ETV Bharat / state

ಎಲ್ಲರಿಗೂ ಉನ್ನತ ಶಿಕ್ಷಣ ಲಭಿಸುವಂತಾಗಬೇಕು : ಥಾವರ್ ಚಂದ್ ಗೆಹ್ಲೋಟ್

author img

By

Published : Jul 2, 2023, 4:09 PM IST

higher-education-should-be-accessible-to-all-thawar-chand-gehlot
ಎಲ್ಲರಿಗೂ ಉನ್ನತ ಶಿಕ್ಷಣ ಲಭಿಸುವಂತಾಗಬೇಕು : ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 18ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹಾಗೂ ವಿಶ್ವವಿದ್ಯಾನಿಲಯಗಳ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದರು.

ಮೈಸೂರು : ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಬಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಮುಕ್ತ ವಿಶ್ವವಿದ್ಯಾನಿಲಯಗಳು ಕಾರಣವಾಗಿವೆ. ದೂರ ಶಿಕ್ಷಣವು ಪ್ರಸ್ತುತ ಭಾರತೀಯ ಶೈಕ್ಷಣಿಕ ವ್ಯವಸ್ಥೆ ಮೇಲೆ ಉತ್ತಮ ಪರಿಣಾಮ ಬೀರಿದೆ ಎಂದು ರಾಜ್ಯಪಾಲ ಹಾಗೂ ವಿಶ್ವವಿದ್ಯಾನಿಲಯಗಳ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ನಡೆದ 18ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಕ್ತ ವಿಶ್ವವಿದ್ಯಾನಿಲಯಗಳು ದೂರ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕಳೆದ ಎರಡೂವರೆ ದಶಕಗಳಲ್ಲಿ ದೂರ ಶಿಕ್ಷಣದ ಮೂಲಕ ದೇಶದಾದ್ಯಂತ ಉನ್ನತ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದೆ. ಈ ಮೂಲಕ ನ್ಯಾಕ್ ಸಂಸ್ಥೆಯಿಂದ ಎ ಪ್ಲಸ್ ಮಾನ್ಯತೆ ಪಡೆದಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣವು ಎಲ್ಲರಿಗೂ ಹಾಗೂ ಎಲ್ಲಾ ಕಡೆಯೂ ಸಿಗಬೇಕೆಂಬ ಉದ್ದೇಶದಿಂದ ಮುಕ್ತ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಗಿದೆ. ಇಂದು ಮಹಿಳೆಯರು ಹೆಚ್ಚು ಪದಕಗಳನ್ನು ಪಡೆದಿರುವುದು ಮಹಿಳಾ ಸಬಲೀಕರಣದ ಪ್ರತೀಕವಾಗಿದೆ. ವಿವೇಕಾನಂದರು ಯುವಕರಿಗೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ನೀಡಿದ ಕರೆಯಂತೆ ಎಲ್ಲರೂ ದೇಶದ ಸರ್ವತೋಮುಖ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಗುಣಮಟ್ಟದ ಶಿಕ್ಷಣ, ಮಾರ್ಗದರ್ಶನ, ಕೌಶಲ, ಗುಣಾತ್ಮಕ ಚಿಂತನೆ ಮತ್ತು ಭವಿಷ್ಯ ನಿರ್ಮಾಣ ಇವೆಲ್ಲವೂ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತವೆ. ರಾಷ್ಟ್ರದ ಪ್ರಗತಿಯಲ್ಲಿ ಪ್ರತಿಯೊಬ್ಬ ಸಾರ್ವಜನಿಕರ ಕೊಡುಗೆ ಅಗತ್ಯ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ. ವಿಶ್ವಕಲ್ಯಾಣ ಮತ್ತು ವಿಶ್ವಶಾಂತಿಯನ್ನು ಭಾರತ ದೇಶ ಸಾರುತ್ತಿದೆ. ಆದರೆ ಇಂದು ಇಡೀ ವಿಶ್ವವೇ ಪರಿಸರದ ಸಮಸ್ಯೆಗಳನ್ನು ಎದುರಿಸುತ್ತಿದೆ. ಪರಿಸರವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಪ್ಲಾಸ್ಟಿಕ್ ಮುಕ್ತ ವಲಯಗಳನ್ನಾಗಿ ಮಾಡುವುದು, ಮಳೆ ನೀರು ಕೊಯ್ಲುಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಇನ್ನಿತರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಮುಂದಾಗಬೇಕು ಎಂದರು.

ಕರ್ನಾಟಕ ಹೈಕೋರ್ಟ್​ ನ್ಯಾಯಾಧೀಶರಾದ ಅಶೋಕ್ ಎಸ್ ಕಿಣಗಿ ಮಾತನಾಡಿ, ವಿವಿಧ ಶೈಕ್ಷಣಿಕ ಅಧ್ಯಯನದಲ್ಲಿ ಪ್ರಶಸ್ತಿಗಳನ್ನು ಮತ್ತು ಪದವಿಗಳನ್ನು ಸ್ವೀಕರಿಸುವ ಎಲ್ಲಾ ಪದವೀಧರರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡಿ ಉನ್ನತ ಸ್ಥಾನವನ್ನು ಅಲಂಕರಿಸಿ ಜಾಗತಿಕ ವ್ಯಕ್ತಿಗಳಾಗಿ ಎಂದು ಹಾರೈಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಶರಣಪ್ಪ ವಿ ಹಲಸೆ ಮಾತನಾಡಿ, ಈ ಸಮಾರಂಭದಲ್ಲಿ ಕಲಾನಿಕಾಯದ ಒಬ್ಬ ಸಂಶೋಧನಾ ವಿದ್ಯಾರ್ಥಿಗೆ ಪಿ.ಹೆಚ್ ಡಿ ಪದವಿಯನ್ನು, 44 ಪದವಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು, 48 ಪದವಿ ವಿದ್ಯಾರ್ಥಿಗಳಿಗೆ ರಾಂಕ್ ಗಳನ್ನು ಮತ್ತು 27 ಪದವಿಗಳ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ಪ್ರಧಾನ ಮಾಡಲಾಗುತ್ತಿದೆ. ಅಲ್ಲದೆ 5240 ಮಹಿಳಾ ವಿದ್ಯಾರ್ಥಿಗಳೊಳಗೊಂಡಂತೆ ಒಟ್ಟು 8721 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಘಟಿಕೋತ್ಸವದಲ್ಲಿ 52 ವಿದ್ಯಾರ್ಥಿಗಳಿಗೆ 44 ಚಿನ್ನದ ಪದಕಗಳನ್ನು ಹಾಗೂ 27 ನಗದು ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲ ಸಚಿವರಾದ ಪ್ರೊ. ಕೆ.ಎಲ್.ಎನ್ ಮೂರ್ತಿ,ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೊ. ಕೆ ಬಿ ಪ್ರವೀಣ, ಪ್ರೊ. ಲಕ್ಷ್ಮಿ ಸೇರಿದಂತೆ ಕರಾಮುವಿ ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಸರ್ಕಾರಿ ಶಾಲೆಯ ಪಕ್ಕದಲ್ಲೇ ಅಕ್ರಮ ಗಣಿಗಾರಿಕೆ; ನೂರಾರು ಮಕ್ಕಳಿದ್ದರೂ ವಿದ್ಯಾಲಯ ಮುಚ್ಚುವ ಪರಿಸ್ಥಿತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.