ETV Bharat / state

72ನೇ ಗಣರಾಜ್ಯೋತ್ಸವ.. ಸಚಿವ ಎಸ್​ ಟಿ ಸೋಮಶೇಖರ್​ ಧ್ವಜಾರೋಹಣ ನೆರವೇರಿಸಿ ಭಾಷಣ..

author img

By

Published : Jan 26, 2021, 3:38 PM IST

simple republic day celebration in  mysore
ಮೈಸೂರು

ರಾಜ್ಯದಲ್ಲಿ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಗೊಳಿಸಿದ ಲಾಕ್‍ಡೌನ್ ಕ್ರಮದಿಂದಾಗಿ ಸಂಕಷ್ಟಕ್ಕೊಳಗಾದ ಕಾರ್ಮಿಕರು, ಕೃಷಿಕರು, ಕೈಗಾರಿಕೋದ್ಯಮಿಗಳು ಸೇರಿ ಅನೇಕ ವಲಯಗಳಿಗೆ ಒಟ್ಟು 2,272 ಕೋಟಿ ರೂ. ಪ್ಯಾಕೇಜ್ ಘೋಷಿಸಿ ಸಂಕಷ್ಟದ ಕಾಲದಲ್ಲಿ ರಾಜ್ಯ ಸರ್ಕಾರ ಆರ್ಥಿಕ ಹೊರೆ ಕಡಿಮೆ ಮಾಡುವ ಮೂಲಕ ಮಾನವೀಯತೆ ಮೆರೆದಿದೆ..

ಮೈಸೂರು : ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ 72ನೇ ಗಣರಾಜ್ಯೋತ್ಸವ ಸರಳವಾಗಿ ಆಚರಿಸಲಾಯಿತು. ಪೊಲೀಸ್ ತುಕಡಿಗಳು ಆಕರ್ಷಕವಾಗಿ ಪಥ ಸಂಚಲನ ನಡೆಸಿದವು.

ಮೈಸೂರಿನಲ್ಲಿ ಆಕರ್ಷಕ ಪಥ ಸಂಚಲನದ ದೃಶ್ಯ..

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಬಾರಿ ಬ್ರೇಕ್ ನೀಡಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನೀಡುವ ಲ್ಯಾಪ್‌ಟಾಪ್‌ನ ಜಿಲ್ಲಾ ಉಸ್ತುವಾರಿ ಸಚಿವರು ಸಾಂಕೇತಿವಾಗಿ ವಿತರಣೆ ಮಾಡಿದರು.

ಗಣರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿದ ಸಚಿವ ಎಸ್‌.ಟಿ.ಸೋಮಶೇಖರ್ ಮಾತನಾಡಿ, ಭಾರತೀಯರಾದ ನಾವು 72ನೇ ಗಣರಾಜ್ಯೋತ್ಸವವನ್ನು ಇಂದು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ಗಣರಾಜ್ಯೋತ್ಸವವು ವರ್ಷದ ಮೊದಲ ರಾಷ್ಟ್ರೀಯ ಹಬ್ಬವಾಗಿದೆ. ಈ ಗಣರಾಜ್ಯೋತ್ಸವವನ್ನು ಗೌರವ, ಅಭಿಮಾನದಿಂದ ಬಹಳ ಅರ್ಥಪೂರ್ಣವಾಗಿ ಆಚರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.

ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿ ಜಗತ್ತಿನ ಶ್ರೇಷ್ಠ ಸಂವಿಧಾನ ರಚನೆಯಾಯಿತು. ಈ ಸಂವಿಧಾನ ಅನೇಕ ಪರಿಶೀಲನೆ ಹಾಗೂ ತಿದ್ದುಪಡಿಗಳ ನಂತರ ನವೆಂಬರ್ 26, 1949ರಂದು ಅಂಗೀಕರಿಸಲ್ಪಟ್ಟಿತು. ಜನವರಿ 26, 1950ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು.

ಇಂತಹ ಶ್ರೇಷ್ಠ ಸಂವಿಧಾನದ ಅಡಿಯಲ್ಲಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಜಗತ್ತಿನ ಎಲ್ಲೆಡೆ ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಈ ಸೋಂಕು ತಡೆಗಟ್ಟಲು ಅನಿವಾರ್ಯವಾಗಿ ಲಾಕ್‍ಡೌನ್‌ನಂತಹ ಕಠಿಣ ಕ್ರಮ ಜಾರಿಗೊಳಿಸಬೇಕಾಯಿತು.

ಈ ಬಿಕ್ಕಟ್ಟಿನಿಂದ ಜನಜೀವನ ಅಸ್ತವ್ಯಸ್ತವಾಗಿ ಹಲವಾರು ಕ್ಷೇತ್ರಗಳಲ್ಲಿ ನಷ್ಟವೂ ಸಹ ಉಂಟಾಯಿತು. ಈಗ ಹಂತ ಹಂತವಾಗಿ ಆರ್ಥಿಕತೆ ಪುನಶ್ಚೇತನಗೊಳ್ಳುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಗೊಳಿಸಿದ ಲಾಕ್‍ಡೌನ್ ಕ್ರಮದಿಂದಾಗಿ ಸಂಕಷ್ಟಕ್ಕೊಳಗಾದ ಕಾರ್ಮಿಕರು, ಕೃಷಿಕರು, ಕೈಗಾರಿಕೋದ್ಯಮಿಗಳು ಸೇರಿ ಅನೇಕ ವಲಯಗಳಿಗೆ ಒಟ್ಟು 2,272 ಕೋಟಿ ರೂ. ಪ್ಯಾಕೇಜ್ ಘೋಷಿಸಿ ಸಂಕಷ್ಟದ ಕಾಲದಲ್ಲಿ ರಾಜ್ಯ ಸರ್ಕಾರ ಆರ್ಥಿಕ ಹೊರೆ ಕಡಿಮೆ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.

ಆತ್ಮ ನಿರ್ಭರ ಭಾರತ ಯೋಜನೆ ಜಾರಿಗೊಳಿಸುವಲ್ಲಿ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿ ಇದೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ಹೇಳಿವೆ. ಇದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕೋವಿಡ್-19 ನಿಯಂತ್ರಣದಲ್ಲಿ ಕರ್ನಾಟಕವು ಇತರ ರಾಜ್ಯಗಳಿಗಿಂತ ಮುಂದಿದ್ದು, ಮಾದರಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ಲಾಘಿಸಿರುವುದು ನಮ್ಮ ಮುಖ್ಯಮಂತ್ರಿಯವರು 24x7 ರೀತಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಪ್ರಧಾನಮಂತ್ರಿಯವರ ‘ಆತ್ಮನಿರ್ಭರ ಭಾರತ’ ಅಭಿಯಾನದ ಪರಿಕಲ್ಪನೆಯು ಕೋವಿಡ್-19 ಸಾಂಕ್ರಮಿಕ ರೋಗಕ್ಕೆ ಲಸಿಕೆ ಕಂಡು ಹಿಡಿಯುವಲ್ಲಿಯು ಸಾಕಾರಗೊಂಡಿದೆ. ಲಸಿಕೆ ವಿತರಣೆಯಲ್ಲಿಯೂ ಕರ್ನಾಟಕವೇ ಮುಂದೆ ಇರುವುದು ಸಂತಸದ ಸಂಗತಿಯಾಗಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಭಾರತ ಸರ್ಕಾರವು 1.16 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲು ಮುಂದಾಗಿದೆ.ಕಿಸಾನ್ ಸಮ್ಮಾನ್ ಯೋಜನೆಯಡಿ ಭಾರತ ಸರ್ಕಾರ ರೈತರಿಗೆ 6 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡುತ್ತಿದೆ. ಇದರೊಂದಿಗೆ ಇನ್ನೂ 4 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ವತಿಯಿಂದ ನೀಡಿದ್ದಾರೆ.

ಸಹಕಾರ ಇಲಾಖೆಯು ಸಹ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ನೆರವಾಗುವ ದೃಷ್ಟಿಯಿಂದ ಸಹಕಾರ ಬ್ಯಾಂಕ್‍ಗಳ ಮೂಲಕ 24 ಲಕ್ಷದ 50 ಸಾವಿರ ರೈತರಿಗೆ 15 ಸಾವಿರದ 300 ಕೋಟಿ ರೂ.ಗಳ ಸಾಲ ಸೌಲಭ್ಯ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 19 ಲಕ್ಷದ 50 ಸಾವಿರ ರೈತರಿಗೆ 12 ಸಾವಿರದ 500 ಕೋಟಿ ರೂ.ಗಳ ಸಾಲ ಸೌಲಭ್ಯವನ್ನು ನೀಡಲಾಗಿದೆ ಎಂದರು.

ಸಾಲ ಸೌಲಭ್ಯವು ಪರಿಣಾಮಕಾರಿಯಾಗಿ ರೈತರಿಗೆ ತಲುಪುವುದನ್ನು ಪರಿಶೀಲಿಸಲು ಖುದ್ದು ಡಿಸಿಸಿ ಬ್ಯಾಂಕ್‍ಗಳಿಗೆ ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಶೇ.82ರಷ್ಟು ಸಾಧನೆಯಾಗಿದೆ. ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದು ಅವರ ಸಮಸ್ಯೆಗಳನ್ನು ತಳಮಟ್ಟದಿಂದಲೇ ಪರಿಹರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಇನ್ನು ಮುಂದೆ ಫೆಬ್ರವರಿಯಿಂದ ಪ್ರತಿ ತಿಂಗಳ ಮೂರನೇ ಶನಿವಾರದಂದು ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ನೀಡಿ, ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇದರಿಂದ ಹಳ್ಳಿಯ ಜನರು ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆಯುವುದು ತಪ್ಪುತ್ತದೆ ಎಂದು ಹೇಳಿದರು.

ಕಂದಾಯ ಇಲಾಖೆ ಕೆಲಸಗಳ ಪ್ರಗತಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮೈಸೂರು ಜಿಲ್ಲೆ 3ನೇ ಸ್ಥಾನದಲ್ಲಿರುವುದು ಸಂತೋಷದ ವಿಷಯ. ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪ್ರೋತ್ಸಾಹಿಸಲಾಗಿದೆ. ಮೈಸೂರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೋವಿಡ್-19ರ ಪರಿಸ್ಥಿತಿಯನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸಿದ್ದೇವೆ. ಹೆಚ್ಚು- ಹೆಚ್ಚು ಪರೀಕ್ಷೆಗಳನ್ನು ಮಾಡಿದ ಫಲವಾಗಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲು ಸಾಧ್ಯವಾಗಿದೆ. ಇದಕ್ಕಾಗಿ ಹಗಲು ರಾತ್ರಿ ಶ್ರಮಿಸಿದ ಎಲ್ಲಾ ಕೊರೊನಾ ವಾರಿಯರ್ಸ್‍ಗಳಿಗೆ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಈಗ ಕೊರೊನಾಗೆ ಲಸಿಕೆ ವಿತರಿಸಲಾಗುತ್ತಿದ್ದು, ಮೈಸೂರು ಜಿಲ್ಲೆಗೆ ಈವರೆಗೆ ಸುಮಾರು 42 ಸಾವಿರ ಡೋಸ್ ಲಸಿಕೆ ಬಂದಿದೆ.‘ಆತ್ಮ ನಿರ್ಭರ್ ಭಾರತ’ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಆಹಾರ ಸಂಸ್ಕರಣಾ ಸಣ್ಣ ಉದ್ಯಮಗಳ ಕ್ರಮಬದ್ಧಗೊಳಿಸುವಿಕೆ’ ಯೋಜನೆಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.

ಈ ಯೋಜನೆಯಡಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ಕ್ಕೆ ಉತ್ತೇಜನ ನೀಡಿ, ರೈತರಿಗೆ ಹೆಚ್ಚಿನ ಅನುಕೂಲ ಮಾಡಲು ಈಗಾಗಲೇ ಸೂಕ್ತ ತರಬೇತಿ ನೀಡಲಾಗುತ್ತಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯಲ್ಲಿ ಬಾಳೆಯನ್ನು ಆಯ್ಕೆ ಮಾಡಲಾಗಿದೆ. ಈ ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್​ನಲ್ಲಿ ರೈತರು ಬಾಳೆ ಬೆಳೆಯುತ್ತಿದ್ದಾರೆ. ಈ ಉತ್ಪನ್ನದ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ, ಮಾರುಕಟ್ಟೆ ಪ್ರೋತ್ಸಾಹಿಸಲು ರೈತರಿಗೆ ತರಬೇತಿ ನೀಡಲಾಗುತ್ತದೆ ಎಂದರು.

ಅತಿ ವೇಗವಾಗಿ ತನ್ನ ಆರ್ಥಿಕ ಕ್ಷೇತ್ರವನ್ನು ಬೆಳೆಸಿಕೊಳ್ಳುತ್ತಿರುವ ನಗರಗಳ ಸಾಲಿನಲ್ಲಿ ಮೈಸೂರು ಸಹ ಮುಂಚೂಣಿಯಲ್ಲಿದೆ. ಕೋವಿಡ್-19 ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದ್ದ ಕೈಗಾರಿಕೋದ್ಯಮಗಳು ಈಗ ಹಂತ ಹಂತವಾಗಿ ಚೇತರಿಕೆ ಕಾಣುತ್ತಿವೆ. ಲಾಕ್‍ಡೌನ್ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಇಂತಹ ಸ್ಥಿತಿಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಿ ಕೈಗಾರಿಕೋದ್ಯಮಿಗಳ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಿವೆ ಎಂದರು.

ಮೈಸೂರು ಮಹಾನಗರದಲ್ಲಿ 108 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಬೀದಿ ದೀಪಗಳನ್ನು ಎಲ್.ಇ.ಡಿ. ದೀಪಗಳಾಗಿ ಪರಿವರ್ತಿಸಲು ಸರ್ಕಾರದ ಅನುಮೋದನೆ ದೊರೆತಿದೆ. ಮುಂದಿನ ಒಂದು ವರ್ಷದೊಳಗೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ರು .ಭಾರತ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ಪ್ರತೀ ವರ್ಷ ನಡೆಸುವ ಸ್ವಚ್ಛ ನಗರಿ ಸ್ಪರ್ಧೆಯಲ್ಲಿ ದೇಶದಲ್ಲೇ ಅತ್ಯಂತ ಸ್ವಚ್ಛನಗರ ಎಂಬ ಗರಿಮೆಯನ್ನು ಮೈಸೂರು ನಗರ ಅನೇಕ ಬಾರಿ ಮುಡಿಗೇರಿಸಿಕೊಂಡಿದೆ.

ಕಳೆದ ವರ್ಷ 3 ರಿಂದ 10 ಲಕ್ಷ ಜನಸಂಖ್ಯೆಯ ನಗರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಮತ್ತು ಕಸಮುಕ್ತ ನಗರಗಳಲ್ಲಿ 5 ಸ್ಟಾರ್‍ಗಳನ್ನು ಸಹ ಪಡೆದಿದೆ. ಈ ಬಾರಿಯೂ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಈಗಾಗಲೇ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ನಡೆಯುತ್ತಿದ್ದು, ಮೈಸೂರು ಜನತೆಯು ಸಕರಾತ್ಮಕವಾಗಿ ಸ್ಪಂದಿಸುವ ಮೂಲಕ ನಮ್ಮ ನಗರವನ್ನು ಸ್ವಚ್ಛನಗರ ಪಟ್ಟಕ್ಕೇರಿಸಲು ಸಹಕಾರ ನೀಡಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ನಗರದ ಸ್ವಚ್ಛತೆಯನ್ನು ಕಾಪಾಡಲು ಮೈಸೂರು ನಗರಕ್ಕೆ ಕೆಸರೆ ಮತ್ತು ರಾಯನಕೆರೆಯಲ್ಲಿ 41 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುತ್ತದೆ. ಮೈಸೂರು ಭಾಗದ ಜನರ ಅನುಕೂಲಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉತೃಷ್ಟ ಗುಣಮಟ್ಟದ ಗುಂಪು ವಸತಿ ಮನೆಗಳನ್ನು ನಿರ್ಮಿಸಿ ವಿತರಿಸಲು ಉದ್ದೇಶಿಸಲಾಗಿದೆ.

ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಈ ಯೋಜನೆಯಡಿ ಸುಮಾರು 4000 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಕೋವಿಡ್-19 ಲಸಿಕೆ ಬಂದಿದ್ದರೂ ಸಹ ನಾವು ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಬಾರದು. ಕೊರೊನ ಸೋಂಕು ಸಂಪೂರ್ಣವಾಗಿ ನಿವಾರಣೆ ಆಗುವವರೆಗೂ ಮುಂಜಾಗೃತ ಕ್ರಮವಾಗಿ ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ನಿಲ್ಲಿಸಬಾರದು ಎಂದು ಸಚಿವ ಎಸ್​ಟಿ ಸೋಮಶೇಖರ್​ ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.