ETV Bharat / state

ಮಂಡ್ಯದಲ್ಲಿ ಯಮ, ಚಿತ್ರಗುಪ್ತನ ವೇಷ ಧರಿಸಿ ಪ್ರತಿಭಟನೆ; ವರುಣ ಕೃಪೆಗೆ ಕಾವೇರಿ ಮಾತೆಗೆ ಪೂಜೆ

author img

By ETV Bharat Karnataka Team

Published : Oct 4, 2023, 6:35 PM IST

Etv Bharat
Etv Bharat

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ಸೇನೆ ಕಾರ್ಯಕರ್ತರು ಇಂದು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಮಾಜಿ ಸಚಿವ ಡಿಸಿ ತಮ್ಮಣ್ಣ ಪಾಲ್ಗೊಂಡಿದ್ದರು.

ಕಾವೇರಿಗಾಗಿ ಯಮ, ಚಿತ್ರಗುಪ್ತನ ವೇಷ ಧರಿಸಿ ವಿಶಿಷ್ಟ ಪ್ರತಿಭಟನೆಜೆ

ಮಂಡ್ಯ : ಕಾವೇರಿ ವಿಚಾರವಾಗಿ ಮಂಡ್ಯದಲ್ಲಿ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಕಾವೇರಿ ಕಿಚ್ಚು ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದೂ ಕೂಡ ಮಂಡ್ಯದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆಗಳು ನಡೆದವು.

ಬೆಳಿಗ್ಗೆ ನಗರದಲ್ಲಿ ಕನ್ನಡಸೇನೆ ಕಾರ್ಯಕರ್ತರು ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುತ್ತಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ, ಜಲಾಶಯ ಭರ್ತಿಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ಇನ್ನೊಂದೆಡೆ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ನಡೆಸುತ್ತಿರುವ ಧರಣಿ ಇಂದು ಕೂಡ ಮುಂದುವರೆದಿತ್ತು. ಕಳೆದೊಂದು ತಿಂಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ ಸಮಿತಿ ಪ್ರತಿಭಟನೆ ನಡೆಸುತ್ತಿದೆ. ಇಂದಿನ ಪ್ರತಿಭಟನೆಗೆ ರಾಜ್ಯ ಗುತ್ತಿಗೆದಾರರ ಸಂಘ ಬೆಂಬಲ ಸೂಚಿಸಿತ್ತು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಮಾಜಿ ಸಚಿವ ಡಿಸಿ ತಮ್ಮಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟಗಾರರಿಗೆ ಸಾಥ್​ ನೀಡಿದರು. ಈ ವೇಳೆ ಇಬ್ಬರು ವ್ಯಕ್ತಿಗಳು ಯಮ ಹಾಗೂ ಚಿತ್ರಗುಪ್ತನ ವೇಷ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಗಮನ ಸೆಳೆದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, "ಕಾವೇರಿ ನೀರು ವಿಚಾರದಲ್ಲಿ ರಾಜಕೀಯ ಲಾಭಕ್ಕೆ ಕೆಲವರು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹೋರಾಟಗಾರರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಪ್ರತಿಷ್ಠೆ ಬಿಟ್ಟು ಸಂಸದರು ನೀರು ಉಳಿಸಿಕೊಳ್ಳುವ ಕೆಲಸ ಮಾಡಬೇಕು" ಎಂದು ಆಗ್ರಹಿಸಿದರು.

ಮಾಜಿ ಸಚಿವ ಡಿಸಿ ತಮ್ಮಣ್ಣ ಮಾತನಾಡಿ, "ಕಾವೇರಿ ಹೋರಾಟ ಹೊಸದಲ್ಲ. ನೀರಿನ ಸಮಸ್ಯೆ ನಿರಂತರವಾಗಿ ಮುಂದುವರೆದಿದೆ. ತಮಿಳುನಾಡಿನ ನೀರಿನ ದಾಹ ಇನ್ನು ಕಡಿಮೆಯಾಗಿಲ್ಲ. ಇನ್ನೂ ಕೂಡ ನೀರು ಕೇಳ್ತಾನೆ ಇದ್ದಾರೆ. ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದರು. ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಅಧಿಕಾರಿಗಳಿಗೆ, ಸಂಸದರಿಗೆ ಬದ್ದತೆ ಇದೆ. ತಮಿಳುನಾಡಿನ ಸಂಸದರ ರೀತಿ ನಾವು ಧ್ವನಿ ಎತ್ತಬೇಕು. ನಮ್ಮ ಸಂಸದರು, ಶಾಸಕರಲ್ಲಿ ಒಗ್ಗಟ್ಟಿಲ್ಲ. ಹೋರಾಟದ ಕಿಚ್ಚಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಸರ್ಕಾರ ಕಾವೇರಿ ವಿಚಾರದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು. ನಿರಂತರವಾಗಿ ಧರಣಿ ನಡೆಯುತ್ತಿದೆ. ಕಾವೇರಿ ವಿಚಾರವಾಗಿ ತಜ್ಞರನ್ನು ನೇಮಕ ಮಾಡಿ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಬಂದಾಗ ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕು" ಎಂದು ಹೇಳಿದರು.

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯವು ಜಿಲ್ಲೆಯ ರೈತರ ಜೀವನಾಡಿ. 124.80 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್​ಎಸ್ ಜಲಾಶಯದ ನೀರಿನ ಮಟ್ಟ ಸದ್ಯ 100 ಅಡಿಗೆ ತಲುಪಿದೆ. 49 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 23 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇನ್ನು ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಜಲಾಶಯಕ್ಕೆ 9,052 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ 1,482 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಇದನ್ನೂ ಓದಿ : ಎಎಪಿಯಿಂದ 'ಕಾವೇರಿ ನಮ್ಮದು' ಧರಣಿ ಸತ್ಯಾಗ್ರಹ: ತಕ್ಷಣವೇ ಅಧಿವೇಶನ ಕರೆದು ಕಾವೇರಿ ವಿಚಾರ ಚರ್ಚಿಸುವಂತೆ ಮುಖ್ಯಮಂತ್ರಿ ಚಂದ್ರು ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.