ETV Bharat / state

ಹೊಸ ವರ್ಷಾಚರಣೆಗೆ ಬೆಂಗಳೂರು ರೆಡಿ: ನಗರದ ಹಲವೆಡೆ ಭದ್ರತೆ ಬಿಗಿ

author img

By ETV Bharat Karnataka Team

Published : Dec 31, 2023, 1:13 PM IST

Updated : Dec 31, 2023, 1:27 PM IST

ಹೊಸ ವರ್ಷಕ್ಕೆ ಇನ್ನು ಕೇವಲ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಸಿಲಿಕಾನ್​ ಸಿಟಿ ಬೆಂಗಳೂರು ಸಜ್ಜಾಗಿದೆ.
new year
ಬೆಂಗಳೂರು

ಬೆಂಗಳೂರು: ಹೊಸ ವರ್ಷಾಚರಣೆಗೆ ರಾಜಧಾನಿ ಬೆಂಗಳೂರು ಸಿದ್ಧವಾಗಿದೆ. ಈ ಬಾರಿ ಮುನ್ನೆಚ್ಚರಿಕೆಯಾಗಿ ಸೂಕ್ತ ಭದ್ರತೆ ವಹಿಸಲು ಬೆಂಗಳೂರು ನಗರ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಈಗಾಗಲೇ ಮಾರ್ಗಸೂಚಿ ಹೊರಡಿಸಿರುವ ಸಂಚಾರ ಪೊಲೀಸರು ಇಂದು ಬೆಳಿಗ್ಗೆಯಿಂದಲೇ ನಗರದ ಎಂ.ಜಿ.ರೋಡ್, ಬ್ರಿಗೆಡ್ ರಸ್ತೆ, ಕೋರಮಂಗಲ, ಇಂದಿರಾನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಕೆಲವು ಸ್ಥಳಗಳಲ್ಲಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್​ ಮಾಡಿದರೆ ಟೋಯಿಂಗ್​ ಖಚಿತವಾಗಿದೆ. ಎಂ.ಜಿ.ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ಕಲರ್‌ಫುಲ್​ ಪಾರ್ಟಿ ಮಾಡಲು ಬರುವವರಿಗೆ ಈ ಸ್ಥಳಗಳ ಎರಡೂವರೆ ಕಿ.ಮೀ ಸುತ್ತಮುತ್ತ ವಾಹನಗಳಿಗೆ ಪ್ರವೇಶ ಹಾಗೂ ಪಾರ್ಕಿಂಗ್‌ಗೆ ಅವಕಾಶವಿಲ್ಲ. ವಾಹನಗಳನ್ನು ನಿಗದಿತ ಸ್ಥಳಗಳಲ್ಲೇ ನಿಲ್ಲಿಸಿ ಬರಬೇಕಿದೆ.

ಕಾನೂನು ಸುವ್ಯವಸ್ಥೆ, ಸಂಚಾರ ಪೊಲೀಸ್​​, ಗೃಹರಕ್ಷಕ ದಳ ಸೇರಿದಂತೆ 10 ಸಾವಿರಕ್ಕೂ ಅಧಿಕ ಸಿಬ್ಬಂದಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಎಂ.ಜಿ.ರಸ್ತೆ , ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಬಳಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನುಳಿದಂತೆ ಕೋರಮಂಗಲ, ಇಂದಿರಾನಗರ, ಮಹದೇವಪುರ, ವೈಟ್​ ಫೀಲ್ಡ್​, ಮಾರತ್ತಹಳ್ಳಿ, ನ್ಯೂ ಬಿ.ಇ.ಎಲ್​ ರಸ್ತೆಗಳಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ.

ಹಲವು ಪೊಲೀಸ್ ತಂಡಗಳು ಪಬ್, ರೆಸ್ಟೋರೆಂಟ್‌ಗಳಿರುವ ಕಡೆ ಕಾರ್ಯನಿರ್ವಹಿಸಲಿವೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ವಿಶೇಷ ತಂಡಗಳು ನಿಗಾವಹಿಸಲಿವೆ. ಪ್ರಮುಖ ಸ್ಥಳಗಳಲ್ಲಿ ಸೇಫ್ಟಿ ಐಲ್ಯಾಂಡ್​, ತಾತ್ಕಾಲಿಕ ಕಂಟ್ರೋಲ್​​ ರೂಂ ವ್ಯವಸ್ಥೆಯಾಗಿದೆ. ಸಂಜೆಯಿಂದಲೇ ಎಲ್ಲಾ ತಂಡಗಳು ಮತ್ತಷ್ಟು ಸಕ್ರಿಯರಾಗಿರುವಂತೆ ನಗರ ಪೊಲೀಸ್​​ ಆಯುಕ್ತ ಬಿ.ದಯಾನಂದ್ ಸೂಚಿಸಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಾಚರಣೆ; ಎಂಜಿ ರೋಡ್, ಬ್ರಿಗೇಡ್ ರೋಡ್​ಗೆ ಆಗಮಿಸುವವರಿಗೆ‌ ಪೊಲೀಸರ ಸೂಚನೆ

ಸಂಜೆ 4ರಿಂದ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿದೆ. ಜನವರಿ 1ರ ಬೆಳಿಗ್ಗೆ 3ಗಂಟೆಯವರೆಗೂ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್‌ವರೆಗೆ, ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್‌ವರೆಗೆ, ಚರ್ಚ್ ಸ್ಟ್ರೀಟ್‌ನ ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ, ಎಂ.ಜಿ.ರಸ್ತೆ ಜಂಕ್ಷನ್‌ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆಯ (ಎಸ್.ಬಿ.ಐ) ವೃತ್ತದವರೆಗೆ, ರೆಸ್ಟ್ ಹೌಸ್ ರಸ್ತೆಯಲ್ಲಿ, ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್‌ವರೆಗೆ, ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ, ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ.ರಸ್ತೆ ಜಂಕ್ಷನ್‌ವರೆಗೆ (ಶಂಕರ್ ನಾಗ್ ಚಿತ್ರಮಂದಿರ)ದವರೆಗೆ ಪೊಲೀಸ್ ವಾಹನಗಳು ಹಾಗು ಕರ್ತವ್ಯನಿರತ ತುರ್ತುಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿದೆ.

Last Updated :Dec 31, 2023, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.