ETV Bharat / state

ಕೊಡಗಿನಲ್ಲಿ ಮುಂಗಾರು ಆರ್ಭಟ.. ಕುಸಿಯುತ್ತಿರುವ ಬೆಟ್ಟ-ಗುಡ್ಡ, ಭಾರಿ ಮಳೆಗೆ ಜನ ತತ್ತರ

author img

By

Published : Jul 3, 2022, 6:20 PM IST

monsoon-rains-in-kodagu-people-panic-due-to-heavy-rain
ಕೊಡಗಿನಲ್ಲಿ ಮುಂಗಾರು ಆರ್ಭಟ : ಭಾರೀ ಮಳೆಗೆ ಜನರು ಕಂಗಾಲು

ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡಗು : ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ಬೆಟ್ಟ ಗುಡ್ಡಗಳ ಕುಸಿತ ಒಂದೆಡೆಯಾದರೆ, ಇನ್ನೊಂದೆಡೆ ಮುಂಗಾರು ಆರ್ಭಟಕ್ಕೆ ರಸ್ತೆಗಳು ಜಲಾವೃತಗೊಂಡಿದೆ. ಬೆಟ್ಟ ಗುಡ್ಡ ಮತ್ತು ನದಿ ತೀರ ಪ್ರದೇಶದಲ್ಲಿ ವಾಸಮಾಡುವ ಜನರು ದಿನನಿತ್ಯ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಆರ್ಭಟಕ್ಕೆ ಕೊಡಗಿನ ಜನರ ಸ್ಥಿತಿ ದುಸ್ತರವಾಗಿದೆ.

ಆತಂಕದಲ್ಲಿ ಬದುಕುತ್ತಿರುವ ಜನರು : ಜಿಲ್ಲೆಯಲ್ಲಿ ಮುಂಗಾರು ಆರ್ಭಟ ಮುಂದುವರೆದಿದ್ದು, ಒಟ್ಟು 7 ಬಾರಿ ಭೂ ಕಂಪನವಾದ ಬೆನ್ನಲ್ಲೇ ಅಲ್ಲಲ್ಲಿ‌ ಬೆಟ್ಟ ಗುಡ್ಡಗಳು ಕುಸಿಯಲಾರಂಭಿಸಿವೆ. ಮಡಿಕೇರಿ ಸಮೀಪದ ಎರಡನೇ ಮೊಣ್ಣಂಗೇರಿಗೆ ತೆರಳುವ ರಸ್ತೆಯಲ್ಲಿ ಬೆಟ್ಟ ಕುಸಿದು ರಸ್ತೆ ಸಂಚಾರಕ್ಕೆ ತಡೆಯುಂಟಾಗಿದ್ದು, ಜನರು ಪರದಾಡುವಂತಾಗಿದೆ. ಬೆಟ್ಟ ಗುಡ್ಡಗಳಲ್ಲಿ ವಾಸಮಾಡುವ ಜನರು ಎಲ್ಲಿ ಏನಾಗುತ್ತೋ, ಯಾವಾಗ ಬೆಟ್ಟಗುಡ್ಡಗಳು ಕುಸಿಯುವುದೋ ಎಂಬ ಜೀವಭಯದಲ್ಲಿ ಬದುಕುವಂತಾಗಿದೆ. ತಲಕಾವೇರಿ, ಭಾಗಮಂಡಲದಲ್ಲಿ ಭಾರಿ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ಭರ್ತಿಯಾಗಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊಡಗಿನಲ್ಲಿ ಮುಂಗಾರು ಆರ್ಭಟ : ಭಾರೀ ಮಳೆಗೆ ಜನರು ಕಂಗಾಲು

ಭಾರಿ ಮಳೆಗೆ ಜನಜೀವನ ದುಸ್ತರ : ಭೂಕಂಪನ ಉಂಟಾಗಿರುವ ಬ್ರಹ್ಮಗಿರಿ ಬೆಟ್ಟದ ಭಾಗಗಳಲ್ಲಿಯೂ ಎಡಬಿಡದೆ ಮಳೆಯಾಗುತ್ತಿದೆ. ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆಯಾಗಿದ್ದು, ಸಂಗಮ ಭರ್ತಿಯಾಗಿ ನಾಪೋಕ್ಲು ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ನಾಪೋಕ್ಲು ಭಾಗಮಂಡಲ ರಸ್ತೆ ಸಂಪರ್ಕ ಕಡಿತವಾಗಿದೆ. ಜೊತೆಗೆ ಹಾರಂಗಿ ಜಲಾಶಯವೂ ಭರ್ತಿಯಾಗಿದ್ದು, ಶನಿವಾರ 1,200 ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು ನದಿ ತೀರ ಪ್ರದೇಶದ ಜನರು ಮನೆಖಾಲಿ ಮಾಡುವ ಪರಿಸ್ಥಿತಿ ಎದುರಾಗಿದೆ.

ಜುಲೈ 5 ರವರೆಗೂ ಭಾರಿ ಮಳೆ : ಕೊಡಗು ಜಿಲ್ಲೆ ಸೇರಿ ರಾಜ್ಯದ ಹಲವೆಡೆ ವ್ಯಾಪಕ‌ ಮಳೆಯಾಗುತ್ತಿದ್ದು, ಜುಲೈ 5ರವರೆಗೂ ವರುಣನ ಆರ್ಭಟ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಂಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭೂ ಕಂಪನ ಉಂಟಾದ ಭಾಗಮಂಡಲ, ಪೆರಾಜೆ, ಕರಿಕೆ, ಕೊಡಗು ಗಡಿ ಭಾಗದಲ್ಲೂ ಹೆಚ್ಚು ಮಳೆಯಾಗುತ್ತಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಸುರಕ್ಷಿತ ಪ್ರದೇಶಗಳಿಗೆ ಜನರನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಜಿಲ್ಲಾಡಳಿವನ್ನು ಒತ್ತಾಯಿಸಿದ್ದಾರೆ. ಜುಲೈ 5ರವರೆಗೆ ರಾಜ್ಯದ ಕರಾವಳಿ ಭಾಗದಲ್ಲೂ ವ್ಯಾಪಕ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳ ಮೇಲೆ ದೊಡ್ಡಗಾತ್ರದ ಮರಗಳು ಬಿದ್ದು ಸಂಚಾರ ವ್ಯತ್ಯಯವಾಗಿದೆ. ಜೊತೆಗೆ ವಿದ್ಯುತ್ ಕಂಬಗಳೂ ಧರೆಗುರುಳಿದ್ದು ವಿದ್ಯುತ್ ಅಡಚಣೆ ಉಂಟಾಗಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಸಂಚಾರ ಮಾಡಲು ಜನ ಭಯಪಡುತ್ತಿದ್ದಾರೆ. ಕಳೆದ ಬಾರಿ ಸಂಭವಿಸಿದ ಜಲಪ್ರಳಯದ ಕಾರ್ಮೋಡ ಮಾಸುವ ಮುನ್ನವೇ ಈ ಬಾರಿ ಹೆಚ್ಚು ಮಳೆಯಾಗಿ, ಭೂ ಕುಸಿತಗಳು ಸಂಭವಿಸುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

ಇದನ್ನೂ ಓದಿ : ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಹೆಚ್.ಆರ್ ಶ್ರೀನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.