ETV Bharat / state

ಮಂಡ್ಯದಲ್ಲಿ ಕಾವೇರಿ ಕಿಚ್ಚು: ಕೇಂದ್ರ, ರಾಜ್ಯ ಸರ್ಕಾರಗಳ ಅಣುಕು ಶವಯಾತ್ರೆ.. ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಹೆದ್ದಾರಿ ಬಂದ್

author img

By ETV Bharat Karnataka Team

Published : Sep 7, 2023, 11:03 PM IST

ಮಂಡ್ಯದಲ್ಲಿ ಕಾವೇರಿ ಕಿಚ್ಚು
ಮಂಡ್ಯದಲ್ಲಿ ಕಾವೇರಿ ಕಿಚ್ಚು

ಇದೇ ತಿಂಗಳ 11ರಂದು ಸಾವಿರಾರು ರೈತರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್​ ಮಾಡಲು ನಿರ್ಧರಿಸಿದ್ದೇವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ತಿಳಿಸಿದ್ದಾರೆ.

ದಸಂಸ ಮುಖಂಡ ವೆಂಕಟಗಿರಿಯಯ್ಯ

ಮಂಡ್ಯ : ಸಕ್ಕರೆ ನಗರಿ ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಟನೆಗಳು ಮುಂದುವರೆದಿದೆ. ಜೀವನಾಡಿ ಕೆ.ಆರ್.ಎಸ್ ಜಲಾಶಯದಿಂದ ತಮಿಳುನಾಡಿಗೆ ನಿತ್ಯ ನೀರು ಹರಿಸುತ್ತಿರೋದು ಅನ್ನದಾತನ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನ ವಿರೋಧಿಸಿ ಜಿಲ್ಲಾದ್ಯಂತ ಕಾವೇರಿ ಕಿಚ್ಚು ಹೆಚ್ಚಾಗ್ತಾನೇ ಇದೆ. ಆದ್ರೆ ಸರ್ಕಾರ ಮಾತ್ರ ಮೌನ ವಹಿಸಿದ್ದು, ಸರ್ಕಾರದ ಕಣ್ಣು ತೆರೆಸಲು ವಿಭಿನ್ನ ರೀತಿಯಲ್ಲಿ ಹೋರಾಟಗಳನ್ನ ಮಾಡಲಾಗ್ತಿದೆ. ಇಷ್ಟಕ್ಕೂ ಬಗ್ಗದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ.

ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

ಹೌದು ಕೆ. ಆರ್. ಎಸ್​ನಿಂದ ತಮಿಳುನಾಡಿಗೆ ನಿತ್ಯ ನೀರು ಹರಿಸುತ್ತಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ಹೋರಾಟ ಮಾಡ್ಕೊಂಡು ಬರ್ತಿರೋ ರೈತರ ಕೂಗು ಸರ್ಕಾರಕ್ಕೆ ಕೇಳಿಸ್ತಿಲ್ಲ. ಈವರೆಗೂ ವಿಭಿನ್ನ ರೀತಿಯಲ್ಲಿ ಹೋರಾಟ ಮಾಡ್ಕೊಂಡು ಬರಲಾಗ್ತಿದೆ. ಆದರೆ ಸರ್ಕಾರ ಮಾತ್ರ ಕ್ಯಾರೇ ಅಂತಿಲ್ಲ. ಇದ್ರಿಂದ ರೊಚ್ಚಿಗೆದ್ದಿರೋ ರೈತರು ಇದೇ 11 ರಂದು ಸಾವಿರಾರು ರೈತರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿರೋದಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಮಂಡ್ಯದಲ್ಲಿ ಹಿತ ರಕ್ಷಣಾ ಸಮಿತಿ ಹೋರಾಟಕ್ಕೆ ಬೆಂಬಲ ಸೂಚಿಸಿದ ವಕೀಲರು, ಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ್ರೆ, ಶ್ರೀರಂಗಪಟ್ಟಣದಲ್ಲಿ ವಕೀಲರು ಕಲಾಪ ಬಹಿಷ್ಕರಿಸಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಅತ್ತ ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ಒಣಗಿದ ಕಬ್ಬು ಹಿಡಿದು ವಿನೂತನವಾಗಿ ಪ್ರತಿಭಟಿಸಿದರಲ್ಲದೇ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ರಾಜೇಂದ್ರ ಅವರು ಮಾತನಾಡಿದರು

ದಲಿತ ಸಂಘರ್ಷ ಸಮಿತಿ ಮಂಡ್ಯದಲ್ಲಿ ಅಣಕು ಶವಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ರು. ಸಂಜಯ ವೃತ್ತದಿಂದ ಶವ ಹೊತ್ತು ಮೆರವಣಿಗೆ ಹೊರಟ ಪ್ರತಿಭಟನಾಕಾರರು ರಸ್ತೆ ಉದ್ದಕ್ಕೂ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಅಲ್ಲದೇ, ತಕ್ಷಣ ನೀರು ನಿಲ್ಲಿಸಬೇಕು, ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರಲ್ಲದೇ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕೆ.ಆರ್.ಎಸ್​ನಲ್ಲಿ ನಡೀತಿದ್ದ ಆಹೋರಾತ್ರಿ ಧರಣಿಯನ್ನ ಸದ್ಯ ಕೈಬಿಡಲಾಗಿದ್ದು, ಮಂಡ್ಯದಲ್ಲಿ ಜಿಲ್ಲಾ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಮುಂದುವರೆದಿದೆ.

ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಶವಯಾತ್ರೆ ನಡೆಸಿದರು. ಈ ವೇಳೆ ಶವದ ಪ್ರತಿಕೃತಿಯನ್ನು ಪೊಲೀಸರು ಹೊತ್ತೊಯ್ದ ಹಿನ್ನೆಲೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ.

ಇದನ್ನೂ ಓದಿ : ಕಾವೇರಿ ಹೋರಾಟ: ತಮಿಳುನಾಡಿಗೆ ನೀರು ನಿಲ್ಲಿಸಲು ರಕ್ತದಲ್ಲಿ ಸಹಿ ಮಾಡಿದ ಪತ್ರ ರಾಜ್ಯಪಾಲರಿಗೆ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.