ETV Bharat / state

ನಾಳೆಯಿಂದ ಶರನ್ನವರಾತ್ರಿ ಸಂಭ್ರಮ: ರತ್ನಖಚಿತ ಸಿಂಹಾಸನದಲ್ಲಿ ಯದುವೀರ್ ಖಾಸಗಿ ದರ್ಬಾರ್

author img

By ETV Bharat Karnataka Team

Published : Oct 14, 2023, 7:57 PM IST

Etv Bharat
ರತ್ನ ಖಚಿತ ಸಿಂಹಾಸನ

ನಾಳೆಯಿಂದ ಮೈಸೂರಿನಲ್ಲಿ ದಸರಾ ಸಂಭ್ರಮಾಚರಣೆ ಆರಂಭವಾಗಲಿದೆ. ಭಾನುವಾರ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳ ಜೊತೆಗೆ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್​​ ಖಾಸಗಿ ದರ್ಬಾರ್ ನಡೆಸುವರು.

ಮೈಸೂರು : ನವರಾತ್ರಿಯ ಮೊದಲ ದಿನ, ನಾಳೆ ಅಕ್ಟೋಬರ್ 15ರಂದು ಅರಮನೆಯಲ್ಲಿ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಆರಂಭವಾಗಲಿದೆ. ಮೊದಲ ದಿನ ರತ್ನ ಖಚಿತ ಸಿಂಹಾಸನಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಪೂಜೆ ಸಲ್ಲಿಸಿದ ಬಳಿಕ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಹೀಗೆ 10 ದಿನಗಳ ಕಾಲ ರಾಜವಂಶಸ್ಥರು ಸಾಂಪ್ರದಾಯಿಕ ಪೂಜಾ ಕಾರ್ಯ ನೆರವೇರಿಸಲಿದ್ದು, ಈ ಬಗ್ಗೆ ವಿವರ ಇಲ್ಲಿದೆ.

mysore-sharannavaratri-celebrations
ಮೈಸೂರು ದಸರಾ (ಸಂಗ್ರಹ ಚಿತ್ರ)

ಒಂದು ಕಡೆ ನಾಡಹಬ್ಬ ದಸರಾ ಮಹೋತ್ಸವ ಆಚರಣೆಗೆ ಚಾಮುಂಡಿ ಬೆಟ್ಟದಲ್ಲಿ ಅರಮನೆಯ ಆವರಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದರೆ, ಮತ್ತೊಂದೆಡೆ ರಾಜವಂಶಸ್ಥರ ಶರನ್ನವರಾತ್ರಿಯ ಪೂಜಾ ಕಾರ್ಯಕ್ಕೆ ಅರಮನೆಯೊಳಗೆ ತಯಾರಿ ನಡೆದಿವೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳ ಸಿದ್ಧತೆ ನಡೆದಿದೆ. ಈಗಾಗಲೇ ಅಕ್ಟೋಬರ್ 9ರಂದು ಖಾಸಗಿ ದರ್ಬಾರ್ ಹಾಲ್​​ನಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಆಗಿದೆ.

mysore-sharannavaratri-celebrations
ಮೈಸೂರು ದಸರಾ (ಸಂಗ್ರಹ ಚಿತ್ರ)

ನಾಳೆ ಅ. 15ರಂದು ನವರಾತ್ರಿಯ ಮೊದಲ ದಿನ ಸಾಂಪ್ರದಾಯಿಕ ಪೂಜೆಗಳು ಆರಂಭವಾಗಲಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ 06.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಆಗಲಿದೆ. ಅರಮನೆಯ ಒಳಗೆ ಗಣಪತಿ ಹೋಮ, ಚಾಮುಂಡಿ ಹೋಮ ಸೇರಿದಂತೆ ಹಲವು ಪೂಜೆ ನಡೆಯಲಿದೆ. ಬೆಳಗ್ಗೆ 07:05ರಿಂದ 07:45ರ ನಡುವಿನ ಶುಭ ಲಗ್ನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಿಷಿಕಾ ಒಡೆಯರ್​​ ಅವರಿಗೆ ಅರಮನೆ ಒಳಗಿನ ವಾಣಿವಿಲಾಸ ಅರಮನೆಯಲ್ಲಿ ಕಂಕಣ ಧಾರಣೆ ಮಾಡಲಾಗುತ್ತದೆ.

mysore-sharannavaratri-celebrations
ಮೈಸೂರು ದಸರಾ (ಸಂಗ್ರಹ ಚಿತ್ರ)

ಯಧುವೀರ್ ಖಾಸಗಿ ದರ್ಬಾರ್: ಭಾನುವಾರ ಬೆಳಗ್ಗೆ 09.45 ಗಂಟೆ ವೇಳೆಗೆ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿವೆ. 10.45ಕ್ಕೆ ಸಿಂಹಾಸನಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, 11.30ರಿಂದ 11.50ಕ್ಕೆ ಖಾಸಗಿ ದರ್ಬಾರ್​​ನಲ್ಲಿ ರತ್ನಖಚಿತ ಸಿಂಹಾಸನವೇರಿ ಯದುವೀರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಬಳಿಕ 01.45ರಿಂದ 02.05ರ ವರೆಗೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನಿಸಲಾಗುತ್ತದೆ. ಹೀಗೆ ಮೊದಲ ದಿನ ಅರಮನೆಯಲ್ಲಿ ಸಾಂಪ್ರದಾಯಿಕ ಶರನ್ನವರಾತ್ರಿಯ ಪೂಜೆ ನೆರವೇರಲಿದೆ. ಚಾಮುಂಡಿ ಬೆಟ್ಟದಲ್ಲಿ ನಡೆಯುವ ಪೂಜೆ ಹಾಗೂ ಅರಮನೆಯಲ್ಲಿ ರಾಜವಂಶಸ್ಥರು ನಡೆಸುವ ಸಾಂಪ್ರದಾಯಿಕ ಪೂಜಾ ಕಾರ್ಯಗಳ ನಡುವೆ ಸಾಮ್ಯತೆ ಇದೆ.

mysore-sharannavaratri-celebrations
ಯದುವೀರ್ ಒಡೆಯರ್​ ಖಾಸಗಿ ದರ್ಬಾರ್ (ಸಂಗ್ರಹ ಚಿತ್ರ)

ನವರಾತ್ರಿಯ ಇತರ ದಿನಗಳಲ್ಲಿ ನಡೆಯುವ ಪೂಜೆಗಳ ವಿವರ: ಅಕ್ಟೋಬರ್ 20ರ ಶುಕ್ರವಾರ ಬೆಳಗ್ಗೆ 10.05ರಿಂದ 10.25ರ ವೇಳೆಯಲ್ಲಿ ವಿದ್ಯಾದೇವತೆ ಸರಸ್ವತಿಗೆ ಯದುವೀರ್ ಅವರು ಪೂಜೆ ಸಲ್ಲಿಸುತ್ತಾರೆ. ಬಳಿಕ ಅಕ್ಟೋಬರ್ 21ರಂದು ಕಾಳರಾತ್ರಿ ಪೂಜೆ ಹಾಗೂ 22ರಂದು ದುರ್ಗಾಷ್ಠಮಿಯಂದು ವಿವಿಧ ಪೂಜೆ ನೆರವೇರಲಿದೆ.

mysore-sharannavaratri-celebrations
ಮೈಸೂರು ದಸರಾ (ಸಂಗ್ರಹ ಚಿತ್ರ)

ಅ. 23ರಂದು ಆಯುಧ ಪೂಜೆ: ಅ. 23ರಂದು ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ನಡೆಯಲಿದೆ. ಅಂದು ಬೆಳಗ್ಗೆ 05.30ಕ್ಕೆ ಹೋಮಗಳು ನಡೆಯಲಿದ್ದು, ಬೆಳಗ್ಗೆ 06.30ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿವೆ. 06.05ರಿಂದ 06.15ರ ಸಮಯದಲ್ಲಿ ರಾಜರ ಖಾಸಗಿ ಆಯುಧಗಳು ಅರಮನೆಯ ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನೆ ಆಗಲಿದೆ. ಬಳಿಕ ಬೆಳಗ್ಗೆ 07.15ಕ್ಕೆ ಅವುಗಳನ್ನು ದೇವಾಲಯದಿಂದ ಅರಮನೆಯ ಒಳಗಿನ ಕಲ್ಯಾಣ ಮಂಟಪಕ್ಕೆ ತಂದು ಪೂಜೆಗೆ ಸಿದ್ಧಗೊಳಿಸಲಾಗುತ್ತದೆ. ನಂತರ 07.30ಕ್ಕೆ ಚಂಡಿಕಾ ಹೋಮ, 09.30ಕ್ಕೆ ಪೂರ್ಣಾಹುತಿ ನಡೆಯಲಿದೆ.

11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಕುದುರೆ, ಹಸು ಆಗಮಿಸಲಿವೆ. 12.20ಕ್ಕೆ ಪೂಜೆ ಆರಂಭವಾಗಲಿರುವ ಆಯುಧ ಪೂಜೆಯು 12.45ಕ್ಕೆ ಕೊನೆಗೊಳ್ಳಲಿದೆ. ಕಲ್ಯಾಣ ಮಂಟಪದಲ್ಲಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಲಿದ್ದಾರೆ. ಅದೇ ದಿನ ಖಾಸಗಿ ದರ್ಬಾರ್ ನಡೆಸಿ, ಸಿಂಹ ವಿಸರ್ಜನೆ ಮಾಡಿ, ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡುತ್ತಾರೆ. ಬಳಿಕ ಅಂಬಾವಿಲಾಸದಲ್ಲಿ ದಫ್ತಾರ್ ಪೂಜೆ ಹಾಗೂ ಮಹಾಸನ್ನಿಧಾನದಲ್ಲಿ ಯದುವೀರ್ ಅವರು ಅಮಲಾದೇವಿ ದರ್ಶನ ಪಡೆಯುತ್ತಾರೆ.

mysore-sharannavaratri-celebrations
ಮೈಸೂರು ದಸರಾ (ಸಂಗ್ರಹ ಚಿತ್ರ)

ಅ. 24ರಂದು ವಿಜಯದಶಮಿ ಪೂಜೆ: ಅ.24ರಂದು ಅರಮನೆಯಲ್ಲಿ ವಿಜಯದಶಮಿ ಪೂಜೆ ಇರಲಿದೆ. ಅಂದು ಬೆಳಗ್ಗೆ 09.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಕುದುರೆ, ಪಟ್ಟದ ಆನೆ ಹಾಗೂ ಪಟ್ಟದ ಹಸು ಆಗಮಿಸಲಿವೆ. ಕಲ್ಯಾಣ ಮಂಟಪದಲ್ಲಿ ಪೂಜೆ ನಡೆಯಲಿದ್ದು, ಬೆಳಗ್ಗೆ 11.40ಕ್ಕೂ ಮುನ್ನ ವಜ್ರಮುಷ್ಠಿ ಕಾಳಗ ಇರಲಿದೆ. ಬಳಿಕ 11.40ಕ್ಕೆ ರಾಜ ವಂಶಸ್ಥರಾದ ಯದುವೀರ್ ಒಡೆಯರ್ ಆನೆ ಬಾಗಿಲಿನಿಂದ ವಿಜಯ ದಶಮಿ ಪೂಜೆಯ ಮೆರವಣಿಗೆ ಹೊರಟು, ಭುವನೇಶ್ವರಿ ದೇವಾಲಯದ ಆವರಣದಲ್ಲಿರುವ ಶಮಿ ಮರಕ್ಕೆ ಪೂಜೆ ಸಲ್ಲಿಸಿ ಮರಳುತ್ತಾರೆ. ಇದಾದ ಬಳಿಕ ರಾಜವಂಶಸ್ಥರು ಜಂಬೂ ಸವಾರಿ ಮೆರವಣಿಗೆಯ ಪುಷ್ಪಾರ್ಚನೆಯಲ್ಲಿ ಭಾಗವಹಿಸಲಿದ್ದಾರೆ.

mysore-sharannavaratri-celebrations
ಮೈಸೂರು ದಸರಾ (ಸಂಗ್ರಹ ಚಿತ್ರ)

ಹೀಗೆ ಅ.15ರಿಂದ ಶರನ್ನವರಾತ್ರಿಯ ಪೂಜೆಗಳು ಆರಂಭವಾಗಲಿದೆ. 10 ದಿನಗಳ ಕಾಲ ನಡೆಯಲಿರುವ ಅರಮನೆಯ ಶರನ್ನವರಾತ್ರಿಯ ಪೂಜೆ ಹಾಗೂ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಪೂಜಾ ಕೈಂಕರ್ಯಗಳು ಒಂದೇ ಆಗಿವೆ.

mysore-sharannavaratri-celebrations
ಯದುವೀರ್ ಒಡೆಯರ್​ ಖಾಸಗಿ ದರ್ಬಾರ್ (ಸಂಗ್ರಹ ಚಿತ್ರ)

ಇದನ್ನೂ ಓದಿ: ಅರಮನೆಯಲ್ಲಿ ಶರನ್ನವರಾತ್ರಿ: ರಕ್ತ ಚಿಮ್ಮುವ 'ವಜ್ರಮುಷ್ಠಿ ಕಾಳಗ' ಹೇಗೆ ನಡೆಯುತ್ತೆ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.