ETV Bharat / state

ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕವನ್ನ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ: ಅಶ್ವತ್ಥ ನಾರಾಯಣ್

author img

By ETV Bharat Karnataka Team

Published : Nov 11, 2023, 5:15 PM IST

Etv Bharatashwattha-narayan-welcomes-b-y-vijayendra-appointment-as-a-bjp-state-president
ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ: ಅಶ್ವತ್ಥ ನಾರಾಯಣ್

ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಶಾಸಕ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಶಾಸಕ ಅಶ್ವತ್ಥ ನಾರಾಯಣ್ ಪ್ರತಿಕ್ರಿಯೆ

ಮೈಸೂರು: "ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕವಾಗಿರುವುದನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ" ಎಂದು ಶಾಸಕ ಡಾ ಅಶ್ವತ್ಥ ನಾರಾಯಣ್ ಹೇಳಿದರು. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ವಿಜಯೇಂದ್ರ ಯುವಕರಿದ್ದಾರೆ, ಪಕ್ಷವನ್ನು ಸಮರ್ಥವಾಗಿ ಕಟ್ಟುತ್ತಾರೆ. ಸಾಕಷ್ಟು ಜನ ಅಕಾಂಕ್ಷಿಗಳಿದ್ದು, ಅದರಲ್ಲಿ ಹಿರಿಯರು ಇದ್ದರು. ಅದರ ನಡುವೆಯೂ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಇದರ ನಡುವೆ ಸೋಮಣ್ಣ ಪ್ರಭಾವಿ ನಾಯಕರು, ಅವರಿಗೆ ಎಲ್ಲಾ ರೀತಿಯ ಅರ್ಹತೆ ಇದೆ. ಜೊತೆಗೆ ಸಿ ಟಿ ರವಿ ಪಕ್ಷದ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಕೊಡಲು ಮಾತ್ರ ಸಾಧ್ಯ" ಎಂದರು.

ಕಾಂಗ್ರೆಸ್​ ಪಕ್ಷದವರಿಂದಲೇ ಸರ್ಕಾರ ಬೀಳಲಿದೆ: "ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನವನ್ನು ನಾವೇನು ಮಾಡುವುದಿಲ್ಲ. ಅವರ ಪಕ್ಷದವರಿಂದಲೇ ಸರ್ಕಾರ ಬೀಳಲಿದೆ. ಅವರ ಪಕ್ಷದಲ್ಲೇ ಸಾಕಷ್ಟು ಒಡಕುಗಳಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳ ದಂಡೇ ಇದೆ. ನಾನು ಸಿಎಂ ಆಗುತ್ತೇನೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಜೊತೆಗೆ ಪಕ್ಷದಲ್ಲಿ ಅಸಮಾಧಾನಗೊಂಡವರು ಇದ್ದಾರೆ. ಅವರೆಲ್ಲ ಸಿದ್ದರಾಮಯ್ಯ ಅವರನ್ನ ಉಡೀಸ್ ಮಾಡುತ್ತಿದ್ದು, ಮಂತ್ರಿಗಳು ಯಾರ ಮಾತನ್ನು ಕೇಳುತ್ತಿಲ್ಲ. ಅಂತಹವರನ್ನು ಸಚಿವ ಸಂಪುಟದಿಂದ ಹೊರ ಹಾಕಬೇಕು. ಜೊತೆಗೆ ಚಾಮುಂಡೇಶ್ವರಿ ತಾಯಿ ಸಿದ್ದರಾಮಯ್ಯಗೆ ಶಕ್ತಿ ನೀಡಲಿ" ಎಂದು ಹೇಳಿದರು.

ಎಲ್ಲಾ ಶಾಸಕರು ವಿರೋಧ ಪಕ್ಷದ ನಾಯಕರಾಗಲು ಅರ್ಹರು: "ವಿರೋಧ ಪಕ್ಷದ ನಾಯಕರ ಆಯ್ಕೆ ಸಂಬಂಧ ಮುಂದಿನ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು. ಆ ಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆ ಆಗಲಿದೆ. ಎಲ್ಲ ಶಾಸಕರು ವಿರೋಧ ಪಕ್ಷದ ನಾಯಕರಾಗಲು ಅರ್ಹರಿದ್ದು, ಅದರಲ್ಲಿ ನಾನು ಸಹ ಒಬ್ಬ ಎಂದು ವಿರೋಧ ಪಕ್ಷದ ನಾಯಕನ ಸ್ಥಾನದ ಬಯಕೆಯನ್ನು ವ್ಯಕ್ತಪಡಿಸಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ 28ಕ್ಕೆ 28 ಸ್ಥಾನವನ್ನು ಗೆಲ್ಲಲಿದ್ದೇವೆ. ಈ ಬಾರಿ ಮತ್ತೆ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ: ವಿಶೇಷ ಪೂಜೆ ನೆರವೇರಿಸಿದ ಶಾಸಕ ಡಾ.ಶಿವರಾಜ್ ಪಾಟೀಲ್

ರಾಜ್ಯಾಧ್ಯಕ್ಷರ ಆಯ್ಕೆ ಮಾಡುವ ವಿಚಾರದಲ್ಲಿ ಬಿಜೆಪಿ‌ ಫೇಲ್: ಮತ್ತೊಂದೆಡೆ, ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಮಾತನಾಡಿ, "ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯು ಅತ್ತು ಕರೆದು ಮಾಡಿರೋ ತರಹ ಕಾಣುತ್ತಿದೆ. ಕಳೆದ ಆರು ತಿಂಗಳಿಂದ ಬಿಜೆಪಿ ನಾಯಕನ ಆಯ್ಕೆ ಮಾಡಿರಲಿಲ್ಲ. ಆದರೆ, ಇವಾಗ್ಯಾಕೆ ಆಯ್ಕೆ ಮಾಡಿದ್ರು?. ರಾಜಕೀಯ ಪಕ್ಷ ಆಗಿ ತಕ್ಷಣವೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕಿತ್ತು. ಆದರೆ, ಬಿಜೆಪಿ‌ ಈ ವಿಚಾರದಲ್ಲಿ ಸಂಪೂರ್ಣ ಫೇಲ್ ಆಗಿದೆ" ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.