ETV Bharat / state

ದಲಿತರ ಆರ್ಥಿಕ ಸ್ವಾವಲಂಬನೆಗೆ ನಮ್ಮ ಸರ್ಕಾರ ಬದ್ಧ: ಡಾ. ಹೆಚ್‌ ಸಿ ಮಹದೇವಪ್ಪ

author img

By ETV Bharat Karnataka Team

Published : Sep 23, 2023, 8:23 PM IST

Minister Dr HC Mahadevappa inaugurated the program
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಡಾ. ಹೆಚ್​ ಸಿ ಮಹದೇವಪ್ಪ

ತಳ ಸಮುದಾಯದ ಜನರನ್ನು ಆರ್ಥಿಕವಾಗಿ ಸದೃಢವಾಗಿಸುವುದೇ ನಮ್ಮ ಸರ್ಕಾರದ ಧ್ಯೇಯವಾಗಿದೆ ಎಂದು ಸಚಿವ ಡಾ ಎಚ್​ ಸಿ ಮಹದೇವಪ್ಪ ತಿಳಿಸಿದ್ದಾರೆ.

ಮೈಸೂರು:‌ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಆರ್ಥಿಕ ಸಬಲರಾಗಿ ಸ್ವಾವಲಂಬಿ ಜೀವನ ನಡೆಸುವ ಮೂಲಕ ಗೌರವಯುತವಾಗಿ ಬದುಕಲು ನೆರವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ತಿಳಿಸಿದರು.

ಶನಿವಾರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ ಬಳಿಯ ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆಯ ತರಬೇತಿ ಕಟ್ಟಡ ಲೋಕಾರ್ಪಣೆಗೊಳಿಸಿ ಹಾಗೂ ಸಹಕಾರ ಸಂಘದ ಸೂಪರ್ ಮಾರ್ಕೆಟ್ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿದ ಬಳಿಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಳಸಮುದಾಯದ ಜನರಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಸಮಾನತೆ ದೊರೆತು ಎಲ್ಲರನ್ನೂ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಸಮುದಾಯದ ಜನರು ಆರ್ಥಿಕವಾಗಿ ಸದೃಢವಾಗಬೇಕೆಂಬುದೇ ನಮ್ಮ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು.

ನನಗೆ ನಿಜವಾದ ರಾಜಕೀಯ ಬೆನ್ನೆಲುಬು ರಾಜ್ಯದ ದಲಿತ ಸಂಘಟನೆಗಳು. ಇದನ್ನು ನಾನು ವಿಧಾನಸಭೆಯಲ್ಲೂ ಹೇಳಿದ್ದೇನೆ. ಚುನಾವಣೆಯಲ್ಲಿ ಗೆದ್ದ ಬಳಿಕ ನಾನು ಮಂತ್ರಿ ಸ್ಥಾನಕ್ಕೆ ಯಾರಿಗೂ ಬೇಡಿಕೆ ಇಡುವುದಿಲ್ಲ. ಆದರೂ ನನಗೆ ಮಂತ್ರಿಸ್ಥಾನ ಸಿಗುವುದು ನಿಮ್ಮೆಲ್ಲರ ಅಭೂತಪೂರ್ವ ಬೆಂಬಲದಿಂದ ಎಂದರು.

ಡಾ. ಬಿ ಆರ್ ಅಂಬೇಡ್ಕರ್ ಅವರು ಹೇಳಿದಂತೆ ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಪರಿಕಲ್ಪನೆ ಅಡಿಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯನ್ನು ನಮ್ಮ ಸರ್ಕಾರ ಜಾರಿ ಮಾಡಿತು. ಈ ಹಣವನ್ನು ಅನ್ಯ ಉದ್ದೇಶಕ್ಕೆ ಬಳಿಸಿಕೊಳ್ಳುವ 7ಡಿ ಅನ್ನು ರದ್ದು ಮಾಡಲಾಗಿದೆ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ಶ್ರಮ ಬಹಳಷ್ಟಿತ್ತು ಎಂದು ಹೇಳಿದರು.

ಕೋಮುವಾದ, ಮತೀಯವಾದ ಪ್ರಜಾಪ್ರಭುತ್ವದ ಬುಡವನ್ನು ಅಲ್ಲಾಡಿಸಲು ಪ್ರಯತ್ನಿಸುತ್ತಿವೆ. ಈ ಶಕ್ತಿಗಳನ್ನು ಹಿಮ್ಮೆಟ್ಟಿಸಲು ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವ ದಿನ ಆಚರಿಸಲು ನಿರ್ಧರಿಸಿದೆವು. ಅದರಂತೆ ಸೆ. 15 ರಂದು ಎರಡು ಕೋಟಿಗೂ ಹೆಚ್ಚು ಜನರು ನೋಂದಣಿಯಾಗಿ ರಷ್ಯಾ, ಅಮೆರಿಕಾ, ಲಂಡನ್ ಸೇರಿದಂತೆ ಅನೇಕ ದೇಶದ ಜನರು ಸಂವಿಧಾನ ಪೀಠಿಕೆ ಓದಿದ್ದಾರೆ‌. ಸಂವಿಧಾನದ ಆಶಯ ಇಡೀ ಪ್ರಪಂಚಕ್ಕೆ ತಲುಪಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಶೇ.9 ರಷ್ಟು ಎಸ್‌ಸಿ, ಎಸ್‌ಟಿ ಜನರು ಭೂಮಿ ಹೊಂದಿದ್ದಾರೆ. ಅದರಲ್ಲೂ ಬಹಳಷ್ಟು ಜಮೀನಿಗೆ ಖಾತೆಯೇ ಸರಿಯಾಗಿ ಇರುವುದಿಲ್ಲ. ಹೀಗಿದ್ದಾಗ ಫಸಲ್ ಭೀಮಾ ಯೋಜನೆಯ ಸೌಲಭ್ಯ ಹೇಗೆ ದೊರಕುತ್ತದೆ. ಈ ಸಂಬಂಧ ಕಂದಾಯ ಮಂತ್ರಿಗಳ ಜೊತೆ ಚರ್ಚಿಸಿದ್ದು, ಪರಿಹಾರ ಕಂಡುಕೊಳ್ಳಲಾಗುವುದು. ಅದರಂತೆ ರೈತರ ಅನುಕೂಲಕ್ಕಾಗಿ ಗಂಗಾ ಕಲ್ಯಾಣ ಸೌಲಭ್ಯಕ್ಕೆ 500 ಕೋಟಿ ಮೀಸಲಿಡಲಾಗಿದೆ ಎಂದು ಸಚಿವರು ಹೇಳಿದರು.

ಮನುವಾದ ನಮ್ಮನ್ನು ಕತ್ತಲೆಯೆಡೆಗೆ ನೂಕುತ್ತಿದೆ. ನಾವು ಭಾರತದ ಮೂಲ ನಿವಾಸಿಗಳು. ನಮ್ಮ ಬದುಕು ಹಸನಾಗಬೇಕು. ಸಾಮಾಜಿಕ, ಅರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರತಿಯೊಬ್ಬರಿಗೂ ಸಮಾನತೆ ಸಿಗಬೇಕು. ಪ್ರಜಾಪ್ರಭುತ್ವವಾದಿಗಳ ದನಿ ಅಡಗಿಸಿದರೆ, ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ಈ ವಿಚಾರದಲ್ಲಿ ಎಲ್ಲರೂ ಜಾಗೃತರಾಗಿರಬೇಕು ಎಂದು ಕರೆ ನೀಡಿದರು.

ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದಿಲ್ಲ. ನಮಗೆ ಕುಡಿಯುವುದಕ್ಕೆ ಹಾಗೂ ರೈತರ ವ್ಯವಸಾಯಕ್ಕೂ ನೀರಿಲ್ಲವೆಂದರೂ ಕಾನೂನು ನಮ್ಮನ್ನು ಬಿಡುತ್ತಿಲ್ಲ. ದೇಶದ ಕಾನೂನನ್ನು ಗೌರವಿಸುವುದು ನಮ್ಮ ಕರ್ತವ್ಯ. ಹೀಗಾಗಿ ಕಾನೂನು ಪಾಲನೆಯ ಜೊತೆಗೆ ರೈತರನ್ನು ಉಳಿಸಬೇಕು ಮತ್ತು ಕುಡಿಯಲು ನೀರನ್ನು ಕೊಡಬೇಕೆಂಬ ಸಂಕಷ್ಟದ ಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೆಲ, ಜಲ, ಭಾಷೆ ರಕ್ಷಣೆಗೆ ಬದ್ಧವಾಗಿದೆ ಎಂದು ಸಚಿವ ಮಹದೇವಪ್ಪ ಸ್ಪಷ್ಟಪಡಿಸಿದರು.

ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಒಂದು ರೀತಿಯ ಕಾರ್ಯಾಗಾರ ರೂಪದಲ್ಲಿ ನಡೆದಿದೆ. ಎವಿಎಸ್‌ಎಸ್ ಸಂಸ್ಥೆಯು 26 ಸಾವಿರ ಸದಸ್ಯರನ್ನು ಹೊಂದಿರುವುದು ಹೆಮ್ಮೆಯ ವಿಚಾರ. ಸಂಸ್ಥೆಯು ತಳಸಮುದಾಯಕ್ಕೆ ಆರ್ಥಿಕ ವಿಚಾರದಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕೆಲಸವಾಗಿದೆ. ಸಂಸ್ಥೆಯು ವಿವಿಧ ಕಾರ್ಯಕ್ರಮ ರೂಪಿಸಲು ನೆರವು ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಸಂಸ್ಥೆಯ ಬಲವರ್ಧನೆಗಾಗಿ ಹಣಕಾಸಿನ ನೆರವನ್ನು ನನ್ನ ಚೌಕಟ್ಟಿನಲ್ಲಿ ಸೇರಿದಂತೆ ಸರ್ಕಾರದ ವತಿಯಿಂದಲೂ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ದೇಶದಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಬದಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅದು ಇಂದಿಗೂ ಸಾಧ್ಯವಾಗಿಲ್ಲ. ರಾಜ್ಯದ ಅಂಬೇಡ್ಕರ್ ಭವನಗಳನ್ನು ಮಾಹಿತಿ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಕೆಂದ್ರ ಹಾಗೂ ರಾಜ್ಯ ಸರ್ಕಾರದಿಂದ ದಲಿತರಿಗೆ ದೊರಕುವ ಎಲ್ಲಾ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸುವ ಉದ್ದೇಶವಿದೆ ಎಂದರು.

ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, ಅನೇಕ ವರ್ಷಗಳ ಕಾಲ ತಳಸಮುದಾಯದ ಜನರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ತಳಸಮುದಾಯಕ್ಕೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಸಿಗಬೇಕು ಎಂಬುದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು. ಎವಿಎಸ್‌ಎಸ್ ಸಂಸ್ಥೆಯು ತರಬೇತಿ ನೀಡಿವುದರಿಂದ ಈ ಭಾಗದ ತಳಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯ ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಉರಿಲಿಂಗಿ ಪೆದ್ದಿಪಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬುದ್ಧ ರತ್ನ ಹಾಗೂ ಬಿಕ್ಕು ಸಂಘದ ಭಂತೆ ಬೋಧಿರತ್ನ, ಬೋಧಿದತ್ತ, ಸುಗತಪಾಲ, ಅಧ್ಯಕ್ಷರಾದ ತುಂಬಲ ರಾಮಣ್ಣ, ಮೈಸೂರು ನಗರ ಪಾಲಿಕೆಯ ಮಾಜಿ ಮೇಯರ್ ಪುರುಷೋತ್ತಮ್, ಡಿ.ಎಸ್.ಎಸ್ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಮುಖಂಡರಾದ ಬಿ.ಗೋಪಾಲ್, ಜೆ‌.ಅಚ್ಯುತಾನಂದ, ಎಂ.ಸುರೇಶ್ ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರು, ಡಿ.ಎಸ್.ಎಸ್ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಕೋಲಾರದಲ್ಲಿ ಮಾರ್ಗದರ್ಶಿ ಚಿಟ್ಸ್​​​ನ 109ನೇ ಶಾಖೆ ಉದ್ಘಾಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.