ETV Bharat / state

ಪಂಚಮಸಾಲಿಗರಿಗೆ 2ಎ ಮೀಸಲು ಹಕ್ಕೊತ್ತಾಯ.. ಡಿ.19ವರೆಗೆ ಸರಕಾರಕ್ಕೆ ಗಡುವು

author img

By

Published : Nov 29, 2022, 9:39 PM IST

panchamasali-community-demand-for-2a-reservation
ಪಂಚಮಸಾಲಿಗರಿಗೆ 2ಎ ಮೀಸಲಾತಿ ಹಕ್ಕೊತ್ತಾಯ.... ಡಿ.19ವರೆಗೆ ಸರಕಾರಕ್ಕೆ ಗಡುವು

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಂಬಂಧ, ಡಿ.19ರೊಳಗೆ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಬೃಹತ್​ ಪ್ರತಿಭಟನೆ ನಡೆಸುವುದಾಗಿ ಕೂಡಲ ಸಂಗಮ ಪೀಠದ ಬಸವಜಯ ಮೃಂತ್ಯುಂಜಯ ಶ್ರೀಗಳು ಹೇಳಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಭಾಗವಹಿಸಿದ್ದರು.

ಕೊಪ್ಪಳ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಡಿಸೆಂಬರ್ 19ರ ವರೆಗೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಮೀಸಲಾತಿ ಆಯೋಗ ವರದಿ ನೀಡಬೇಕು. ಇಲ್ಲದಿದ್ದರೆ ಡಿ.22 ರಂದು 25 ಲಕ್ಷ ಪಂಚಮಸಾಲಿಗಳಿಂದ ಬೆಳಗಾವಿ ಸುವರ್ಣ ವಿಧಾನಸೌಧದ ಮುಂದೆ ಮತ್ತೆ ಬೃಹತ್​ ಪ್ರತಿಭಟನೆ ಮಾಡುವುದಾಗಿ ಕೂಡಲ ಸಂಗಮ ಪೀಠದ ಬಸವಜಯ ಮೃಂತ್ಯುಂಜಯ ಶ್ರೀಗಳು ಹೇಳಿದರು.

ಜಿಲ್ಲೆಯ ಮುಧೋಳದಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹಕ್ಕೊತ್ತಾಯ ಮತ್ತು ಚನ್ನಮ್ಮ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಂಚಮಸಾಲಿ ಸಂಘಟನೆ ಹುಟ್ಟಿದ್ದು ಕೊಪ್ಪಳ ಜಿಲ್ಲೆ ಯಲಬುರ್ಗಾದಲ್ಲಿ. ಪಂಚಮಸಾಲಿಗರ ರಾಜಧಾನಿ ಕೊಪ್ಪಳ ಜಿಲ್ಲೆಯಾಗಿದೆ.

1994 ರಿಂದ ಇಲ್ಲಿಂದಲೇ 2ಎ ಮೀಸಲಾತಿ ಹೋರಾಟ ಆರಂಭವಾಗಿದೆ. ಇಂದು ರಾಜ್ಯಾದ್ಯಂತ ಜನ ಒಗ್ಗಟ್ಟಾಗಿದ್ದಾರೆ. ಜೊತೆಗೆ ಬೇರೆ ಸಮಾಜದವರು ನಮ್ಮನ್ನು ನೋಡಿ ತಮ್ಮ ಸಮಾಜಕ್ಮೂ ಮೀಸಲಾತಿ ಬೇಕು ಎಂದು ಹೋರಾಟ ಮಾಡಲು ಪ್ರೇರಣೆ ದೊರಕಿದಂತಾಗಿದೆ. ನಮ್ಮದು ಪ್ರಚಂಡ ಪಂಚಮಸಾಲಿ ಶಕ್ತಿಯಾಗಿ ಬದಲಾಗಿದೆ ಎಂದು ಹೇಳಿದರು.

2023 ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲೇಬೇಕು. ಅದಕ್ಕೆ ನಮ್ಮ ಸಮಾಜದ ರಾಜಕೀಯ ನಾಯಕರು ಮಂತ್ರಿಗಿರಿಯನ್ನು ಬಿಟ್ಟು ಹೋರಾಟಕ್ಕೆ ನಿಂತಿದ್ದಾರೆ. ಜೊತೆಗೆ ಲಕ್ಷ ಜನ ಪಂಚಮಸಾಲಿ ಸಮಾಜದ ಜನರು ಇದ್ದಾರೆ. ಸರಕಾರದ ಮೇಲೆ ನಮಗೆ ನಂಬಿಕೆ ಇದೆ. ನಾವು ಮೀಸಲಾತಿ ಪಡದೇ ಪಡೆಯುತ್ತೇವೆ ಎಂದರು.

ಸರಕಾರ ನಮಗೆ 2ಎ ಮೀಸಲಾತಿ ನೀಡಲೇಬೇಕು.. ಬಸನಗೌಡ ಪಾಟೀಲ ಯತ್ನಾಳ : ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ನೀಡಬೇಕು ಎಂದು ನಡೆದ ಹೋರಾಟದಲ್ಲಿ ನಮ್ಮವರೇ ನಮ್ಮ ಕಾಳೆಯಲು ಪ್ರಯತ್ನಿಸಿದರು. ಆದರೆ, ನಾವು ಜಗ್ಗಲಿಲ್ಲ, ಬಗ್ಗಲಿಲ್ಲ. ಇದೇ ಡಿ.19 ರೊಳಗೆ ಸರಕಾರ ನಮಗೆ 2ಎ ಮಿಸಲಾತಿ ನೀಡಲೇಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿಯಾಗಬೇಕಾದರೆ ಪಂಚಮಸಾಲಿ ಸಮಾಜದ ಆಶೀರ್ವಾದ ಬೇಕೇ ಬೇಕು. ನಾವು ನಮ್ಮ ಸಮಾಜಕ್ಕಷ್ಟೆ ಅಲ್ಲ ಉಳಿದ ಸಮಾಜದವರಿಗೂ ಮೀಸಲಾತಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕೆಲವರು ಸರಕಾರಕ್ಕೆ ಪಂಚಮಸಾಲಿಗಳ ಬಗ್ಗೆ ತಪ್ಪು ಕಲ್ಪನೆ ನೀಡಿದರು. ಆದರೆ ನಾವು ಯಾವಾಗ ಬೆಂಗಳೂರು ಹೊಕ್ಕು ಹೋರಾಟಕ್ಕೆ ಸಿದ್ದವಾದೆವೋ ಆವಾಗ ಸರಕಾರ ನಮ್ಮ ಬಗ್ಗೆ ಗಂಭೀರ ಚಿಂತನೆಗೆ ಮಣಿಯಲು ಆರಂಭಿಸಿತು ಎಂದರು.

ನಾವು ಯಲಬುರ್ಗಾದಲ್ಲೇ ಮೀಸಲಾತಿಗಾಗಿ ಹೋರಾಟ ಪ್ರಾರಂಭ ಮಾಡಿದ್ದೇವೆ. ಇದೇ ಜಾಗದಲ್ಲಿ ನಿಂತು ಇವತ್ತು ಡಿ.19 ಕ್ಕೆ ಮೀಸಲಾತಿ ಸಿಗಲಿದೆ ಎಂದು ಇಲ್ಲಿಯೇ ನಿಂತು ಹೇಳುತ್ತಿದ್ದೇನೆ. ಹಾಗೊಂದು ವೇಳೆ ಏನಾದರು ಬದಲಾದರೆ ಮುಂಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ನೀಡೋಣ ಎಂದರು.

ಸರಕಾರ ಮಾತು ಉಳಿಸಿಕೊಂಡರೆ ಸನ್ಮಾನ ಇಲ್ಲಾಂದ್ರೆ ಅವಮಾನ..ವಿಜಯಾನಂದ ಕಾಶಪ್ಪನವರ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಡಿಸೆಂಬರ್ 19ರವರೆಗೆ ಗಡುವು ನೀಡಿದ್ದೇವೆ. ಸರಕಾರ ಮಾತು ಉಳಿಸಿಕೊಂಡರೆ ಸನ್ಮಾನ ಇಲ್ಲದಿದ್ದರೆ ಅವರಿಗೆ ಅವಮಾನವಾಗಲಿದೆ ಎಂದು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

ಮೊದಲ ಬಾರಿ ಮೀಸಲಾತಿ ಹೋರಾಟಕ್ಕಾಗಿ 500 ಕಿ.ಮೀ ಪಾದಯಾತ್ರೆ ಮೂಲಕ ರಾಜ್ಯಧಾನಿಗೆ ನಡೆದುಕೊಂಡು ಹೋಗಿ ಹಕ್ಕೊತ್ತಾಯ ಮಂಡಿಸಿದೆವು. ಇಂದು ಕೊನೆ ಹಂತಕ್ಕೆ ಬಂದಿದ್ದೇವೆ. ಇದೇ ಡಿ.19 ಕೊನೆ ಗಡುವು ನೀಡಿದ್ದೇವೆ. ಈ ಹೋರಾಟದಲ್ಲಿ ಬಸನಗೌಡ ಯತ್ನಾಳ ಅವರು ಗಟ್ಟಿ ಮಾತುಗಳನ್ನಾಡಿ ಗಟ್ಟಿಯಾಗಿ ನಿಂತಿದ್ದಾರೆ. ನನಗೆ ಮಂತ್ರಿ ಗಿಂತ್ರಿ ಏನು ಬೇಡ. ಸಮಾಜಕ್ಕೆ 2ಎ ಮೀಸಲಾತಿ ನೀಡಿ ಎಂದು ಸರಕಾರಕ್ಕೆ ಸವಾಲು ಹಾಕಿದ್ದಾರೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಇದು ಕೊನೆ ಗಡುವು. ನಾವು ಅವರ ಮೇಲೆ ಭರವಸೆ ಇಟ್ಟಿದ್ದೇವೆ. ನಮ್ಮ ಶ್ರೀಗಳೊಂದಿಗೆ ನಾವು ಬದ್ದರಾಗಿದ್ದೇವೆ. ನಮಗೆ ಮತ್ತು ಶ್ರೀಗಳಿಗೆ ಈ ಮೀಸಲಾತಿ ಹೋರಾಟದಿಂದ ಹಿಂದೆ ಸರಿಯಲು ಹತ್ತು ಹಲವಾರು ಆಮಿಷಗಳನ್ನ ನೀಡಿದರು. ಆದರೆ ನಾವು ಯಾವುದಕ್ಕೂ ಬಗ್ಗಲಿಲ್ಲ. ನಮ್ಮ ಸಮಾಜದ ಮುಂದಿನ ಪೀಳಿಗೆಯ ಒಳಿತಿಗಾಗಿ ಹೋರಾಟ ಮಾಡುತ್ತಿರುವುದಾಗಿ ಹೇಳಿದರು.

ಇದನ್ನೂ ಓದಿ : ನನಗೆ ಮಂತ್ರಿ ಸ್ಥಾನ ಬೇಡ, ಪಂಚಮಸಾಲಿ ಮೀಸಲಾತಿ ಕೊಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.