ETV Bharat / state

ಕೇಂದ್ರ ಜಲ ಶಕ್ತಿ ಸಚಿವರನ್ನು ಭೇಟಿಯಾದ ಸಂಸದೆ ಸುಮಲತಾ : ತಮಿಳುನಾಡಿಗೆ ನೀರು ಹರಿಸದಂತೆ ರಸ್ತೆ ತಡೆ ನಡೆಸಿ ರೈತರ ಪ್ರತಿಭಟನೆ

author img

By ETV Bharat Karnataka Team

Published : Sep 18, 2023, 4:48 PM IST

mp-sumalatha-met-gajendra-singh-shekhawat-minister-of-jal-shakti
ಕೇಂದ್ರ ಜಲ ಶಕ್ತಿ ಸಚಿವರನ್ನು ಭೇಟಿಯಾದ ಸಂಸದೆ ಸುಮಲತಾ

ಕಾವೇರಿ ನೀರು ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್​ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶಿಖಾವತ್​ ಅವರನ್ನು ಭೇಟಿಯಾಗಿದ್ದಾರೆ. ಮಂಡ್ಯದಲ್ಲಿ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ರೈತರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ತಮಿಳುನಾಡಿಗೆ ನೀರುಹರಿಸದಂತೆ ರಸ್ತೆ ತಡೆ ನಡೆಸಿ ರೈತರ ಪ್ರತಿಭಟನೆ

ಮಂಡ್ಯ : ಕಾವೇರಿ ನೀರು ಬಿಡುಗಡೆ ವಿಚಾರ ಸಂಬಂಧ ಸಂಸದೆ ಸುಮಲತಾ ಅಂಬರೀಶ್ ಅವರು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್​ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿನ ವಾಸ್ತವ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇಂದಿನಿಂದ ಆರಂಭಗೊಂಡಿರುವ ಲೋಕಸಭೆ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ನವದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ, ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ರನ್ನು ಭೇಟಿ ಮಾಡಿದರು.

ಕರ್ನಾಟಕದಲ್ಲಿ ಮತ್ತು ಮಂಡ್ಯ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಬರದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು, ಮುಂದಿನ ವಾರದೊಳಗೆ ರಾಜ್ಯದಲ್ಲಿ ಬರ ಅಧ್ಯಯನ ನಡೆಸಲು ಕೇಂದ್ರದ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ ಬರಪೀಡಿತ ಪ್ರದೇಶಗಳಿಗೆ ಕಳುಹಿಸುವುದಾಗಿ ಆಶ್ವಾಸನೆ ನೀಡಿದರು.

ಕೇಂದ್ರ ಸರ್ಕಾರದಿಂದ ನಿಯೋಜನೆಯಾಗುವ ತಂಡವು ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ವರದಿ ಸಲ್ಲಿಸಿದ ಬಳಿಕ ಈ ಅಂಶಗಳನ್ನು ಪರಿಗಣಿಸಿ ಪರಿಹಾರ ಒದಗಿಸುವ ಕಾರ್ಯ ನಡೆಸಲಾಗುವುದು. ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ರೈತರ ಪ್ರತಿಭಟನೆ : ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿಯಿಂದ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯ ಬೆಂ-ಮೈ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ರೈತರು ಧರಣಿ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ಮಾಜಿ ವಿಧಾನಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ, ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಈ ಹಿಂದೆ ನಡೆದ ಸರ್ವಪಕ್ಷ ಸಭೆಯಲ್ಲಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸೇರಿದಂತೆ ಹಲವರು ಹೇಳಿದ್ದರು. ಆದರೆ ಇದೀಗ ಮತ್ತೆ ಮೂರು ದಿನ ನೀರು ಬಿಡುವ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಮನವರಿಕೆ ಮಾಡಲಿ. ರಾಜ್ಯ ಸರ್ಕಾರ ಸರಿಯಾಗಿ ಮನವರಿಕೆ ಮಾಡಿಕೊಡುತ್ತಿಲ್ಲ. ಮನವರಿಕೆ ಮಾಡಿಕೊಟ್ಟು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಹಬ್ಬವನ್ನು ಲೆಕ್ಕಿಸದೆ ನಾವು ರೈತರ ಪರ ಹೋರಾಟ ಮಾಡುತ್ತೇವೆ. ಸರ್ಕಾರ ರೈತರ ರಕ್ಷಣೆ ಮಾಡಬೇಕು ಎಂದು ಹೇಳಿದರು.

ಈಗಾಗಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದೆ. ಪ್ರಾಧಿಕಾರದ ಸೂಚನೆ ಗಮನಿಸುತ್ತೇವೆ. ರಾಜ್ಯ ಸರ್ಕಾರದ ನಿಲುವನ್ನು ನೋಡುತ್ತೇವೆ.
ನಿನ್ನೆ ತಮಿಳುನಾಡಿಗೆ ನ್ಯಾಯ ಸಿಕ್ಕಿಲ್ಲ ಎಂಬ ಹೇಳಿಕೆ ಸರ್ಕಾರದಿಂದ ಬಂದಿದೆ. ಪದೇ ಪದೇ ರೈತರ ತಾಳ್ಮೆಯನ್ನು ಕೆಣಕಬೇಡಿ.ರಾಜ್ಯದಲ್ಲಿ ಮಳೆಯಾಗಿಲ್ಲ. ಕುಡಿಯುವ ನೀರಿಗೂ ಹಾಹಾಕಾರ ಎದ್ದಿದೆ‌‌. ಮತ್ತೆ ನೀರು ಬಿಟ್ಟರೆ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ರೈತ ನಾಯಕಿ ಸುನಂದಾ ಜಯರಾಂ ಎಚ್ಚರಿಕೆ ನೀಡಿದರು. ಪ್ರತಿಭಟನಾ ಧರಣಿಯಲ್ಲಿ ಮಾಜಿ ಶಾಸಕ ಜಿ. ಬಿ. ಶಿವಕುಮಾರ್, ರೈತ ನಾಯಕಿ ಸುನಂದಾ ಜಯರಾಂ, ಕನ್ನಡ ಸೇನೆ ಮಂಜುನಾಥ್, ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ : ತಮಿಳುನಾಡಿಗೆ ಹರಿದ ಕಾವೇರಿ; ರಾಜ್ಯ ಸರ್ಕಾರದ ವಿರುದ್ಧ ಖಾಲಿ ಕೊಡಗಳೊಂದಿಗೆ ವಾಟಾಳ್ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.