ETV Bharat / state

ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಪುಂಡಾನೆ ಸೆರೆ.. ನಿಟ್ಟುಸಿರು ಬಿಟ್ಟ ಜನತೆ

author img

By

Published : Dec 29, 2022, 10:37 AM IST

wild elephant
ಕಾಡಾನೆ ಸೆರೆ

ಕೊಡಗು ಜಿಲ್ಲೆಯಲ್ಲಿ ಮನುಷ್ಯರ ಮೇಲೆ ದಾಳಿ‌ ಮಾಡಿ, ಬೆಳೆ ನಾಶ‌ ಮಾಡಿದ ಆನೆ - ಕಾಡಾನೆ ಸೆರೆ ಹಿಡಿದ ಅರಣ್ಯ ಇಲಾಖೆ - ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಸುತ್ತಮುತ್ತ ಹಲವು ತಿಂಗಳುಗಳಿಂದ ಬೀಡು ಬಿಟ್ಟಿದ್ದ ಸಲಗ

ದಾಂಧಲೆ ನಡೆಸುತ್ತಿದ್ದ ಪುಂಡಾನೆ ಸೆರೆ

ಮಡಿಕೇರಿ(ಕೊಡಗು): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಸದ್ದು ಮಾಡುತ್ತಿದೆ. ಈ ಮಧ್ಯೆ ಕೊಡಗು ಜನರಿಗೂ ಸಹ ಗಜಪಡೆಯ ಉಪಟಳ ಹೆಚ್ಚಾಗಿದೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಸುತ್ತಮುತ್ತ ಹಲವು ತಿಂಗಳುಗಳಿಂದ ಬೀಡು ಬಿಟ್ಟು ಕಾಫಿ ತೋಟದಲ್ಲಿ ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಪುಂಡಾನೆ ಸೆರೆ.. ಹೌದು, ಕಳೆದ ಮೂರು ದಿನಗಳಿಂದ ಕರಡಿಗೋಡು ವ್ಯಾಪ್ತಿಯಲ್ಲಿ ಐವತ್ತಕ್ಕೂ ಅಧಿಕ ಸಿಬ್ಬಂದಿ ಹಾಗೂ ಐದು ಸಾಕಾನೆಗಳ ಸಹಾಯದೊಂದಿಗೆ ಬುಧವಾರ ಪುಂಡಾನೆಯನ್ನು ಕರಡಿಗೋಡು ಆರೆಂಜ್ ಕೌಂಟಿ ತೋಟದಲ್ಲಿ ಸೆರೆ ಹಿಡಿಯಲಾಯಿತು.

ಸಿದ್ದಾಪುರ ವ್ಯಾಪ್ತಿಯಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿಯಿಂದ ಸ್ಥಳೀಯ ಕಾಫಿ ಬೆಳೆಗಾರರು ಹೈರಾಣಾಗಿದ್ದರು. ಇತ್ತೀಚಿಗೆ ಆನೆಗಳ ಹಾವಳಿಯಿಂದ ಕಾಫಿ, ಭತ್ತದ ಬೆಳೆಗಳು ನಾಶವಾಗಿದ್ದು, ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ರೈತ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಕಾಡಾನೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ: ಗ್ರಾಮಕ್ಕೆ ನುಗಿದ್ದ ಕಾಡಾನೆ.. ರೈತರ ಬೆಳೆ ನಾಶ

ಮೂರು ದಿನಗಳ ಕಾರ್ಯಾಚರಣೆ ಯಶಸ್ವಿ: ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಕರಡಿಗೋಡು ವ್ಯಾಪ್ತಿಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಇಲಾಖಾ ಸಿಬ್ಬಂದಿಯಿಂದ ತಪ್ಪಿಸಿಕೊಂಡು ಅತ್ತಿತ್ತ ಓಡಾಡುವ ಮೂಲಕ ಕಾಡಾನೆ ಕಾರ್ಯಾಚರಣೆಗೆ ತೊಡಕು ಉಂಟುಮಾಡುತ್ತಿತ್ತು. ಅಷ್ಟೇ ಅಲ್ಲದೆ, ಕಾರ್ಯಾಚರಣೆ ವೇಳೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಗಳ ಹಿಂಡನ್ನು ಚದುರಿಸುತ್ತಿದ್ದ ಸಂದರ್ಭದಲ್ಲಿ ಕೋಪಗೊಂಡ ಕಾಡಾನೆಯೊಂದು ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಬಂದಿದ್ದು, ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.

ಇದನ್ನೂ ಓದಿ: ಕಾಡಾನೆ ದಾಳಿಗೆ ಚಿಕ್ಕಮಗಳೂರಲ್ಲಿ ರೈತ ಬಲಿ.. ಭೈರನ ಸೆರೆಯಿಂದ ನಿಟ್ಟುಸಿರು ಬಿಟ್ಟ ಜನರಿಗೆ ಮತ್ತೆ ಆತಂಕ

ಸರ್ಕಾರವು ವಿರಾಜಪೇಟೆ ತಾಲೂಕಿನಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಸಿದ್ದಾಪುರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಹದಿನೆಂಟು ವರ್ಷದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಜನರಿಂದ ಪ್ರತಿಭಟನೆ, ಒತ್ತಾಯ.. ಸಿದ್ದಾಪುರದ ಕರಡಿಗೋಡು ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಮೋಹನ್ ದಾಸ್ ಎಂಬುವರನ್ನು ಕೊಂದು ರಾಜಾರೋಷವಾಗಿ ದಾಂಧಲೆ ‌ನಡೆಸುತ್ತಿದ್ದ ಕಾಡಾನೆಯನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಅಲ್ಲದೇ, ಇತ್ತೀಚೆಗೆ ವ್ಯಾಪ್ತಿಯ ತೋಟವೊಂದರ ಕಾವಲುಗಾರನ ಮೇಲೆ ಸಹ ಒಂಟಿ ಸಲಗ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆ ಸೆರೆ ಹಿಡಿಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ನರಹಂತಕ ಕಾಡಾನೆ ಹೆಸರಿನಲ್ಲಿ ಸಣ್ಣ ಆನೆಯೊಂದನ್ನು ಸೆರೆ ಹಿಡಿದು ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಆನೆಗಳ ಉಪಟಳ.. ಕಾಫಿನಾಡಿನ ಜನರು ಸಹ ಕಾಡಾನೆಗಳ ಹಾವಳಿಗೆ ಬೆಚ್ಚಿಬಿದ್ದಿದ್ದಾರೆ. ಇತ್ತೀಚೆಗಷ್ಟೇ ಜಮೀನಲ್ಲಿದ್ದ ರೈತನ ಮೇಲೆ ದಾಳಿ ಮಾಡಿ ಕಾಡಾನೆಯೊಂದು ಕೊಂದು ಹಾಕಿತ್ತು. ಕಳೆದ ಮೂನಾಲ್ಕು ತಿಂಗಳಲ್ಲಿ ಒಟ್ಟು ಮೂವರನ್ನು ಕಾಡಾನೆಗಳು ಬಲಿ ಪಡೆದಿವೆ.

ಇದನ್ನೂ ಓದಿ: ಭೈರನ ಕಣ್ಣಾಮುಚ್ಚಾಲೆ, ಉಪಟಳಕ್ಕೆ ಬ್ರೇಕ್: ಕೊನೆಗೂ ಒಂಟಿಸಲಗ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.