ETV Bharat / state

ಸರಳ, ಅರ್ಥಪೂರ್ಣ ದಸರಾ ಆಚರಣೆಗೆ ಸರ್ಕಾರ ನಿರ್ಧಾರ: ಸಚಿವ ಡಾ.ಎಚ್​.ಸಿ.ಮಹದೇವಪ್ಪ

author img

By ETV Bharat Karnataka Team

Published : Sep 22, 2023, 8:28 AM IST

Updated : Sep 22, 2023, 9:41 AM IST

ಸರಳ ದಸರಾ
ಸರಳ ದಸರಾ

ರಾಜ್ಯದಲ್ಲಿ ಮಳೆ ಕೊರತೆಯಾಗಿ ಬರ ಆವರಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಈ ಬಾರಿಯ ದಸರಾ ಹಬ್ಬವನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮೈಸೂರು: ರಾಜ್ಯವನ್ನು ಬರಗಾಲ ಆವರಿಸಿದ್ದು, ಸರಳ, ಸಂಪ್ರದಾಯಬದ್ಧ ಅರ್ಥಪೂರ್ಣವಾಗಿ ದಸರಾ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮಳೆ ಕೊರತೆಯಿಂದ ಉಂಟಾದ ತೀವ್ರ ಬರದಿಂದಾಗಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಬೇಕೋ ಅಥವಾ ಅದ್ಧೂರಿಯಾಗಿ ಆಚರಿಸಬೇಕೋ ಎಂಬ ಗೊಂದಲದಲ್ಲಿ ಸರ್ಕಾರ ಸಿಲುಕಿತ್ತು. ಇದೀಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್​.ಸಿ.ಮಹದೇವಪ್ಪ ಸಾಮಾಜಿಕ ಜಾಲತಾಣದ 'ಎಕ್ಸ್'​ನಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಹೀಗಾಗಿ ಸರಳ ಮತ್ತು ಅರ್ಥಪೂರ್ಣ ದಸರಾ ಆಚರಿಸಲು ಸರಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

  • ರೈತರ ಸಂಕಷ್ಟದ ಸಂದರ್ಭಕ್ಕೆ ಪೂರಕವಾಗಿ ಸರ್ಕಾರವು ಈ ಬಾರಿ ಸರಳ ದಸರಾವನ್ನು ಆಚರಿಸಲು ನಿರ್ಧರಿಸಿದೆ pic.twitter.com/zegs5Hk9er

    — Dr H.C.Mahadevappa (@CMahadevappa) September 21, 2023 " class="align-text-top noRightClick twitterSection" data=" ">

ಪ್ರವಾಸೋದ್ಯಮ ಅಭಿವೃದ್ಧಿಗೆ ಕೈ ಜೋಡಿಸಲು ಮನವಿ: ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಇಲಾಖೆಯ ಜೊತೆ ಕೈ ಜೋಡಿಸುವಂತೆ ಪ್ರವಾಸೋದ್ಯಮ ಅಭಿವೃದ್ಧಿ ಸಲಹಾ ಸಮಿತಿ ರಚಿಸಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಮೈಸೂರಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ ಹೇಳಿದ್ದಾರೆ. ಸೆ.27 ರಂದು ಆಚರಿಸಲಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇವಲ ದಸರಾ ಸಂದರ್ಭದಲ್ಲಿ ಮಾತ್ರವಲ್ಲದೆ ಉಳಿದ ದಿನಗಳಲ್ಲಿಯೂ ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಬೇಕಾದ ಸಲಹೆ-ಸೂಚನೆಗಳನ್ನು ಪಡೆಯಲು ಪ್ರವಾಸೋದ್ಯಮ ಸಲಹಾ ಸಮಿತಿ ರಚಿಸಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ, ಅಲ್ಲಿ ಬರುವ ಸಲಹೆ ಸೂಚನೆಗಳನ್ನು ಸರ್ಕಾರದ ಗಮನಕ್ಕೆ ತರಲು ಅಗತ್ಯ ಕ್ರಮ ವಹಿಸಲಾಗುವುದು. ಇದಕ್ಕೆ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಅಸೋಸಿಯೇಷನ್ ಹಾಗೂ ಸಂಘಗಳ ಸಹಕಾರವೂ ಮುಖ್ಯ ಎಂದರು.

ಜಿಲ್ಲೆಯಲ್ಲಿರುವ ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ವಚ್ಛತೆ, ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ನೈರ್ಮಲ್ಯ, ಶುಚಿತ್ವದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಇನ್ನಿತರೆ ಪರಿಸರಸ್ನೇಹಿ ಚಟುವಟಿಕೆಗಳನ್ನು ಪ್ರಸ್ತುತಪಡಿಸಲು ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಾಮಾನ್ಯ ಸೂಚನೆಗಳನ್ನು ಪಾಲಿಸುವಂತೆ ಅವರು ಸೂಚಿಸಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರವಾಸೋದ್ಯಮದ ಉತ್ತೇಜನಕ್ಕೆ ಕೆಲವು ಸಲಹೆಗಳನ್ನು ನೀಡಿದರು. ಮೈಸೂರಿಗೆ ಬರುವ ಪ್ರವಾಸಿಗರು ಅಕ್ಕಪಕ್ಕದಲ್ಲಿರುವ ಊಟಿ, ಮಡಿಕೇರಿಗಳಿಗೆ ವಾಸ್ತವ್ಯಕ್ಕಾಗಿ ತೆರಳುತ್ತಿದ್ದು, ಈ ನಿಟ್ಟಿನಲ್ಲಿ ಮೈಸೂರಿನಲ್ಲೇ ವಾಸ್ತವ್ಯ ಹೂಡುವಂತೆ ವ್ಯವಸ್ಥೆಗಳನ್ನು ಉತ್ತಮಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಬೇಕು. ದಸರಾ ಸಂದರ್ಭದಲ್ಲಿ ರಾತ್ರಿ 12 ಗಂಟೆಯವರೆಗೂ ದೀಪಾಲಂಕಾರ ವೀಕ್ಷಿಸಲು ಅವಕಾಶ ಹಾಗೂ ದೀಪಾಲಂಕಾರ ವೀಕ್ಷಿಸಿ ನಂತರ ತೆರಳುವ ಪ್ರವಾಸಿಗರಿಗೆ ಮಧ್ಯರಾತ್ರಿಯವರೆಗೂ ಊಟದ ವ್ಯವಸ್ಥೆ ಮಾಡಲು ಹೋಟೆಲ್ ಹಾಗೂ ರೆಸ್ಟೋರೆಂಟ್​ಗಳಿಗೆ ಅವಕಾಶ ಒದಗಿಸಬೇಕು.

ಕೇರಳದಿಂದ ಬರುವ ಮೆಡಿಕಲ್​ವೇಸ್ಟ್ ಅ​ನ್ನು ಮೈಸೂರಿನಲ್ಲಿ ಡಂಪ್ ಮಾಡುತ್ತಿದ್ದು, ಸ್ವಚ್ಛ ನಗರಿ ಮೈಸೂರನ್ನು ಸ್ವಚ್ಛ ನಗರವನ್ನಾಗಿ ಉಳಿಸಿಕೊಳ್ಳಲು ಜಿಲ್ಲಾಡಳಿತ ಹಾಗೂ ಸರ್ಕಾರ ಗಮನವಹಿಸಬೇಕು. ಶಕ್ತಿ ಯೋಜನೆಯಿಂದ ಶೇ. 30ರಷ್ಟು ಹೆಚ್ಚು ಮಹಿಳೆಯರು ದಸರಾ ವೀಕ್ಷಿಸಲು ಆಗಮಿಸುವ ಹಿನ್ನೆಲೆಯಲ್ಲಿ ವಸತಿ ಸೌಲಭ್ಯ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಬೇಕು. ದಸರಾ ಮುಗಿದ ನಂತರವೂ ಮುಂದಿನ ಎರಡು ವಾರಗಳವರೆಗೆ ದಸರಾ ದೀಪಾಲಂಕಾರ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು. ಅರಮನೆ ಸುತ್ತ ಸಂಚರಿಸುವ ಟಾಂಗಾದವರು ಪ್ರವಾಸಿಗರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದು ಕಿಲೋಮೀಟರ್‌ಗೆ ಇಂತಿಷ್ಟು ದರವನ್ನು ಇಲಾಖೆಯಿಂದ ನಿಗದಿಪಡಿಸಬೇಕು.

ಹೋಟೆಲ್ ಕಾರ್ಮಿಕರಿಂದ ಹಿಡಿದು ಪೆಟ್ರೋಲ್ ಬಂಕ್​ಲ್ಲಿ ಕಾರ್ಯನಿರ್ವಹಿಸುವವರಿಗೆ ದಸರಾ ಸ್ವಯಂಸೇವಕರೆಂದು ಬ್ಯಾಡ್ಜ್ ನೀಡಬೇಕು. ಪ್ರವಾಸಿ ತಾಣಗಳಲ್ಲಿ ಗ್ರೀನ್ ಪೊಲೀಸಿಂಗ್ ವ್ಯವಸ್ಥೆ ನಿರ್ವಹಿಸುವುದು. ವಿಶ್ವ ಪಾರಂಪರಿಕ ತಾಣವಾಗಿ ಟಿ. ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯ ಸೇರ್ಪಡೆಯಾಗಿದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಹೆಚ್ಚು ಪ್ರವಾಸಿಗರು ಸೋಮನಾಥಪುರ ದೇವಾಲಯಕ್ಕೆ ಭೇಟಿ ನೀಡುವ ಸಂಬಂಧ ಪ್ರಚಾರ ನೀಡಲು ಕ್ರಮವಹಿಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಹೋಟೆಲ್ ಮಾಲೀಕರ ಅಸೋಸಿಯೇಷನ್​ ಅಧ್ಯಕ್ಷ ನಾರಾಯಣ ಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ , ಟ್ರಾವೆಲ್ ಅಸೋಸಿಯೇಷನ್ ನ ಪ್ರೆಸಿಡೆಂಟ್ ಜೆ.ಪಿ.ಅರಸ್, ಹೋಟೆಲ್ ಅಸೋಸಿಯೇಶನ್, ಪೆಟ್ರೋಲಿಯಂ ಕಾರ್ಪೊರೇಷನ್ ಅಸೋಸಿಯೇಷನ್, ಟ್ರಾವೆಲ್ಸ್ ಅಸೋಸಿಯೇಷನ್, ಪ್ರವಾಸಿ ಮಾರ್ಗದರ್ಶಿಗಳು, ಹಾಗೂ ಪ್ರವಾಸಿ ವಾಹನಗಳ ಮಾಲೀಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಬರಗಾಲದ ಎಫೆಕ್ಟ್​: ಸರಳ, ಅದ್ಧೂರಿ ಎನ್ನುವ ಬದಲು ಸಾಂಪ್ರದಾಯಿಕ ದಸರಾ ಹೇಳಿಕೆಗೆ ಹೋಟೆಲ್ ಮಾಲೀಕರ ಸಂಘ ಒತ್ತಾಯ

Last Updated :Sep 22, 2023, 9:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.