ETV Bharat / state

ಮಡಿಕೇರಿಯಲ್ಲಿ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ: ಶಾಸಕರ ಮಧ್ಯಪ್ರವೇಶಕ್ಕೆ ಹೈಕೋರ್ಟ್ ಬೇಸರ

author img

By

Published : Aug 21, 2021, 7:41 PM IST

ಮಡಿಕೇರಿ ಪಟ್ಟಣದ ಸ್ಟೋನ್ ಹಿಲ್ ಪ್ರದೇಶದಲ್ಲಿ ಕೋಳಿ ಹಾಗೂ ಇತರ ಪ್ರಾಣಿಗಳ ತ್ಯಾಜ್ಯ ಸುಡಲು ತೆಗೆಯಲಾಗಿದ್ದ ಗುಂಡಿಗಳನ್ನು ಶಾಸಕರು ಮುಚ್ಚಿಸಿದರೆಂಬ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್ ಶಾಸಕರ ಹೆಸರುಗಳನ್ನು ತಿಳಿಸುವಂತೆ ಮಡಿಕೇರಿ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದೆ.

ಹೈಕೋರ್ಟ್

ಬೆಂಗಳೂರು: ಮಡಿಕೇರಿ ಪಟ್ಟಣದ ಸ್ಟೋನ್ ಹಿಲ್ ಪ್ರದೇಶದಲ್ಲಿ ಕೋಳಿ ಹಾಗೂ ಇತರ ಪ್ರಾಣಿಗಳ ತ್ಯಾಜ್ಯ ಸುಡಲು ತೆಗೆಯಲಾಗಿದ್ದ ಗುಂಡಿಗಳನ್ನು ಶಾಸಕರು ಮುಚ್ಚಿಸಿದರೆಂಬ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಮಾಹಿತಿ ನೀಡದೇ ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ, ಶಾಸಕರ ಹೆಸರುಗಳನ್ನು ತಿಳಿಸುವಂತೆ ಮಡಿಕೇರಿ ನಗರಸಭೆ ಆಯುಕ್ತರಿಗೆ ನಿರ್ದೇಶಿಸಿದೆ.

ಮಡಿಕೇರಿಯ ಕರ್ಣಂಗೇರಿ ಗ್ರಾಮದ ಸ್ಟೋನ್ ಹಿಲ್ ಪ್ರದೇಶದಲ್ಲಿ ಅಕ್ರಮ ಹಾಗೂ ಅವೈಜ್ಞಾನಿಕವಾಗಿ ನಗರಸಭೆಯು ತ್ಯಾಜ್ಯ ಸುರಿಯುತ್ತಿವುದನ್ನು ಆಕ್ಷೇಪಿಸಿ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಮಡಿಕೇರಿ ನಗರಸಭೆ ಆಯುಕ್ತರು ಪ್ರಮಾಣ ಪತ್ರ ಸಲ್ಲಿಸಿ, ಸ್ಟೋನ್ ಹಿಲ್ ಪ್ರದೇಶದಲ್ಲಿ ಕೋಳಿ ಹಾಗೂ ಇತರ ಪ್ರಾಣಿಗಳ ತ್ಯಾಜ್ಯ ಸುಡಲು ಗುಂಡಿಗಳನ್ನು ತೆಗೆಯಲಾಗಿತ್ತು. ಅವುಗಳನ್ನು ಅರ್ಜಿದಾರರು ಹಾಗೂ ಸ್ಥಳೀಯ ಶಾಸಕರು ಮುಚ್ಚಿಸಿದ್ದಾರೆ ಎಂದರು.

ಇದಕ್ಕೆ ಆಕ್ಷೇಪಿಸಿದ ಪೀಠ, ಅರ್ಜಿದಾರರು ಗುಂಡಿಗಳನ್ನು ಮುಚ್ಚಿಸಿದ್ದು ಏಕೆ? ಈ ವಿಚಾರದಲ್ಲಿ ಯಾವುದೇ ಕುಂದು ಕೊರತೆ ಇದ್ದರೂ ನ್ಯಾಯಾಲಯದ ಗಮನಕ್ಕೆ ತರಬೇಕಿತ್ತು. ಅವರೇ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಇಂತಹದ್ದೇ ವರ್ತನೆ ಮುಂದುವರಿಸಿದರೆ ಪ್ರಕರಣದಿಂದ ಅರ್ಜಿದಾರರನ್ನು ಕೈ ಬಿಟ್ಟು ನ್ಯಾಯಲಯವೇ ಸ್ವಯಂಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಂಡು ವಿಚಾರಣೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿತು.

ಅಲ್ಲದೇ, ಗುಂಡಿಗಳನ್ನು ತೆಗೆದಿದ್ದ ಸ್ಥಳಗಳಿಗೆ ತೆರಳಿದ್ದ ಮೂವರು ಶಾಸಕರ ಹೆಸರುಗಳನ್ನು ನಗರಸಭೆ ಆಯುಕ್ತರು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನಿರ್ದೇಶಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.