ETV Bharat / state

ಮಡಿಕೇರಿ: ರಾಜಾಸೀಟ್​ನಿಂದ ವರ್ಷದ ಕೊನೆಯ ಸೂರ್ಯಾಸ್ತ ವೀಕ್ಷಿಸಿದ ಪ್ರವಾಸಿಗರು

author img

By ETV Bharat Karnataka Team

Published : Dec 31, 2023, 11:00 PM IST

Etv Bharattourists-watched-last-sunset-of-this-year-in-rajaseat-at-madiker
ಮಡಿಕೇರಿ: ರಾಜಾಸೀಟ್​ನಿಂದ ವರ್ಷದ ಕೊನೆಯ ಸೂರ್ಯಾಸ್ತ ವೀಕ್ಷಿಸಿದ ಪ್ರವಾಸಿಗರು

ವರ್ಷದ ಕೊನೆಯ ಸೂರ್ಯಾಸ್ತವನ್ನು ಸಾವಿರಾರು ಪ್ರವಾಸಿಗರು ಮಡಿಕೇರಿಯ ರಾಜಾಸೀಟ್​ನಲ್ಲಿ ವೀಕ್ಷಿಸಿದರು.

ವರ್ಷದ ಕೊನೆಯ ಸೂರ್ಯಾಸ್ತ ವೀಕ್ಷಿಸಿದ ಪ್ರವಾಸಿಗರು

ಕೊಡಗು: 2023 ಮುಗಿಸಿ 2024 ಅನ್ನು ಕೆಲವೇ ಕ್ಷಣಗಳಲ್ಲಿ ಸ್ವಾಗತ ಮಾಡಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಹಲವೆಡೆ ಸಂಭ್ರಮಾಚರಣೆಗಳು ಶುರುವಾಗಿವೆ. ವರ್ಷದ ಕೊನೆಯ ದಿನವಾದ ಭಾನುವಾರ ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್​ನಲ್ಲಿ ಸಂಭ್ರಮ ಮನೆಮಾಡಿತ್ತು. ವರ್ಷಾಂತ್ಯದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಬೆಟ್ಟ-ಗುಡ್ಡ, ಮೋಡದ ನಡುವೆ ಬಣ್ಣದ ಚಿತ್ತಾರ ಬಿಡಿಸಿದಂತಿದ್ದ ನೇಸರನಿಗೆ 2023ರ ವಿದಾಯ ಹೇಳಿದರು.

ರಾಜಸೀಟಿನಲ್ಲಿ ಪ್ರವಾಸಿಗರ ಕಲರವ ಕಂಡುಬಂತು, ಕನ್ನಡದ ಹಾಡಿಗೆ ಪ್ರವಾಸಿಗರು ಸಖತ್ ಸ್ಟೇಪ್ ಹಾಕಿ ಖುಷಿಪಟ್ಟರು. ಸಂಜೆ ವೇಳೆಗೆ ತಣ್ಣಗಾದ ಸೂರ್ಯ ಕೆಂಪು ಕಡಲಲ್ಲಿ ತೇಲಿದಂತೆ ಕಂಡು ಬಂದ. ಸೂರ್ಯಾಸ್ತದ ಕೊನೇ ಕ್ಷಣ ಹತ್ತಿರವಾಗುತ್ತಿದ್ದಂತೆ ನೆರೆದಿದ್ದ ಜನರಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಸೂರ್ಯಾಸ್ತ ಆಗಲು ಕಾದು ಕುಳಿತಿದ್ದ ಪ್ರವಾಸಿಗರು, ಸೂರ್ಯ ಅಸ್ತಂಗತನಾಗುವ ಸುಳಿವು ನೀಡುತ್ತಿದ್ದಂತೆಯೇ ಸಂಭ್ರಮದಿಂದ ಕುಣಿದಾಡಿದರು. ಕೈ ಬೀಸಿ ಹಾಯ್ ಬಾಯ್ ಎನ್ನುತ್ತಾ ಹಲವು ಸಿಹಿ ಕಹಿಗಳ ಮಿಶ್ರಣ ಹೊಂದಿದ್ದ 2023ಕ್ಕೆ ಜನರು ಖುಷಿ ಖುಷಿಯಿಂದಲೇ ಬೀಳ್ಕೊಟ್ಟರು.

ತಮ್ಮ ಮೊಬೈಲ್​, ಕ್ಯಾಮರಾಗಳಲ್ಲಿ ವರ್ಷದ ಕೊನೆ ಸೂರ್ಯಾಸ್ತವನ್ನು ಸೆರೆಹಿಡಿದರು. 2023ರ ನೇಸರನಿಗೆ ವಿದಾಯ ಹೇಳಿ 2023ರ ನೇಸರನ ನಿರೀಕ್ಷೆಯಿಂದ ಹೊರನಡೆದರು.

ಮುಳ್ಳಯ್ಯನ ಗಿರಿಯಲ್ಲಿ ಟ್ರಾಫಿಕ್​ ಜಾಮ್​: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ದೌಡಾಯಿಸುತ್ತಿದ್ದಾರೆ. ಇದರಿಂದ ಮುಳ್ಳಯ್ಯನ ಗಿರಿಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ಪ್ರವಾಸಿಗರು ಕಿರಿಕಿರಿ ಅನುಭವಿಸುವಂತಾಗಿತ್ತು. ಮುಳ್ಳಯ್ಯನ ಗಿರಿ ರಾಜ್ಯದಲ್ಲೇ ಅತಿ ಎತ್ತರದ ಗಿರಿ ಪ್ರದೇಶವಾಗಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಮಾತ್ರವಲ್ಲದೆ, ವಿವಿಧ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಹೊಸ ವರ್ಷಾಚರಣೆಗೆ ಮುಳ್ಳಯ್ಯನ ಗಿರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮುಳ್ಳಯ್ಯನಗಿರಿ ರಸ್ತೆಯಲ್ಲಿ ಸುಮಾರು 2 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.ಇಲ್ಲಿನ ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನ ಗಿರಿ ವೀಕ್ಷಣೆಗೆ ಪ್ರವಾಸಿಗರು ಬಂದಿದ್ದು, ರಸ್ತೆಯಲ್ಲಿ 2 ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜಿಲ್ಲೆಯ ಹೆಚ್ಚಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ತುಂಬಿ ತುಳುಕುತ್ತಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ದತ್ತಪೀಠ, ಮಾಣಿಕ್ಯದಾರ, ಗಾಳಿಕೆರೆಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಬೆಂಗಳೂರು ರೆಡಿ: ನಗರದ ಹಲವೆಡೆ ಭದ್ರತೆ ಬಿಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.