ETV Bharat / state

ಬ್ರಾಂಡ್ ಮೈಸೂರು ಪರಿಕಲ್ಪನೆ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸಂದರ್ಶನ

author img

By ETV Bharat Karnataka Team

Published : Dec 11, 2023, 8:12 PM IST

Updated : Dec 11, 2023, 8:38 PM IST

ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತ ಅವರ ಸಂದರ್ಶನ
ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತ ಅವರ ಸಂದರ್ಶನ

ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಅವರು ಬ್ರಾಂಡ್ ಮೈಸೂರು ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತ ಅವರ ಸಂದರ್ಶನ

ಮೈಸೂರು : ಪ್ರವಾಸೋದ್ಯಮ ಇಲಾಖೆ ಬ್ರಾಂಡ್ ಮೈಸೂರು ಪರಿಕಲ್ಪನೆಯಲ್ಲಿ ಬ್ರಾಂಡ್ ಮೈಸೂರು ಲೋಗೋ ಬಿಡುಗಡೆ ಮಾಡಿದೆ. ಈ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ, ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಪ್ರಸಿದ್ಧ ಉತ್ಪನ್ನಗಳನ್ನು ಪರಿಚಯಿಸುವ ಬ್ರಾಂಡ್ ಮೈಸೂರು ಪರಿಕಲ್ಪನೆಯ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಅವರು ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ. ಅವರ ವಿಶೇಷ ಸಂದರ್ಶನ ಇಲ್ಲಿದೆ.

ಆಸಕ್ತರಿಂದ ಬ್ರಾಂಡ್ ಮೈಸೂರು ಲೋಗೋ ಸ್ಪರ್ಧೆ ಏರ್ಪಡಿಸಿದ್ದು, ಸ್ಪರ್ಧಿಗಳಿಂದ ಬಂದ ಲೋಗೋ ಆಯ್ಕೆ ಮಾಡಿ ಭಾನುವಾರ ಸಂಜೆ ಪ್ರವಾಸೋದ್ಯಮ ಸಚಿವ ಹೆಚ್. ಕೆ ಪಾಟೀಲ್ ಮೈಸೂರು ಲೋಗೋ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸವಿತಾ ಈ ಕಲ್ಪನೆ ಬಗ್ಗೆ ಹಾಗೂ ಬ್ರ್ಯಾಂಡ್ ಮೈಸೂರಿನ ಉದ್ದೇಶದ ಬಗ್ಗೆ ವಿವರಿಸಿದ್ದಾರೆ.

ಬ್ರಾಂಡ್ ಮೈಸೂರು ಲೋಗೋ ಬಿಡುಗಡೆಯ ಉದ್ದೇಶ ಎಂದರೆ, ಮೈಸೂರು ಎಂದರೆ ಒಂದು ಬ್ರಾಂಡ್ ಅಂದುಕೊಂಡಿದ್ದೇವೆ. ಆದರೆ ದಸರಾ ಒಂದೇ ಅಲ್ಲ, ನಮ್ಮ ಪರಂಪರೆ, ನಮ್ಮ ಸಂಸ್ಕೃತಿ ಹಾಗೂ ನಮ್ಮ ಉತ್ಪನ್ನಗಳನ್ನು ಮೈಸೂರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರಿಗೂ ತಿಳಿಸುವ ಉದ್ದೇಶದಿಂದ ಬ್ರಾಂಡ್ ಮೈಸೂರು ಲೋಗೋ ರಚಿಸಲಾಗಿದೆ.

ನಮ್ಮ ಉತ್ಪನ್ನಗಳನ್ನ ಪ್ರವಾಸಕ್ಕೆ ಬಂದ ಪ್ರವಾಸಿಗರು ತೆಗೆದುಕೊಂಡು ಹೋಗುವ ಉದ್ದೇಶದಿಂದ ಈ ಲೋಗೋ ಬಿಡುಗಡೆ ಮಾಡಲಾಗಿದೆ. ಆ ಮೂಲಕ ನಮ್ಮ ಸಂಸ್ಕೃತಿ ಹಾಗೂ ಮೈಸೂರಿನ ಉತ್ಪನ್ನಗಳಾದ ಮೈಸೂರು ಸಿಲ್ಕ್, ಮೈಸೂರು ಸ್ಯಾಂಡಲ್, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ ಸೇರಿದಂತೆ ಮೈಸೂರಿನಲ್ಲಿ ಪ್ರಸಿದ್ಧವಾದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಆ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಕೆಲಸ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮದ ಅಭಿವೃದ್ಧಿಗೆ ಪ್ಯಾಕೇಜ್ ವ್ಯವಸ್ಥೆ ಜಾರಿಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೈಸೂರಿನ ಸುತ್ತಮುತ್ತ, ಚಾಮರಾಜನಗರ, ಹಾಸನ, ಮಂಡ್ಯ, ಮಡಿಕೇರಿ ಸೇರಿದಂತೆ ಸುತ್ತಮುತ್ತಲಿನಲ್ಲಿರುವ ಪ್ರವಾಸಿ ತಾಣಗಳನ್ನ ಪ್ರವಾಸಿಗರು ನೋಡಿಕೊಂಡು ಹೋಗುವ ಉದ್ದೇಶದಿಂದ ಪ್ಯಾಕೇಜ್ ಟೂರಿಸಂ ಸಿದ್ದ ಮಾಡಲಾಗಿದೆ. ಪ್ರವಾಸೋದ್ಯಮ ಸಚಿವರಾದ ಹೆಚ್. ಕೆ ಪಾಟೀಲ್ ಬ್ರಾಂಡ್ ಮೈಸೂರು ಹಾಗೂ ಪ್ರವಾಸೋದ್ಯಮ ಪ್ಯಾಕೇಜ್ ಸಿದ್ಧಪಡಿಸುವಂತೆ ಕೇಳಿದ್ದಾರೆ. ಇದಕ್ಕೆ ಸರ್ಕಾರದಿಂದ ಎಲ್ಲಾ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಜಂಟಿ ನಿರ್ದೇಶಕಿ ಸವಿತಾ ಹೇಳಿದ್ದಾರೆ.

ಬ್ರಾಂಡ್ ಮೈಸೂರು ಲೋಗೋದ ವಿಶೇಷತೆಗಳೇನು?: ಬ್ರಾಂಡ್ ಮೈಸೂರು ಲೋಗೋವನ್ನ ವಿಶೇಷವಾಗಿ ರಚಿಸಲಾಗಿದೆ. ಲೋಗೋದ ಸುತ್ತ ಮೈಸೂರು ಪ್ಯಾಲೇಸ್ ಬರುವ ಹಾಗೆ ಜೊತೆಗೆ ಪ್ಯಾಲೇಸ್​ನ ದೀಪಾಲಂಕಾರ ಬಾರ್ಡರ್ ನಲ್ಲಿ ಬರುವ ಹಾಗೆ ಮಧ್ಯದಲ್ಲಿ ಅಂಬಾರಿ ಹೊತ್ತಿರುವ ಎರಡು ಆನೆಗಳು, ನಾಲ್ವಡಿ ರಾಜವಂಶಸ್ಥರ ಲಾಂಛನವಾದ ಗಂಡಭೇರುಂಡ ಅದರ ಮೇಲೆ ವೀಳ್ಯದೆಲೆ, ಅದರ ಮೇಲೆ ಮಲ್ಲಿಗೆ ಹೂವು ಕಾಣಿಸುವ ಹಾಗೆ ಮಾಡಲಾಗಿದೆ.

ಜೊತೆಗೆ ಆನೆ ಮೇಲೆ ಹಾಕಿರುವ ಶಲ್ಯ ಮೈಸೂರು ಸಿಲ್ಕ್ ಹೊದಿಕೆಯಾಗಿದ್ದು, 'ನಮ್ಮ ಪರಂಪರೆ ನಿಮ್ಮ ತಾಣ' ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಬ್ರಾಂಡ್ ಮೈಸೂರು ಲೋಗೋ ಸಿದ್ದಪಡಿಸಲಾಗಿದೆ. ಇದು ಪ್ರವಾಸೋದ್ಯಮದ ಅಭಿವೃದ್ಧಿಯಾದರೆ, ಇಲ್ಲಿನ ವಾಣಿಜ್ಯ ವಹಿವಾಟುಗಳು, ಹೋಟೆಲ್ ಉದ್ಯಮ, ಸಾರಿಗೆ ಸೇರಿದಂತೆ ಎಲ್ಲವೂ ಅಭಿವೃದ್ಧಿಯಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಅವರು ವಿವರಿಸಿದ್ದಾರೆ.

ಇದನ್ನೂ ಓದಿ : Mysore Sandal Soap: ಮೈಸೂರು ಸ್ಯಾಂಡಲ್‌ ಸೋಪ್‌ ಮೌಲ್ಯವೃದ್ಧಿಗೆ ಒತ್ತು; ಪರಿಣತರ ಸಲಹೆ ಕೇಳಿದ ಸಚಿವ ಎಂ.ಬಿ.ಪಾಟೀಲ್

Last Updated :Dec 11, 2023, 8:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.