ETV Bharat / state

ಗೋಲ್ಡ್​​ ಕಂಪನಿಗಳಿಗೇ ಗಿಲೀಟ್‌ ಬಳಿಯ ಹೊರಟ ದಂಪತಿ.. ಇವರು ಗೋಲ್‌ಮಾಲ್‌ ಗಂಡ-ಹೆಂಡ್ತಿ..

author img

By

Published : Jul 19, 2021, 5:30 PM IST

company case
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಚೇತನ್ ಮಾಹಿತಿ

ಚಿನ್ನಾಭರಣ ಗಿರವಿ ಇಡುವುದಾಗಿ ಹೇಳಿ ಗೋಲ್ಡ್ ಫೈನಾನ್ಸ್ ಕಂಪನಿಗಳಿಗೆ ಯಾಮಾರಿಸಿ ಹಣ ಪಡೆದು ಪರಾರಿಯಾಗ್ತಿದ್ದ ದಂಪತಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ..

ಮೈಸೂರು : ಆಭರಣ ಇಡುವುದಾಗಿ ನಂಬಿಸಿ ಗೋಲ್ಡ್ ಫೈನಾನ್ಸ್ ಕಂಪನಿಗಳಿಗೆ ಗೋಲ್‌ಮಾಲ್‌ ಮಾಡಿ ಹಣವನ್ನು ಪಡೆದು ಪರಾರಿಯಾಗುತ್ತಿದ್ದ ಗಂಡ-ಹೆಂಡತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಭಾನುವಾರ ಮದ್ದೂರಿನ ಸೋಮನಹಳ್ಳಿ ಗ್ರಾಮದ ಬಳಿ ಬಂಧಿಸಲಾಗಿದೆ.

ಬಂಧಿತ ಮಹಿಳೆ ಹೆಸರು ಸೌಭಾಗ್ಯ@ಸೌಮ್ಯ ಮತ್ತು ಗಂಡನ ಹೆಸರು ಪ್ರಸಾದ್ ಎಂದು ತಿಳಿದು ಬಂದಿದೆ. ಇವರು ಮೂಲತ: ಗುಂಡ್ಲುಪೇಟೆ ತಾಲೂಕಿನ ಚಾಮರಾಜನಗರ ಜಿಲ್ಲೆಯ ಅಂಗಳ ಎಂಬ ಗ್ರಾಮದವರಾಗಿದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಹ ಹಲವು ಗೋಲ್ಡ್ ಫೈನಾನ್ಸ್ ಕಂಪನಿಗಳಿಗೆ ಚಿನ್ನಾಭರಣ ಗಿರವಿ ಇಡುವುದಾಗಿ ಹೇಳಿ ಯಾಮಾರಿಸಿ ಹಣ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಚೇತನ್​ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಚೇತನ್ ಮಾಹಿತಿ

ಪ್ರಕರಣದ ಹಿನ್ನೆಲೆ : ನಗರದ ಅಗ್ರಹಾರದ ಖಾಸಗಿ ಗೋಲ್ಡ್​ ಫೈನಾನ್ಸ್​ಗೆ ಅಪರಿಚಿತ ಮಹಿಳೆಯೊಬ್ಬಳು ಜುಲೈ 6ರಂದು ಕರೆ ಮಾಡಿ ತನ್ನ ಹೆಸರು ಸೌಮ್ಯ ಎಂದು ಪರಿಚಯಿಸಿಕೊಂಡಿದ್ದಳು. ತಾನು 50 ಗ್ರಾಂ ಚಿನ್ನಾಭರಣವನ್ನು ಸಾಲಿಗ್ರಾಮದ ಗಿರವಿ ಅಂಗಡಿಯಲ್ಲಿ 1 ಲಕ್ಷದ 75 ಸಾವಿರಕ್ಕೆ ಗಿರವಿ ಇಟ್ಟಿದ್ದೇನೆ. ಅದನ್ನು ಬಿಡಿಸಿಕೊಟ್ಟರೆ ಆ ಚಿನ್ನಾಭರಣಗಳನ್ನು ನಿಮ್ಮ ಗೋಲ್ಡ್‌ ಫೈನಾನ್ಸ್​ನಲ್ಲಿ ಇಡುವುದಾಗಿ ಹೇಳಿದ್ದಾಳೆ.

ಆಕೆಯ ಮಾತು ನಂಬಿ ಅಗ್ರಹಾರ ಗೋಲ್ಡ್​ ಫೈನಾನ್ಸ್​​ನಲ್ಲಿ ಕೆಲಸ ಮಾಡುವ ಸುರೇಶ್ ಅವರು ಸಾಲಿಗ್ರಾಮಕ್ಕೆ ಬಂದಿದ್ದಾರೆ. ನಂತರ ಸೌಮ್ಯ ಹಾಗೂ ಆಕೆಯ ಗಂಡ ಪ್ರಸಾದ್ ಅವರನ್ನು ಭೇಟಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಸೌಮ್ಯ ಹಾಗೂ ಪ್ರಸಾದ್ ಸುರೇಶ್​ ಅವರಿಂದ 1 ಲಕ್ಷದ 75 ಸಾವಿರ ಹಣವನ್ನು ಪಡೆದು ಗಿರವಿ ಅಂಗಡಿಯಿಂದ ಚಿನ್ನವನ್ನು ಬಿಡಿಸಿಕೊಂಡು ‌ಬರುವುದಾಗಿ ತಿಳಿಸಿ ಅಂಗಡಿಯ ಒಳಗೆ ಹೋಗುವ ರೀತಿಯಲ್ಲಿ ಹೋಗಿ ಅಲ್ಲಿಂದ ಪರಾರಿಯಾಗಿದ್ದರು.

ಈ ಸಂಬಂಧ ಸಾಲಿಗ್ರಾಮ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಈಗಾಗಲೇ ಬಂಧಿತರಿಂದ 25 ಸಾವಿರ ಹಣವನ್ನು ವಶಪಡಿಸಿಕೊಳ್ಳಲಾಗಿದೆ, ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಚೇತನ್​​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.