ETV Bharat / state

ಮೈಸೂರು : ತೋಟದ ತಂತಿ ಬೇಲಿಗೆ ಸಿಲುಕಿದ್ದ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ

author img

By ETV Bharat Karnataka Team

Published : Nov 11, 2023, 1:17 PM IST

forest-department-rescued-leopard-that-got-stuck-in-wire-fence-at-mysore
ಮೈಸೂರು : ತೋಟದ ತಂತಿ ಬೇಲಿಗೆ ಸಿಲುಕಿದ್ದ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ

ಮೈಸೂರಿನಲ್ಲಿ ವ್ಯಕ್ತಿಯೊಬ್ಬರ ತೋಟದ ತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿದೆ.

ಮೈಸೂರು : ಆಹಾರ ಅರಸಿ ಬಂದು ತೋಟಕ್ಕೆ ಹಾಕಿದ್ದ ತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯನ್ನು ರಕ್ಷಣೆ ಮಾಡಿರುವ ಘಟನೆ ಹೆಚ್ ಡಿ. ಕೋಟೆ ತಾಲ್ಲೂಕಿನ ಹೈರಿಗೆ ಗ್ರಾಮದ ತೋಟವೊಂದರಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ರಕ್ಷಣೆ ಮಾಡಿದ್ದಾರೆ.

ಹೆಚ್​.ಡಿ ಕೋಟೆ ತಾಲೂಕಿನ ಹೈರಿಗೆ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಆರ್ಮುಗಂ ಎಂಬುವರು ತಮ್ಮ ತೋಟಕ್ಕೆ ಹಾಕಿದ್ದ ತಂತಿ ಬೇಲಿಗೆ ಚಿರತೆ ಸಿಲುಕಿಕೊಂಡಿತ್ತು. ಈ ವೇಳೆ ಎಂದಿನಂತೆ ತೋಟದ ಕೆಲಸಕ್ಕೆ ಆಗಮಿಸಿದ ಕೂಲಿ ಕಾರ್ಮಿಕರು ಬೇಲಿಯಲ್ಲಿ ಚಿರತೆ ಸಿಲುಕಿರುವುದನ್ನು ಕಂಡು ಭಯಭೀತರಾಗಿದ್ದಾರೆ. ಬಳಿಕ ತಕ್ಷಣ ತೋಟದ ಮಾಲೀಕರಿಗೆ ವಿಷಯ ಮುಟ್ಟಿಸಿದ್ದು, ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ತಜ್ಞರಿಂದ ಚಿರತೆಗೆ ಚುಚ್ಚುಮದ್ದು ನೀಡಿ ಅದನ್ನು ಸೆರೆ ಹಿಡಿದಿದ್ದಾರೆ.

ಸೆರೆ ಸಿಕ್ಕ ಚಿರತೆ ಆರೋಗ್ಯವಾಗಿದೆ. ತಂತಿ ಬೇಲಿಗೆ ಸಿಲುಕಿದ್ದ ಕಾರಣ ಚಿರತೆಯ ಕಾಲಿಗೆ ಗಾಯವಾಗಿದೆ. ಚಿಕಿತ್ಸೆ ನೀಡಿ ಚೇತರಿಸಿಕೊಂಡ ಬಳಿಕ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತುಮಕೂರಿನಲ್ಲಿ ಬಾಲಕಿ ಮೇಲೆ ಚಿರತೆ ದಾಳಿ : ಮನೆ ಮುಂದೆ ಆಟ ಆಡುತ್ತಿದ್ದ ಬಾಲಕಿ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಇತ್ತೀಚೆಗೆ ತುಮಕೂರಿನಲ್ಲಿ ನಡೆದಿತ್ತು. ಚಿರತೆ ಬಾಲಕಿ ಮೇಲೆ ದಾಳಿ ನಡೆಸಿ ಎಳೆದೊಯ್ಯಲು ಯತ್ನಿಸುತ್ತಿದ್ದಂತೆ ಬಾಲಕಿಯ ತಂದೆ ಚಿರತೆಯನ್ನು ಬೆದರಿಸಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಳು.

ರಾಕೇಶ್ ಮತ್ತು ಹರ್ಷಿತಾ ದಂಪತಿಯ ಮಗಳು ಲೇಖನ ಮನೆ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಚಿರತೆಯೊಂದು ದಿಢೀರ್ ದಾಳಿ ನಡೆಸಿತ್ತು. ಈ ವೇಳೆ ಸ್ಥಳದಲ್ಲೇ ಇದ್ದ ಬಾಲಕಿಯ ತಂದೆ ರಾಕೇಶ್ ಜೋರಾಗಿ ಕೂಗಿದ್ದು, ದೊಣ್ಣೆಯಿಂದ ಚಿರತೆಯನ್ನು ಬೆದರಿಸಿದ್ದರು. ಆಗ ಚಿರತೆ ಮಗುವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿತ್ತು. ಈ ವೇಳೆ ಬಾಲಕಿಯ ಕಾಲಿಗೆ ಪರಚಿದ ಗಾಯಗಳಾಗಿದ್ದು, ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ರಾಜ್ಯದಲ್ಲಿ ವನ್ಯಜೀವಿ ದಾಳಿ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಲೇ ಇವೆ. ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಮುಂದುವರೆದಿದ್ದು, ಆಹಾರ ಅರಸಿಕೊಂಡು ನಾಡಿಗೆ ಬರುವ ವನ್ಯಜೀವಿಗಳು ಜನರು, ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ. ಈ ಸಂಬಂಧ ರಾಜ್ಯ ಸರ್ಕಾರ ಕ್ರಮಕೈಗೊಂಡಿದ್ದು, ಈಗಾಗಲೇ ಚಿರತೆ ದಾಳಿ ಇತ್ಯಾದಿಗಳನ್ನು ನಿಯಂತ್ರಿಸಲು ಟಾಸ್ಕ್​ ಫೋರ್ಸ್​ಗಳನ್ನು ಮಾಡಿದೆ.

ಇದನ್ನೂ ಓದಿ : ಪುತ್ತೂರು: ಕರುವನ್ನು ಭಾಗಶಃ ತಿಂದು ಮರದಲ್ಲಿ ಬಿಟ್ಟು ಹೋದ ಚಿರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.