ETV Bharat / state

ನಾಗರಹೊಳೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಜಿಂಕೆ ಬೇಟೆ: ಮಾಂಸ ಜೋಳದ ಹೊಲದಲ್ಲಿ ಪತ್ತೆ.. ಇಬ್ಬರ ಬಂಧನ

author img

By

Published : Jul 22, 2023, 12:29 PM IST

ಜಿಂಕೆ ಬೇಟೆಯಾಡಿ ಮಾಂಸವನ್ನು ಜೋಳದ ಹೊಲದಲ್ಲಿ ಬಚ್ಚಿಟ್ಟಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

police with accused
ಆರೋಪಿಗಳೊಂದಿಗೆ ಅರಣ್ಯ ಪೊಲೀಸ್​ ಇಲಾಖೆ

ಮೈಸೂರು: ನಾಗರಹೊಳೆ ಉದ್ಯಾನದಲ್ಲಿ ಜಿಂಕೆ ಬೇಟೆಯಾಡಿ, ಆರೋಪಿಗಳು ಜೋಳದ ಹೊಲದಲ್ಲಿ ಮಾಂಸವನ್ನು ಬಚ್ಚಿಟ್ಟಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಪರಿಕರವನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪಿಸಿಕೊಂಡ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಘಟನೆ ವಿವರ: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ, ಹಾಗು ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ನೇಗತ್ತೂರಿನ ಜೋಳದ ಹೊಲದಲ್ಲಿ, ಅಕ್ರಮವಾಗಿ ಕಾಡು ಪ್ರಾಣಿ ಮಾಂಸ ಸಂಗ್ರಹಿಸಿಟ್ಟಿದ್ದಾರೆಂದು ಖಚಿತ ಮಾಹಿತಿ ಬಂದಿತ್ತು. ಈ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದಾಗ, ಜೋಳದ ಹೊಲದಲ್ಲಿ ರಕ್ತಸಿಕ್ತವಾಗಿದ್ದ ಮೂರು ಕತ್ತಿಗಳು, ಎರಡು ಚಾಕು, ಅನತಿ ದೂರದಲ್ಲಿ ನಾಲ್ಕು ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಕಾಡು ಪ್ರಾಣಿಯ ಮಾಂಸ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದ್ದು, ದಾಳಿಯ ಸುಳಿವರಿತು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯಸ್ಥ ಹರ್ಷಕುಮಾರ ಚಿಕ್ಕನರಗುಂದ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ದಯಾನಂದ, ವಲಯ ಅರಣ್ಯಾಧಿಕಾರಿಗಳಾದ ರತನ್‌ಕುಮಾರ್, ಗಣರಾಜ್ ಪಟಗಾರ್, ಡಿಆರ್‌ಎಫ್‌ಓಗಳಾದ ಸಿದ್ದರಾಜು, ಪ್ರಸನ್ನಕುಮಾರ್, ವೀರಭದ್ರಯ್ಯ, ಮನೋಹರ್, ರಾಮು ಹಾಗೂ ಗಸ್ತು ವನಪಾಲಕರಾದ ವಸಂತಕುಮಾರ, ಲಿಂಗರಾಜು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸಿಂಡೇನಹಳ್ಳಿಯ ಕಾಳೇಗೌಡರ ಪುತ್ರ ಪ್ರದೀಪ್ ಆಲಿಯಾಸ್ ಕುಂಡ, ಮತ್ತು ಅಬ್ಬೂರಿನ ಕರುಣೇಗೌಡರ ಪುತ್ರ ಮಧು ಬಂಧಿತ ಆರೋಪಿಗಳು. ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ಈ ಸಂಬಂಧ ವನ್ಯಜೀವಿ ಬೇಟೆಯಾಡಿದ್ದ ಸಿಂಡೇನಹಳ್ಳಿಯ ರಾಜು ಅಲಿಯಾಸ್ ದೊರೆ, ಪ್ರಸನ್ನ ಅಲಿಯಾಸ್ ಪಿಯ್ಯ, ಪ್ರದೀಪ್ ಅಲಿಯಾಸ್ ಕುಂಡ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನಾಗರಹೊಳೆ ಉದ್ಯಾನದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಜಿಂಕೆ ಕಡವೆ ಮಾಂಸ ಜೊತೆ ಆರೋಪಿಗಳು ಸೆರೆ: ರಾಮಾಪುರ ವನ್ಯ ಜೀವಿ ವಲಯದಲ್ಲಿ ಕಡವೆ ಬೇಟೆಯಾಡಿ ಅದರ ಮಾಂಸವನ್ನು ಪಾಲು ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿತ್ತು. ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಜೊತೆಗೆ ಮತ್ತೊಂದು ಪ್ರಕರಣದಲ್ಲಿ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ತಂತಿಯಲ್ಲಿ ನೇತು ಹಾಕಿದ್ದ 3 ಕೆಜಿಯಷ್ಟು ಜಿಂಕೆ ಮಾಂಸವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ 2 ಪ್ರಕರಣ ಜೂನ್​ ತಿಂಗಳಿನಲ್ಲಿ ನಡೆದಿತ್ತು.

ಇದನ್ನೂ ಓದಿ: Bengaluru crime: ಟೊಮೆಟೋ ತುಂಬಿದ್ದ ಗೂಡ್ಸ್ ವಾಹನ‌ ಕದ್ದೊಯ್ದಿದ್ದ ದಂಪತಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.