ETV Bharat / state

ಸಿಂಗಲ್ ಹೆಸರಿರುವ ಕ್ಷೇತ್ರಗಳ ಮೊದಲ ಕಾಂಗ್ರೆಸ್ ಪಟ್ಟಿ ನಾಳೆ ಬಿಡುಗಡೆ : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

author img

By

Published : Mar 21, 2023, 8:27 PM IST

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ನಾನು ಕ್ಷೇತ್ರ ಹುಡುಕುತ್ತಿಲ್ಲ. ನನಗೆ ರಾಜ್ಯದ ಎಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧೆ ಮಾಡಿ ಎಂಬ ಬೇಡಿಕೆ ಹೆಚ್ಚಾಗಿದೆ. ಇದು ನನಗೆ ಸಮಸ್ಯೆಯಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಮೈಸೂರು : ನಾಳೆ ಯುಗಾದಿ ಹಬ್ಬದ ದಿನ, ಕಾಂಗ್ರೆಸ್​ನ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದು, ಅದರಲ್ಲಿ ಸಿಂಗಲ್ ಹೆಸರಿರುವ ಕ್ಷೇತ್ರಗಳ ಪಟ್ಟಿ ಬಿಡುಗಡೆ ಆಗುತ್ತಿದೆ. ಅದರಲ್ಲಿ ನನ್ನ ಹೆಸರು ಇರುತ್ತದೋ ಗೊತ್ತಿಲ್ಲ. ನಾನದ್ದನ್ನು ಹೈಕಮಾಂಡ್​ಗೆ ಬಿಟ್ಟಿದ್ದೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್​ನ ಮೊದಲ ಪಟ್ಟಿ ನಾಳೆ ಬಿಡುಗಡೆ ಆಗುತ್ತಿದ್ದು, ಅದರಲ್ಲಿ ವಿಧಾನಸಭಾ ಕ್ಷೇತ್ರಗಳ ಒಂದೇ ಹೆಸರಿರುವ ಅಭ್ಯರ್ಥಿಗಳ ಪಟ್ಟಿ ನಾಳೆ ಬಿಡುಗಡೆ ಆಗುತ್ತದೆ. ಅದರಲ್ಲಿ ನನ್ನ ಹೆಸರು ಇರುತ್ತದೋ ಗೊತ್ತಿಲ್ಲ. ‌ನನ್ನ ಸ್ಪರ್ಧೆಯ ಬಗ್ಗೆ ಹೈಕಮಾಂಡ್ ಗೆ ಬಿಟ್ಟಿದ್ದೇನೆ.‌ ಅವರು ಇನ್ನೂ ಯಾವ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದರು.

ವರುಣಾದಿಂದ ಸ್ಪರ್ಧೆ ಮಾಡಿದರೆ ಹೇಗೆ? ಎಂಬ ಪತ್ರಕರ್ತರ ಪ್ರಶ್ನೆಗೆ, ನಾನು ವರುಣಾದಿಂದ ಸ್ಪರ್ಧೆ ಮಾಡಿದರೆ ಹೇಗೆ?. ಈಗಾಗಲೇ ವರುಣಾದಿಂದ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ ಎಂದು ಹೆಸರನ್ನು ಕಳಿಸಲಾಗಿದೆ. ಆದರೆ ನಾನು ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಬರೆದು ಕಳಿಸಿದ್ದೇನೆ. ನನ್ನ ಸ್ಪರ್ಧೆ ಹಾಗೂ ರಾಜಕೀಯ ವಿಚಾರಗಳನ್ನು ಯಾವುದನ್ನು ತಳ್ಳಿ ಹಾಕುವಂತಿಲ್ಲ. ವರುಣಾ ಸ್ಪರ್ಧೆ ಬಗ್ಗೆ ಅಂತೆ ಕಂತೆಗಳಿಗೆ ಉತ್ತರಿಸುವುದಿಲ್ಲ. ನನಗೆ ಬಾದಾಮಿ, ಕೋಲಾರ ಹಾಗೂ ವರುಣಾ ಕ್ಷೇತ್ರಗಳು ಇಷ್ಟ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತೇನೆ : ಐದು ವರ್ಷ ಮುಖ್ಯಮಂತ್ರಿ ಆಗಿದ್ದವರು, ಕ್ಷೇತ್ರ ಹುಡುಕುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು ಕ್ಷೇತ್ರ ಹುಡುಕುತ್ತಿಲ್ಲ, ನನಗೆ ರಾಜ್ಯದ ಎಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧೆ ಮಾಡಿ ಎಂದು ಬೇಡಿಕೆ ಹೆಚ್ಚಾಗಿದೆ. ಅದು ನನಗೆ ಸಮಸ್ಯೆ ಆಗಿದೆ. ಹಳ್ಳಿಯಲ್ಲಿ ಮಾರಿ ಹಬ್ಬಕ್ಕೆ ಪ್ರತಿ ಮನೆಯಲ್ಲೂ ಊಟಕ್ಕೆ ಬನ್ನಿ ಎಂದು ಕರೆಯುತ್ತಾರೆ. ಆ ರೀತಿ ಎಲ್ಲರೂ ಕರೆಯುತ್ತಿದ್ದಾರೆ. ಆದರೆ ನಾನು ಎಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುತ್ತೇನೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕಾರ್ಯಕ್ರಮವನ್ನು ಅಧಿಕಾರಕ್ಕೆ ಬಂದರೆ ಕೊಡಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಖಂಡಿತ ಕೊಡಬಹುದು. ಈಗಾಗಲೇ ಹೆಚ್ಚಿನ ಬಡ್ಡಿಯನ್ನು ಕೊಡುತ್ತಿದ್ದೇವೆ. ಅದನ್ನು ಕಡಿಮೆ ಮಾಡಿ ಸಂಪನ್ಮೂಲ ಕ್ರೂಢೀಕರಿಸಿ ಹಾಗೂ ಲಂಚ ಕಡಿಮೆ ಮಾಡಿದರೆ ಖಂಡಿತ ಕೊಡಬಹುದು. ಈಗ ಚುನಾವಣೆ ಹತ್ತಿರ ಬರುತ್ತಿರುವುದರಿಂದ 40% ಕಮಿಷನ್ ಈಗ 50 ಪರ್ಸೆಂಟ್​ಗೆ ಹೆಚ್ಚಾಗಿದೆ ಎಂದು ಹೇಳಿದರು.

ಮೋದಿ ಕರ್ನಾಟಕಕ್ಕೆ ಎಷ್ಟು ಬಾರಿ ಬಂದರೂ ಗೆಲ್ಲಲಾಗುವುದಿಲ್ಲ : ಪದೇ ಪದೆ ಮೋದಿ ಕರ್ನಾಟಕಕ್ಕೆ ಬಂದರೂ ಪ್ರಯೋಜನವಿಲ್ಲ. ನಮ್ಮ ಕಾಲದಲ್ಲಿ ಆಗ ಬೆಂಗಳೂರು-ಮೈಸೂರು ರಸ್ತೆ ಮಂಜೂರಾತಿ, ಧಾರವಾಡ ಐಐಟಿಗೆ ಭೂಮಿ ನೀಡಿದ್ದು ನಾವು. ಇವರು ಬರೀ ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಎಲ್ಲವೂ ಜನರಿಗೆ ಗೊತ್ತಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಜೊತೆಗೆ ನಟ ಚೇತನ್ ಬಂಧನ ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವಾಗಿದೆ ಎಂದು ನಟ ಚೇತನ್ ಬಂಧನವನ್ನು ಖಂಡಿಸಿದರು.

ಇದನ್ನೂ ಓದಿ : ಕಾಂಗ್ರೆಸ್​​ ಅಭ್ಯರ್ಥಿಗಳ ಮೊದಲ ಪಟ್ಟಿ ನಾಳೆ ಬಿಡುಗಡೆ: ಆದಿಚುಂಚನಗಿರಿ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಡಿಕೆಶಿ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.