜ್ಞರು ಹಾಗೂ ಕರ್ನಾಟಕ ಪೊಲೀಸ್​ ಅಕಾಡೆಮಿಯ ಡಿವೈಎಸ್​ಪಿ ರೇಣುಕಾರಾಧ್ಯ 'ಈಟಿವಿ ಭಾರತ'ದೊಂದಿಗೆ ಸೈಬರ್ ಕ್ರೈಂ ಹೇಗೆ ನಡೆಯುತ್ತದೆ, ಯಾವ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಹಾಗೂ ಸೈಬರ್ ಕ್ರೈಂ ಆದ ತಕ್ಷಣ ಏನು ಮಾಡಬೇಕು ಎಂಬ ಮಾಹಿತಿ ನೀಡಿದ್ದಾರೆ.

ದಿನನಿತ್ಯ ಜಾಲತಾಣಗಳಲ್ಲಿ ಹಲವಾರು ಮೆಸೇಜ್​ಗಳನ್ನು ಕಳುಹಿಸಿ, ಅನೇಕ ಆಫರ್​ಗಳನ್ನು ನೀಡಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತೇವೆ ಎಂಬ ಸಂದೇಶ ಹಾಗೂ ನಿಮ್ಮ ಬ್ಯಾಂಕ್​ನಲ್ಲಿ ಆಧಾರ್‌ ಲಿಂಕ್ ಮಾಡುತ್ತೇವೆಂದು ಒಟಿಪಿಗಳನ್ನು ಫೋನ್ ಮಾಡಿ ಪಡೆದು ವಂಚಿಸುವ ಪ್ರಕರಣಗಳು ನಡೆಯುತ್ತಿರುತ್ತವೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರವಾಗಿರಬೇಕು. ಮೈಸೂರು ಜಿಲ್ಲೆ ಸೈಬರ್ ಪ್ರಕರಣದಲ್ಲಿ ಬೆಂಗಳೂರಿನ ನಂತರ ಎರಡನೇ ಸ್ಥಾನದಲ್ಲಿದ್ದು, ಕಳೆದ 2021 ರಲ್ಲಿ 1200, 2022 ರಲ್ಲಿ 2,449 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕೇವಲ ಎರಡು ವರ್ಷಗಳಲ್ಲಿ 95 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಆನ್​ಲೈನ್ ವಂಚನೆಗೆ ಒಳಗಾಗುವವರು, ತಕ್ಷಣ ಸೈಬರ್ ಠಾಣೆಗೆ ದೂರು ನೀಡಬೇಕು. ಇಲ್ಲದಿದ್ದರೆ ತಾವು ವಂಚನೆಗೊಳಗಾದ ಹಣವನ್ನು ವಾಪಸ್ ಪಡೆಯುವುದು ಕಷ್ಟ. ಜೊತೆಗೆ ಜಾಲತಾಣಗಳಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಮೈಸೂರು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ತಿಳಿಸಿದರು.

ಇದನ್ನೂ ಓದಿ: ಹೆಚ್ಚುತ್ತಿರುವ ಸೈಬರ್ ಕ್ರೈಂ.. ನಿಯಂತ್ರಣಕ್ಕೆ ಒಡಂಬಡಿಕೆ ಮಾಡಿಕೊಂಡ ಸೈಫರ್ಮಾ ಮತ್ತು ಟೆಕ್ ಮಾರ್ಕ್ ಕಂಪನಿ

ಸೈಬರ್ ವಂಚನೆ ಬಗ್ಗೆ ತಜ್ಞರಾದ ರೇಣುಕಾರಾಧ್ಯ ಹೇಳುವುದೇನು: ಸೈಬರ್ ಕ್ರೈಂಗಳು ಜಾಸ್ತಿ ಆಗಲು ಕಾರಣ ತಿಳುವಳಿಕೆ ಇಲ್ಲದಿರುವುದು. ಪ್ರತಿಯೊಂದು ಕ್ರಿಮಿನಲ್ ಪ್ರಕರಣಗಳಲ್ಲೂ ಸೈಬರ್ ಲಿಂಕ್ ಇರುತ್ತದೆ. ಈ ಬಗ್ಗೆ ಎಚ್ಚರವಾಗಿರಬೇಕು. ಏಕೆಂದರೆ, ಸೈಬರ್ ಕ್ರಿಮಿನಲ್​ಗಳು ತೋರಿಸುವ ಆಮಿಷಗಳಿಗೆ ಒಳಗಾಗಿ, ಅವರಿಗೆ ಪರ್ಸನಲ್ ಮಾಹಿತಿಗಳನ್ನು ನೀಡಿದರೆ ವಂಚನೆ ಆಗುವುದು ಖಚಿತ. ಇತ್ತೀಚೆಗೆ ಮಕ್ಕಳಲ್ಲಿ ವಂಚನೆ ಪ್ರಕರಣಗಳು ಜಾಸ್ತಿಯಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವೆನೆಂದರೆ ಜಾಲತಾಣಗಳನ್ನ ಸುರಕ್ಷಿತವಾಗಿ ಬಳಸದೇ ಇರುವುದು. ಇದರ ಬಗ್ಗೆ ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ತಿಳುವಳಿಕೆ ನೀಡಬೇಕು ಎನ್ನುತ್ತಾರೆ.

ಇದನ್ನೂ ಓದಿ: ಸೈಬರ್ ವಂಚನೆಗೆ ಕಡಿವಾಣ ಹಾಕಲು ಖಾಸಗಿಯವರೊಂದಿಗೆ ಕೈಜೋಡಿಸಬೇಕಿದೆ ಸರ್ಕಾರ!

ಸೈಬರ್ ವಂಚನೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ : ನಿಮಗೆ ಬಹುಮಾನ ಬಂದಿದೆ ಹಾಗೂ ಬ್ಯಾಂಕ್​ನ ನಿಮ್ಮ ಮೂಲ ದಾಖಲಾತಿಗಳ ಅಪ್ಡೇಟ್ ಮಾಡಲು ದೂರವಾಣಿ ಕರೆಮಾಡಿ, ಬ್ಯಾಂಕ್​ನ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಬಗ್ಗೆ ‌ಫೋನ್​ನಲ್ಲಿ ಮಾಹಿತಿ ಕೇಳಿದರೆ ಯಾರು ನೀಡಬೇಡಿ. ಏನಾದರೂ ವಂಚನೆಗೊಳಗಾದರೆ ತಕ್ಷಣ ಬ್ಯಾಂಕ್​ಗೆ ಹೋಗಿ ನಿಮ್ಮ ಖಾತೆಯನ್ನು ಲಾಕ್ ಮಾಡಿಸಿ, ಆನಂತರ ಸೈಬರ್ ಠಾಣೆಗೆ ತಡ ಮಾಡದೆ ದೂರು ನೀಡಿದರೆ ನೀವು ಕಳೆದುಕೊಂಡ ಹಣವನ್ನು ಪುನಃ ಪಡೆಯಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಸೈಬರ್ ಕ್ರೈಂ ವೆಬ್‌ ಸೈಟ್ ಆರಂಭಿಸಿದ್ದು, ಅಲ್ಲಿಗೆ ಮಾಹಿತಿ ನೀಡಬಹುದು ಹಾಗೂ 1098 ಟೋಲ್ ಫ್ರೀ ನಂಬರ್​ಗೆ ಕರೆ ಮಾಡಬಹುದು. ಈ ರೀತಿ ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ಇದರ ಜೊತೆಗೆ ಸೈಬರ್ ಕ್ರೈಂ ಬಗ್ಗೆ ಹೆಚ್ಚಾಗಿ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ಹಂತದಲ್ಲಿ ತಿಳುವಳಿಕೆ ನೀಡಲು ಶಿಕ್ಷಕರಿಗೆ ಸಂಪನ್ಮೂಲ‌ ವ್ಯಕ್ತಿಗಳಿಂದ ತರಬೇತಿ ಕೊಡಿಸಬೇಕು ಎಂದು 'ಈಟಿವಿ ಭಾರತ'ಕ್ಕೆ ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.