ETV Bharat / state

ಕೊಡಗಿನಲ್ಲಿ ಭಾರಿ ಮಳೆ: ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

author img

By

Published : Jul 23, 2023, 8:40 PM IST

kodagu-dc-announced-holiday-for-schools-and-colleges-tomorrow-for-heavy-rain
ಕೊಡಗಿನಲ್ಲಿ ಭಾರೀ ಮಳೆ: ನಾಳೆ ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Heavy rain in Kodagu: ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ನಾಳೆ ಬೆಳಗ್ಗೆವರೆಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಕೊಡಗು: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ರಜೆ ಘೋಷಿಸಿದ್ದಾರೆ. ಇನ್ನು, ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಸೋಮವಾರ ಬೆಳಗ್ಗೆ 8.30 ರ ವರೆಗೆ ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಕಳೆದ ಐದು ದಿನಗಳಿಂದ ಎಡಬಿಡದೆ ಅಬ್ಬರಿಸುತ್ತಿದೆ.

ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಕಾವೇರಿ ನದಿ ನೀರು ಹೆಚ್ಚಳ ಆಗಿರುವುದರಿಂದ
ಭಾಗಮಂಡಲ ಮತ್ತು ತಲಕಾವೇರಿ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಧಾರಾಕಾರ ಮಳೆಯಿಂದ ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆ ಇದ್ದು, ಭಾಗಮಂಡಲದ ಸುತ್ತಮುತ್ತಲಿನ ಬೆಟ್ಟ, ಗುಡ್ಡಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಈಗ ಆತಂಕ ಮನೆ ಮಾಡಿದೆ.

ಜಿಲ್ಲೆಯಲ್ಲಿ‌ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲಲ್ಲಿ ಮಳೆಯಿಂದ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ನಾಪೋಕ್ಲು ಸಮೀಪದ ಚೆರಿಯಾಪರಂಬುವಿನ ಕಾವೇರಿ ಹೊಳೆಯ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ರಸ್ತೆಯ ಮೇಲೆ ಅಂದಾಜು ಒಂದರಿಂದ ಒಂದೂವರೆ ಅಡಿ ನೀರು ನಿಂತಿದೆ.

ಅಲ್ಲದೆ ಭಾಗಮಂಡಲ ಹೋಬಳಿ ಬೆಂಗೂರು ಗ್ರಾಮದ ದೋಣಿಕಾಡುವಿನಲ್ಲಿ ರಸ್ತೆಯು ಕಾವೇರಿ ನದಿ ನೀರಿನಿಂದ ಸಂಪೂರ್ಣವಾಗಿ ಜಾಲವೃತವಾಗಿದೆ.
ಭಾರಿ ಗಾಳಿ ಮಳೆಗೆ ಮರಗಳು ನೆಲಕುರುಳುತ್ತಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಿರಾಜಪೇಟೆ ತಹಶೀಲ್ದಾರ್​ ರಾಮಚಂದ್ರ ಅವರು‌ ಕಾವೇರಿ ನದಿ ಪಾತ್ರದ ಹತ್ತಿರ ಇರುವ ಕರಡಿಗೋಡು ಗ್ರಾಮಕ್ಕೆ ಭಾನುವಾರ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಾಪಕ ಮಳೆಯಿಂದ ನೀರಿನ‌ ಮಟ್ಟ ಹೆಚ್ಚಾಗುವ ಸಾಧ್ಯತೆ ಇದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಇಲ್ಲಿನ‌ ವಾಸಿಗಳಿಗೆ ಮನವಿ ಮಾಡಿದ್ದಾರೆ. ಈಗಾಗಲೇ ತಾಲೂಕು ಆಡಳಿತ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದು, ಮಳೆ‌ ಇದೇ ರೀತಿ ಮುಂದುವರೆದಲ್ಲಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ಕಾವೇರಿ ನದಿ ಮತ್ತು ಕಾವೇರಿ ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅಣೆಕಟ್ಟೆಯಿಂದ ನದಿಗೆ 20 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ನೀರಿನ ಹೊರಹರಿವು ಹೆಚ್ಚಾಗಿ ಸೇತುವೆ ಮುಳುಗಡೆಯಾಗಿದ್ದು, ಇದರಿಂದ ಹಾರಂಗಿ - ಯಡವನಾಡು ರಸ್ತೆ ಸಂಪರ್ಕ ಕಡಿತವಾಗಿದೆ. ಜೊತೆಗೆ ಕುಶಾಲನಗರ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿದೆ.

ಸುಂಟಿಕೊಪ್ಪ-ಮಾದಾಪುರ ರಸ್ತೆ ಮೇಲೆ ಮರ, ವಿದ್ಯುತ್ ಕಂಬ ಬಿದ್ದು ವಿದ್ಯುತ್ ಸಂಪರ್ಕ ಖಡಿತವಾಗಿದ್ದು, ಸರಿಪಡಿಸುವ ಕೆಲಸ ನಡೆಯುತ್ತಿದೆ. ಮತ್ತೊಂದೆಡೆ, ಪೊನ್ನಂಪೇಟೆ ತಾಲೂಕು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದಂಚಿನಲ್ಲಿರುವ ಚಿಣ್ಣರಹಾಡಿಯ ಕಾಲು ಸೇತುವೆ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹಾಡಿಯ ಗಿರಿಜನರು ಬೇರೆಡೆ ಕೆಲಸ ಕಾರ್ಯಕ್ಕೆ ಹೋಗಿ ಬರಲು ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳು ಸುತ್ತಿ ಬಳಸಿ ಕಾಫಿ ತೋಟ ಮತ್ತು ಗದ್ದೆಗಳ ಮೂಲಕ ಕಾಲ್ನಡಿಗೆಯಲ್ಲಿ ಮುಖ್ಯ ರಸ್ತೆಗೆ ಬರಬೇಕಾಗಿದ್ದು, ಹಾಡಿಯ ಹತ್ತಿರ ವಾಹನ ಸಂಚಾರಕ್ಕೆ ಅವಕಾಶವಾಗದೆ ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಹೋಗಿ ಬರಲು ಸಮಸ್ಯೆಯಾಗಿದೆ.

ಇದನ್ನೂ ಓದಿ: ಹಾಸನ: ಮೈದುಂಬಿ ಹರಿಯುತ್ತಿರುವ ಮೂಕನಮನೆ ಜಲಪಾತ.. ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.