ETV Bharat / state

ಕೆಆರ್​ಎಸ್ ಸುತ್ತ ಕಲ್ಲು ಗಣಿಗಾರಿಕೆ: ಸೂಕ್ತ ನಿರ್ಧಾರ ಕೈಗೊಳ್ಳಲು ಹೈಕೋಟ್ ಸೂಚನೆ

author img

By

Published : Jan 13, 2022, 7:35 AM IST

ಕೆಆರ್​ಎಸ್ ಸುತ್ತ ಕಲ್ಲು ಗಣಿಗಾರಿಕೆ
ಕೆಆರ್​ಎಸ್ ಸುತ್ತ ಕಲ್ಲು ಗಣಿಗಾರಿಕೆ

ಬೇಬಿಬೆಟ್ಟ ಹಾಗೂ ಚಿನಕುರಳಿ ಗ್ರಾಮಗಳಲ್ಲಿನ ಕಲ್ಲು ಗಣಿಗಾರಿಕೆ ಘಟಕಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಬೆಂಗಳೂರು: ಮಂಡ್ಯ ಜಿಲ್ಲೆಯ ಬೇಬಿಬೆಟ್ಟ ಹಾಗೂ ಚಿನಕುರಳಿ ಗ್ರಾಮಗಳಲ್ಲಿನ ಕಲ್ಲು ಗಣಿಗಾರಿಕೆ ಘಟಕಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಗಣಿ ಮಾಲೀಕರ ಮನವಿಯನ್ನು ಮೂರು ವಾರದಲ್ಲಿ ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತು ಶ್ರೀಕೃಷ್ಣ ಸ್ಟೋನ್ ಕ್ರಷಿಂಗ್ ಇಂಡಸ್ಟ್ರೀಸ್ ಸೇರಿದಂತೆ 17 ಗಣಿ ಕಂಪನಿಗಳ ಮಾಲೀಕರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.

ಅರ್ಜಿದಾರರ ಪರ ವಕೀಲ ಎಲ್.ಎಂ. ಚಿದಾನಂದಯ್ಯ ವಾದ ಮಂಡಿಸಿ, ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಹಾನಿಯಾಗುತ್ತಿದೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಇದರಿಂದ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ಪ್ರಯೋಗ ನಡೆಸುವವರೆಗೆ ಗಣಿ ಚಟುವಟಿಕೆ ನಿಲ್ಲಿಸುವಂತೆ ಸೂಚಿಸಿ ಅರ್ಜಿದಾರರ ಕಲ್ಲು ಗಣಿಗಾರಿಕೆ ಘಟಕಗಳಿಗೆ ಸರ್ಕಾರ ನೋಟಿಸ್ ನೀಡಿದೆ. ಜತೆಗೆ, ಗಣಿ ಪರವಾನಗಿ ತಾತ್ಕಾಲಿಕವಾಗಿ ಅಮಾನತುಪಡಿಸಿದೆ ಎಂದು ತಿಳಿಸಿದರು.

ಅಲ್ಲದೆ, ವಾಸ್ತವವಾಗಿ ಅರ್ಜಿದಾರರ ಕಲ್ಲು ಗಣಿಗಾರಿಕೆ ಘಟಕಗಳಲ್ಲಿ ಸ್ಫೋಟಕ ವಸ್ತು ಬಳಸಿ ಗಣಿಗಾರಿಕೆ ನಡೆಸುತ್ತಿಲ್ಲ. ಮೇಲಾಗಿ ಕೆಆರ್‌ಎಸ್ ಜಲಾಶಯಕ್ಕಿಂತ ಏಳೆಂಟು ಕಿ.ಮೀ ದೂರದಲ್ಲಿ ಅರ್ಜಿದಾರರ ಗಣಿಗಾರಿಕೆ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಕಾರ್ಯಾಚರಣೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಯಾವುದೇ ರೀತಿ ಹಾನಿಯಾಗುತ್ತಿಲ್ಲ. ಹೀಗಾಗಿ, ಸರ್ಕಾರದ ನಡೆ ಕಾನೂನು ಬಾಹಿರವಾಗಿದ್ದು, ಅರ್ಜಿದಾರರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ರದ್ದುಪಡಿಸಬೇಕು ಎಂದು ಕೋರ್ಟ್ ಗಮನಕ್ಕೆ ತಂದರು.

ಸರ್ಕಾರಿ ವಕೀಲರು, ಕೆಆರ್‌ಎಸ್ ಜಲಾಶಯಕ್ಕೆ ಕಲ್ಲುಗಣಿಗಾರಿಕೆಯಿಂದ ಹಾನಿಯಾಗುತ್ತಿದೆ ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಾಗುತ್ತಿದೆ. ಆದ್ದರಿಂದ ಅರ್ಜಿದಾರರ ಕಲ್ಲು ಗಣಿಗಾರಿಕೆ ಘಟಕಗಳ ಕಾರ್ಯಾಚರಣೆ ನಿಲ್ಲಿಸಲು ಸರ್ಕಾರ ಸೂಚಿಸಿದೆ. ಅರ್ಜಿದಾರರ ಗಣಿಗಾರಿಕೆ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಪಡಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಈ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ನೋಟಿಸ್‌ಗೆ ಅರ್ಜಿದಾರರು ಒಂದು ವಾರದೊಳಗೆ ಉತ್ತರಿಸಬೇಕು. ಸರ್ಕಾರವು ಅದನ್ನು ಪರಿಗಣಿಸಿ ಮೂರು ವಾರದೊಳಗೆ ಕಾನೂನು ಪ್ರಕಾರ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

(ಇದನ್ನೂ ಓದಿ: ಕಾಂಗ್ರೆಸ್​ ನಡೆಗೆ ದಿಢೀರ್​ ಬ್ರೇಕ್​.. ಮೇಕೆದಾಟು ಪಾದಯಾತ್ರೆ ನಿಷೇಧಿಸಿ ಸರ್ಕಾರದಿಂದ ಮಹತ್ವದ ಆದೇಶ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.