ETV Bharat / state

ಶಾಂತಿಯುತವಾಗಿ ನಡೆದ ಶ್ರೀರಂಗಪಟ್ಟಣ ಹನುಮ ಜಯಂತಿ ಸಂಕೀರ್ತನಾ ಯಾತ್ರೆ

author img

By ETV Bharat Karnataka Team

Published : Dec 25, 2023, 8:58 AM IST

Updated : Dec 25, 2023, 2:25 PM IST

srirangapatna
ಹನುಮ ಜಯಂತಿ ಸಂಕೀರ್ತನಾ ಯಾತ್ರೆ

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಂಕೀರ್ತನಾ ಯಾತ್ರೆ ಶಾಂತಿಯುತವಾಗಿ ನಡೆಯಿತು.

ಹನುಮ ಜಯಂತಿ ಸಂಕೀರ್ತನಾ ಯಾತ್ರೆ

ಮಂಡ್ಯ: ಹನುಮ ಜಯಂತಿ ನಿಮಿತ್ತ ಸಕ್ಕರೆ ನಗರಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಂಕೀರ್ತನಾ ಯಾತ್ರೆ ಶಾಂತಿಯುತವಾಗಿ ನೆರವೇರಿತು. ಸಾವಿರಾರು ಮಾಲಾಧಾರಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ರು.

ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಜಾಗದಲ್ಲಿ ಮೂಡಲ ಬಾಗಿಲ ಆಂಜನೇಯ ಸ್ವಾಮಿ ಪುನರ್ ಪ್ರತಿಷ್ಠಾಪನೆ ಸಂಕಲ್ಪದೊಂದಿಗೆ ಬೃಹತ್ ಶೋಭಾ ಸಂಕೀರ್ತನಾ ಯಾತ್ರೆ ಆಯೋಜನೆ ಮಾಡಲಾಗಿತ್ತು. ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳ ಹನುಮ ಮಾಲಾಧಾರಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ರು.

ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಿಂದ ರಂಗನಾಥ ಸ್ವಾಮಿ ದೇವಸ್ಥಾನದವರೆಗೂ ಸುಮಾರು ಮೂರು ಕಿಲೋಮೀಟರ್ ಮೆರವಣಿಗೆ ಜರುಗಿತು. ಯಾತ್ರೆಗೂ ಮೊದಲು ವೇದಿಕೆ ಕಾರ್ಯಕ್ರಮವನ್ನು ನಿಮಿಷಾಂಬ ದೇವಸ್ಥಾನದ ಬಳಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಹನುಮ ನಮ್ಮ ಧರ್ಮ, ರಾಮ ನಮ್ಮ ಸಂಸ್ಕೃತಿ, ಧೈರ್ಯ, ಸಮರ್ಪಣೆ. ಶ್ರೀ ರಾಮ ಸರ್ವ ಶ್ರೇಷ್ಠ ವ್ಯಕ್ತಿ. ರಾಮನ ಹೃದಯದಲ್ಲಿ ಹನುಮಂತನಿದ್ದಾನೆ. ಪವಿತ್ರ ಅಯೋಧ್ಯೆಯಲ್ಲಿ ಮತ್ತೊಮ್ಮೆ ರಾಮ ಮಂದಿರ ನಿರ್ಮಾಣವಾಗಲಿದೆ. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಜಗತ್ತಿಗೆ ನಾಗರಿಕತೆ ಹೇಳಿಕೊಟ್ಟದ್ದು ನಮ್ಮ ಜನ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಹಿಂದೂ ಧರ್ಮದ ನಿದರ್ಶನಗಳಿವೆ ಎಂದರು.

ಇನ್ನು ವಿವಾದಿತ ಜಾಮಿಯಾ ಮಸೀದಿ ಪಕ್ಕದಲ್ಲೇ ಯಾತ್ರೆ ಸಾಗುವ ಹಿನ್ನೆಲೆಯಲ್ಲಿ ಮಸೀದಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಮಧ್ಯಾಹ್ನ ಆರಂಭಗೊಂಡ ಯಾತ್ರೆ, ಮಸೀದಿ ಬಳಿ ಬಂದ ತಕ್ಷಣ ಹನುಮ ಮಾಲಾಧಾರಿಗಳು ಘೋಷಣೆ ಕೂಗುತ್ತಾ ಸರ್ಕಲ್​ನಲ್ಲೇ ಹೆಜ್ಜೆ ಹಾಕಿ ಸಂಭ್ರಮಿಸಿದ್ರು. ಮಸೀದಿ ಸರ್ಕಲ್ ಬಳಿ ಒಂದು ಗಂಟೆಗೂ ಹೆಚ್ಚು ಕಾಲ ಕುಳಿತು, ಮಂದಿರ ನಿರ್ಮಾಣ ಮಾಡೇ ಮಾಡುತ್ತೇವೆ ಎಂದು ಕುಳಿತಿದ್ರು. ಈ ವೇಳೆ, ನೂಕಾಟ ತಳ್ಳಾಟ ಕೂಡ ಉಂಟಾಯಿತು. ಪೊಲೀಸರು ಮುಂದೆ ಕಳುಹಿಸಲು ಪ್ರಯತ್ನ ಮಾಡಿದ್ರು ಮಾಲಾಧಾರಿಗಳು ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಆನಂತರ ರಂಗನಾಥ ಸ್ವಾಮಿ ದೇವಸ್ಥಾನದ ಕಡೆ ಯಾತ್ರೆ ಸಾಗಿತ್ತು.

ಇದನ್ನೂ ಓದಿ : ಶ್ರೀರಂಗಪಟ್ಟಣದಲ್ಲಿಂದು ಹನುಮ ಸಂಕೀರ್ತನಾ ಯಾತ್ರೆ : ಬಿಗಿ ಪೊಲೀಸ್ ಬಂದೋಬಸ್ತ್

ಕಳೆದ ಬಾರಿ ಸಂಕೀರ್ತನಾ ಯಾತ್ರೆ ವೇಳೆ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಾದ್ಯಂತ ಎಸ್ ಪಿ ಯತೀಶ್ ನೇತೃತ್ವದಲ್ಲಿ ಸುಮಾರು ಎರಡು ಸಾವಿರ ಪೊಲೀಸರನ್ನು ನೇಮಕ ಮಾಡಲಾಗಿತ್ತು. ಹಲವು ಕಡೆ ಸಿಸಿ ಕ್ಯಾಮರಾ, ಡ್ರೋನ್​ ಅಳವಡಿಕೆ ಮಾಡಲಾಗಿತ್ತು. ಅಲ್ಲದೇ, ಅಲ್ಲಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿ ನಾಕಾಬಂದಿ ಹಾಕಲಾಗಿತ್ತು. ಸ್ಥಳದಲ್ಲಿ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಎಸ್ ಪಿ ಯತೀಶ್ ಮೊಕ್ಕಾಂ ಹೂಡಿದ್ದರು.

Last Updated :Dec 25, 2023, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.