ETV Bharat / state

ಕಲುಷಿತ ನೀರು ಸೇವಿಸಿ ವೃದ್ಧೆ ಸಾವು: 15 ಜನ ಅಸ್ವಸ್ಥ

author img

By

Published : Jun 6, 2023, 10:50 AM IST

ಕಲುಷಿತ ನೀರು ಸೇವಿಸಿ  ಜನ ಅಸ್ವಸ್ಥ
ಕಲುಷಿತ ನೀರು ಸೇವಿಸಿ ಜನ ಅಸ್ವಸ್ಥ

ಕಲುಷಿತ ನೀರು ಸೇವಿಸಿ 65 ವರ್ಷದ ವೃದ್ಧೆ ಸಾವನ್ನಪ್ಪಿದ್ದು ಹದಿನೈದಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.

ಗಂಗಾವತಿ: ಕಲುಷಿತ ನೀರು ಸೇವಿಸಿ ವೃದ್ಧೆಯೊಬ್ಬರು ಸಾವನ್ನಪ್ಪಿ ಹದಿನೈದಕ್ಕೂ ಹೆಚ್ಚು ಜನರ ಆರೋಗ್ಯದಲ್ಲಿ ಏರುಪೇರಾದ ಘಟನೆ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನಡೆದಿದೆ. ಹೊನ್ನಮ್ಮ ಶಿವಪ್ಪ (65) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಸುಮಾರು ಹದಿನೈದಕ್ಕೂ ಹೆಚ್ಚು ಜನ ಕನಕಗಿರಿ, ಗಂಗಾವತಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆ ಹೊನ್ನಮ್ಮ ಅವರನ್ನು ಚಿಕಿತ್ಸೆಗಾಗಿ ಕನಕಗಿರಿಯ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಸಾವನ್ನಪ್ಪಿದ್ದಾರೆ. ಘಟನೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಅಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಲುಷಿತ ನೀರು ಸೇವಿಸಿ ಗ್ರಾಮದಲ್ಲಿ ಹಲವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣಕ್ಕೆ ಗುರುತಿಸಿ ಆರಂಭದಲ್ಲಿಯೇ ಈ ಬಗ್ಗೆ ಪಂಚಾಯಿತಿ ಸಿಬ್ಬಂದಿ ನಿಗಾ ವಹಿಸಿದ್ದರೆ ವೃದ್ಧೆ ಸಾವನ್ನಪ್ಪುತ್ತಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಜನ ಹೆಚ್ಚಿನ ಪ್ರಮಾಣದಲ್ಲಿ ಅನಾರೋಗ್ಯಕ್ಕೀಡಾಗುವದನ್ನು ತಪ್ಪಿಸಬಹುದಿತ್ತು. ಈ ಬಗ್ಗೆ ಗ್ರಾಮದ ಕೆಲ ಯುವಕರು ಪಂಚಾಯಿತಿ ಸಿಬ್ಬಂದಿಗಳ ಗಮನಕ್ಕೆ ತಂದರೂ ಅಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮದ ಯುವಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಸ್ವಸ್ಥಗೊಂಡಿದ್ದ ಜನರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಿಬ್ಬಂದಿ ತೀವ್ರ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಯುವಕರು ಆರೋಪಿಸಿದ್ದಾರೆ.

ಮೇ 29 ರಂದು ಕಲುಷಿತ ನೀರು ಕುಡಿದು 25 ಜನ ಅಸ್ವಸ್ಥಗೊಂಡಿರುವ ಮತ್ತೊಂದು ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ ಬೆಳಕಿಗೆ ಬಂದಿತ್ತು. ವಾಂತಿ, ಭೇದಿಯಿಂದ ಗೊರೆಬಾಳದಲ್ಲಿ ಮೂವರು ತೀವ್ರ ಅಸ್ವಸ್ಥಗೊಂಡಿದ್ದರು.

ಅಸ್ವಸ್ಥರನ್ನು ಲಿಂಗಸುಗೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಮೆಡಿಕಲ್ ಕ್ಯಾಂಪ್ ಹಾಕಿ ಸ್ಥಳದಲ್ಲಿಯೇ ಬೀಡುಬಿಟ್ಟು ಪರಿಸ್ಥಿತಿ ನಿಭಾಯಿಸುವಲ್ಲಿ ಶ್ರಮಿಸಿತ್ತು. ಕುಡಿಯುವ ನೀರು ಸರಬರಾಜು ಪೈಪ್‌ಗೆ ಚರಂಡಿ ನೀರು ಸೇರಿ ಅವಾಂತರ ಸೃಷ್ಟಿಯಾಗಿದೆ ಎಂಬ ಮಾಹಿತಿ ಆಗ ಹೊರ ಬಿದ್ದಿತ್ತು. "ಬೋರ್‌ವೆಲ್​​ನಿಂದ ನೀರು ಸರಬರಾಜು ಮಾಡುವ ಪೈಪ್ ಡ್ಯಾಮೇಜ್ ಆಗಿ ಕಲುಷಿತ ನೀರು ಸರಬರಾಜು ಆಗಿತ್ತು. ಈ ನೀರು ಸೇವಿಸಿ ಜನರು ಅಸ್ವಸ್ಥಗೊಂಡಿದ್ದರು" ಎಂದು ಗ್ರಾಮಸ್ಥರು ಆಗ ಹೇಳಿದ್ದರು.

ಇದನ್ನೂ ಓದಿ: ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣ: ಪಿಡಿಒ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.