ETV Bharat / state

ಆಂಧ್ರದ ವ್ಯಕ್ತಿ ಅನುಮಾನಾಸ್ಪದ ಸಾವು: ಕೋಲಾರ ಎಸ್ಪಿ ಸ್ಪಷ್ಟನೆ

author img

By ETV Bharat Karnataka Team

Published : Sep 6, 2023, 11:01 PM IST

Updated : Sep 6, 2023, 11:09 PM IST

kolar-sp-clarification-on-suspicious-death-of-andhra-man
ಆಂಧ್ರದ ವ್ಯಕ್ತಿ ಅನುಮಾನಾಸ್ಪದ ಸಾವು : ಕೋಲಾರ ಎಸ್ಪಿ ಸ್ಪಷ್ಟನೆ

ಕಳವು ಪ್ರಕರಣದಲ್ಲಿ ಬಂಧಿತನಾಗಿ ಬಿಡುಗಡೆ ಹೊಂದಿದ್ದ ಆಂಧ್ರ ಮೂಲದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಕೋಲಾರ ಎಸ್​ಪಿ ನಾರಾಯಣ್​ ಮಾಹಿತಿ ನೀಡಿದ್ದಾರೆ.

ಆಂಧ್ರದ ವ್ಯಕ್ತಿ ಅನುಮಾನಾಸ್ಪದ ಸಾವು: ಕೋಲಾರ ಎಸ್ಪಿ ಸ್ಪಷ್ಟನೆ

ಕೋಲಾರ : ಮೊಬೈಲ್​ ಹಾಗೂ ಬೈಕ್​ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿ ಬಿಡುಗಡೆ ಬಳಿಕ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕು ನಂಗಲಿ ಎಂಬಲ್ಲಿ ನಡೆದಿದೆ. ಆಂಧ್ರ ಮೂಲದ ಮುನಿರಾಜು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಮೃತನ ಕುಟುಂಬಸ್ಥರು ಪೊಲೀಸರ ವಿರುದ್ಧವೇ ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಳಬಾಗಿಲು ತಾಲೂಕು ನಂಗಲಿ ಠಾಣಾ ಪೊಲೀಸರು ಆಂಧ್ರಪ್ರದೇಶ ಮದನಪಲ್ಲಿ ಮೂಲದ ಮುನಿರಾಜು ಹಾಗೂ ಬಾಲಾಜಿ ಎಂಬ ವ್ಯಕ್ತಿಗಳನ್ನು ಬೈಕ್​ ಹಾಗೂ ಮೊಬೈಲ್​ ಕಳ್ಳತನ ಆರೋಪದಲ್ಲಿ ಆಗಸ್ಟ್​ 21ರಂದು ಬಂಧಿಸಿ ಪೊಲೀಸ್​ ಠಾಣೆಗೆ ಕರೆತಂದಿದ್ದರು. ಬಳಿಕ ಕಳೆದ ಹದಿನೈದು ದಿನಗಳ ಕಾಲ ವಿಚಾರಣೆಗೆ ಪೊಲೀಸರ ವಶದಲ್ಲಿದ್ದ ಆರೋಪಿಗಳು ಬಳಿಕ ಬಿಡುಗಡೆಯಾಗಿದ್ದರು. ಈ ವೇಳೆ ಆರೋಪಿ ಮುನಿರಾಜು ಎಂಬಾತನ ಆರೋಗ್ಯದಲ್ಲಿ ಏರುಪೇರಾಗಿ ಕಳೆದ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ಮುನಿರಾಜು ಕುಟುಂಬದವರಿಗೆ ಕರೆ​ ಮಾಡಿ ತಿಳಿಸಿದ್ದಾರೆ. ಈ ವೇಳೆ ವಿಷಯ ತಿಳಿದು ಕೋಲಾರಕ್ಕೆ ಬಂದ ಮೃತ ಆರೋಪಿಯ ಮುನಿರಾಜ್ ಕುಟುಂಬಸ್ಥರು ಪೊಲೀಸರ ವಿರುದ್ದ ಲಾಕಪ್​ ಡೆತ್​ ಆರೋಪ ಮಾಡಿದ್ದರು. ಈ ಸಂಬಂಧ ಕುಟುಂಬಸ್ಥರು ಕೋಲಾರ ಎಸ್ಪಿ ದೂರು ಸಲ್ಲಿಸಿದ್ದು, ಪೊಲೀಸರ ವಿರುದ್ಧವೇ ಆರೋಪ ಕೇಳಿ ಬಂದ ಹಿನ್ನಲೆ ಪ್ರಕರಣದ ತನಿಖೆಯನ್ನು ಕೋಲಾರ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ.

ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕಾನೂನಿನಡಿ ಯಾವುದೇ ಲೋಪವಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ವಿಧಿ ವಿಜ್ಞಾನ ತಜ್ಞರು, ನಾಲ್ಕು ಜನ ಪರಿಣಿತ ವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಇದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಬಳಿಕ ಮುನಿರಾಜು ಶವವನ್ನು ಅವರ ಪೋಷಕರಿಗೆ ಒಪ್ಪಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕೋಲಾರ ಎಸ್ಪಿ ನಾರಾಯಣ್​ ಅವರು, ಕಳೆದ ಆಗಸ್ಟ್​ 24ರಂದು ಮುನಿರಾಜು ಹಾಗೂ ಬಾಲಾಜಿ ಎಂಬುವರನ್ನು ಮೊಬೈಲ್​ ಹಾಗೂ ಬುಲೆಟ್​ ಬೈಕ್​ ಕಳ್ಳತನ ಆರೋಪದಲ್ಲಿ ಬಂಧಿಸಿ ವಿಚಾರಣೆಗೆ ಕರೆತರಲಾಗಿತ್ತು. ಬಳಿಕ ಅವರಿಗೆ ನೋಟೀಸ್​ ನೀಡಿ ಸೆಪ್ಟಂಬರ್​ 2ರಂದು ಕಳಿಸಲಾಗಿತ್ತು. ಆ ನಂತರ ಆರೋಪಿ ಮುನಿರಾಜು ಆರೋಗ್ಯದಲ್ಲಿ ಏರುಪೇರಾಗಿ ಮೊದಲು ನಂಗಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಂತರ ಕೋಲಾರ ಜಿಲ್ಲಾಸ್ಪತ್ರೆ, ನಂತರ ಆರ್​.ಎಲ್​.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ವೇಳೆ ಮುನಿರಾಜು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ. ಮುನಿರಾಜು ಪೊಲೀಸ್​ ಠಾಣೆಯಲ್ಲಿ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. ಸದ್ಯ ಮುನಿರಾಜು ಕುಟುಂಬಸ್ಥರು ನೀಡಿರುವ ದೂರಿನ ಮೇಲೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ : ಸ್ಕೂಟಿಗೆ ಹಾಸ್ಯ ನಟನ ಕಾರು ಡಿಕ್ಕಿ.. ಯುವಕನ ಸ್ಥಿತಿ ಗಂಭೀರ: ಅಪಘಾತದ ಬಗ್ಗೆ ಆ್ಯಕ್ಟರ್​ ಹೇಳಿದ್ದೇನು?

Last Updated :Sep 6, 2023, 11:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.