ETV Bharat / state

ಕೃಷಿ ಸಚಿವರ ವಿರುದ್ದ ರಾಜ್ಯಪಾಲರಿಗೆ 'ಲಂಚ ಪತ್ರ': ಇಬ್ಬರು ಕೃಷಿ ಅಧಿಕಾರಿಗಳು 3 ದಿನ ಪೊಲೀಸ್ ಕಸ್ಟಡಿಗೆ

author img

By ETV Bharat Karnataka Team

Published : Aug 21, 2023, 6:53 PM IST

ಸಿಐಡಿ
ಸಿಐಡಿ

ಕೃಷಿ ಸಚಿವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕೃಷಿ ಇಲಾಖೆ ಅಧಿಕಾರಿಗಳನ್ನು ಸಿಐಡಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಕೋರ್ಟ್​ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಮಂಡ್ಯ : ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಮೈಸೂರು ಜಿಲ್ಲೆಯ ಕೆ.ಆರ್.ನಗರದ ಇಬ್ಬರು ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಿಐಡಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದರು. ಇದೀಗ ಕೋರ್ಟ್ ಇಬ್ಬರು ಅಧಿಕಾರಿಗಳನ್ನು​ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಕೃಷಿ ಸಚಿವರ ವಿರುದ್ಧ ನಕಲಿ ಪತ್ರ ಸೃಷ್ಟಿಸಿದ ಆರೋಪದ ಮೇರೆಗೆ ಕೆ.ಆರ್.ನಗರ ತಾಲೂಕಿನ ಕೃಷಿ ಇಲಾಖೆಯ ನಿರ್ದೇಶಕ ಗುರುಪ್ರಸಾದ್ ಮತ್ತು ಇಲಾಖೆಯ ಅಧಿಕಾರಿಯಾದ ಸುದರ್ಶನ್ ಎಂಬವರನ್ನು ಸಿಐಡಿ ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದರು. ಕಚೇರಿಯಲ್ಲಿದ್ದ ಕೆಲವು ದಾಖಲಾತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಸಚಿವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರಿನ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರದ ಮೂಲಕ ದೂರು ನೀಡಿದ್ದರು ಎಂದು ಹೇಳಲಾಗಿತ್ತು. ಇದಾದ ನಂತರ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ತನಿಖೆಯನ್ನು ಸಿಐಡಿಗೆ ವಹಿಸಿತ್ತು.

ಕೃಷಿ ಸಚಿವರ ವಿರುದ್ಧ ಮಂಡ್ಯ ಜಿಲ್ಲೆಯ ಏಳು ತಾಲೂಕುಗಳ ಸಹಾಯಕ ಕೃಷಿ ಇಲಾಖೆಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ, ಮೈಸೂರಿನ ಸರಸ್ವತಿ ಪುರಂ ಅಂಚೆ ಕಚೇರಿಯ ಮೂಲಕ ರಾಜ್ಯಪಾಲರ ಕಚೇರಿಗೆ ಕಳುಹಿಸಲಾಗಿತ್ತು‌ ಎಂಬ ವಿಚಾರ ತನಿಖೆ ವೇಳೆ ತಿಳಿದುಬಂದಿತ್ತು.

ನಿನ್ನೆ ರಾತ್ರಿ ಕೃಷಿ ಅಧಿಕಾರಿಗಳನ್ನು ಮಂಡ್ಯದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಸಿಐಡಿ ಪೊಲೀಸರು ಹಾಜರುಪಡಿಸಿದ್ದರು. ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ನ್ಯಾಯಾಧೀಶರು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಲು ಒಪ್ಪಿಗೆ ಸೂಚಿಸಿದ್ದರು. ವಿಚಾರಣೆಯ ಬಳಿಕ ಮತ್ತೆ ಬಂಧಿತ ಅಧಿಕಾರಿಗಳನ್ನು ಸಿಐಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

ಹೆಚ್.ಡಿ‌.ಕುಮಾರಸ್ವಾಮಿ ಹೇಳಿದ್ದೇನು?: ನಿನ್ನೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಕುಮಾರಸ್ವಾಮಿ, ಕೃಷಿ ಇಲಾಖೆಯ ಅಧಿಕಾರಿಗಳು ಸಚಿವರ ವಿರುದ್ಧ ಮಾಡಿದ ಆರೋಪ ಸರಿಯಾಗಿದೆ. ಅಧಿಕಾರಿಗಳು ಸತ್ಯ ಹೇಳಬೇಕಾಗಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಸರಿಯಾಗಿ ತನಿಖೆ ನಡೆಸುತ್ತದೆ ಎಂಬ ವಿಶ್ವಾಸ ಇಲ್ಲ. ಕೂಡಲೇ ಕೃಷಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: ಮಂಡ್ಯ ಅಧಿಕಾರಿಗಳ ಹೆಸರಲ್ಲಿ ಮೈಸೂರಿನ ಅಧಿಕಾರಿಗಳು ಪತ್ರ ಬರೆದಿರುವ ಮಾಹಿತಿ ಇದೆ: ಕೃಷಿ ಸಚಿವ ಚಲುವರಾಯಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.