ETV Bharat / state

ಅಕ್ರಮ ಚಟುವಟಿಕೆಗಳಿಗೆ ಏಕಿಲ್ಲ ಕಡಿವಾಣ?: ಪೊಲೀಸ್ ಅಧಿಕಾರಿಗಳಿಗೆ ಪ್ರಿಯಾಂಕ್​ ಖರ್ಗೆ ಕ್ಲಾಸ್

author img

By

Published : Jun 20, 2023, 8:18 PM IST

Minister Priyanka Kharge held a meeting of officials of Kalaburagi dist.
ಸಚಿವ ಪ್ರೀಯಾಂಕ ಖರ್ಗೆ ಕಲಬುರಗಿ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದರು.

ಕಲಬುರಗಿ ಜಿಲ್ಲೆಯಲ್ಲಿ ಜೂಜು, ಅಕ್ರಮ ಮರಳು ದಂಧೆ, ಗ್ಯಾಂಬ್ಲಿಂಗ್, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್‌ನಂತಹ ಅಕ್ರಮ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತಿವೆ.

ಕಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ- ಸಾಗಾಟ, ಕಲ್ಲು ಗಣಿಗಾರಿಕೆ, ಜೂಜಾಟ, ಮದ್ಯ ಮಾರಾಟ, ಗಾಂಜಾ ಮಾರಾಟ, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಗೃಹ, ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವ ಖರ್ಗೆ, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ, ಜೂಜು, ಕ್ರಿಕೆಟ್ ಗ್ಯಾಂಬ್ಲಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ನಿಮಗೆ ಸಾಧ್ಯವಾಗುತ್ತಿಲ್ಲವೇಕೆ? ನಿಮಗೆ ಗೊತ್ತಿಲ್ಲದೆ ಈ ಎಲ್ಲ ದಂಧೆ ನಡೆಯುತ್ತಿವೆಯೇ? ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ನಿಮಗೆ ಇವುಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದರೆ ನೀವೂ ಕೂಡ ಅವರೊಂದಿಗೆ ಶಾಮೀಲಾಗಿದ್ದೀರಿ ಎಂದರ್ಥ. ಇತ್ತೀಚೆಗೆ ಪೊಲೀಸ್ ಇಲಾಖೆಯ ಪೇದೆಯೊಬ್ಬರು ಅಕ್ರಮ ಮರುಳು ಸಾಗಣೆ ತಡೆಯಲು ಹೋಗಿ ಪ್ರಾಣ ಕಳೆದುಕೊಂಡರು. ನಿಮ್ಮೊಂದಿಗೆ ಕೆಲಸ ಮಾಡುವ ಸಿಬ್ಬಂದಿ ಮೃತಪಟ್ಟಿದ್ದಾರೆ. ನಿಮಗೆ ಏನೂ ಅನಿಸುವುದಿಲ್ಲವೇ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು.

ಅಪ್ರಾಪ್ತರಿಗೆ ಅಕ್ರಮ ಮದ್ಯ ಮಾರಾಟ ಮಾಡಲಾಗ್ತಿದೆ. ಕಿರಾಣಿ ಅಂಗಡಿಗಳಲ್ಲಿಯೂ ಮದ್ಯ ಮಾರಾಟ ನಡೆಯುತ್ತಿದೆ. ಜಿಲ್ಲೆಯಲ್ಲಿ ಥರ್ಡ್ ಕ್ವಾಲಿಟಿ ಲಿಕ್ಕರ್ ಹಾಗು ಕಳ್ಳಭಟ್ಟಿ ಸಾರಾಯಿ ಮಾರಾಟದ ಕುರಿತು ದೂರುಗಳಿವೆ. ಅಬಕಾರಿ ಇಲಾಖೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಚಿವರು ಪ್ರಶ್ನಿಸಿದಾಗ, ಪೊಲೀಸ್ ಅಧಿಕಾರಿಗಳು 300ಕ್ಕೂ ಅಧಿಕ ಕೇಸ್​​ಗಳನ್ನು ದಾಖಲಿಸಲಾಗಿದೆ ಎಂದು ಉತ್ತರಿಸಿದರು. ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ಬಾಲಕಿಯರು ಹಾಗೂ ಮಹಿಳೆಯರು ಕಾಣೆಯಾಗುತ್ತಿರುವ ಕುರಿತು ವರದಿಗಳಿವೆ. ಈ ಬಗ್ಗೆ ಮಾಧ್ಯಮಗಳು ಕೂಡ ವರದಿ ಮಾಡಿವೆ ಎಂದು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಿಪಿಐ, ಪಿಎಸ್ಐ ಹಾಗೂ‌ ಪಿಸಿಗಳೇ ರೌಡಿಗಳನ್ನು ಸಾಕುತ್ತಿದ್ದೀರಿ. ನಿಮ್ಮಿಂದಲೇ ಜಿಲ್ಲೆಯ ಮರ್ಯಾದೆ ಹಾಳಾಗುತ್ತಿದೆ. ರೌಡಿಗಳ ಜನ್ಮದಿನಕ್ಕೆ ಪೊಲೀಸ್ ಅಧಿಕಾರಿಗಳು ಹೋಗುತ್ತಾರೆ. ಆಚರಣೆಗೆ ಐಬಿಗಳಲ್ಲಿ ಅನುಮತಿ ನೀಡಲಾಗುತ್ತಿದೆ. ಈ ಹಿಂದಿನ‌ ಪೊಲೀಸ್ ಅಧಿಕಾರಿಯೊಬ್ಬರು ರೌಡಿಯೊಬ್ಬನ ಜನ್ಮದಿನಕ್ಕೆ ಹೋಗಿ‌ ವಿಷ್ ಮಾಡಿ ಫೋಟೋ ತೆಗೆಸಿಕೊಂಡಿದ್ದರು. ಪೊಲೀಸರು ರೌಡಿಗಳಿಗೆ ಅಣ್ಣಾ ಎಂದು ಸಂಬೋಧಿಸುತ್ತಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ?

ನಿಮ್ಮ ಯೂನಿಫಾರ್ಮ್‌ಗಾದರೂ ಮರ್ಯಾದೆ ಬೇಡವೇ?. ಇಂತಹ ಚಟುವಟಿಕೆಗಳು ಕೂಡಲೇ ನಿಲ್ಲಬೇಕೆಂದು ಸಚಿವ ಪ್ರಿಯಾಂಕ್ ಎಚ್ಚರಿಕೆ ನೀಡಿದ್ರು. ಪೋಲಿಸರು ರೌಡಿಗಳೊಂದಿಗೆ ಬೆರೆಯುವುದು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇನೆ. ಇದು ನಿಮ್ಮ‌ ಮರ್ಯಾದೆಯಲ್ಲ. ನಮ್ಮ ಸರ್ಕಾರದ ಮರ್ಯಾದೆ ಪ್ರಶ್ನೆ ಎಂದು ಖಡಕ್ ಆಗಿ ಸೂಚಿಸಿದ್ದಲ್ಲದೇ , ಬಹಳ ವರ್ಷಗಳಿಂದ ಒಂದೇ ಜಾಗದಲ್ಲಿ ಠಿಕಾಣಿ ಹೂಡಿರುವ ಸಿಬ್ಬಂದಿ ಹಾಗೂ ರೈಟರ್ಸ್ ವರ್ಗಾವಣೆ ಮಾಡಿ ಎಂದು ನಗರ ಪೊಲೀಸ್ ಕಮೀಷನರ್ ಹಾಗೂ ಎಸ್ಪಿಗೆ ಹೇಳಿದರು.

ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ದ ನಡೆಯುತ್ತಿರುವ ಇಲಾಖೆ ತನಿಖೆಗಳನ್ನು ಪೂರ್ಣಗೊಳಿಸುವಂತೆ ಕಮೀಷನರ್ ಹಾಗೂ ಎಸ್ಪಿಗೆ ಸೂಚಿಸಿದ ಅವರು, ನಗರ ವ್ಯಾಪ್ತಿಯ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹೆಚ್ಚಾಗಿ ನಡೆಯುತ್ತಿದೆ. ಈ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಯೂನಿವರ್ಸಿಟಿ ಹಾಗೂ ಅಶೋಕ್ ನಗರ ಪೊಲೀಸ್ ಠಾಣೆಗಳು ವಿವಾದಿತ ಸಿವಿಲ್ ಕೇಸ್​​​ಗಳ ಸೆಟಲ್‌ಮೆಂಟ್ ಅಡ್ಡಾಗಳಾಗಿವೆ. ಅಧಿಕಾರಿಗಳು ಬೀಟ್​​ಗೆ ಹೋಗುವುದಿಲ್ಲ ಎಂದು ದೂರುಗಳು ಬಂದಿವೆ ಎಂದ ಸಚಿವರು ಈ ವಿಷಯವನ್ನು ಕಮೀಷನರ್ ಗಮನಕ್ಕೆ‌ ತಂದು ಸರಿಪಡಿಸುವಂತೆ ತಿಳಿಸಿದರು.

ಪ್ರತಿ ಪೊಲೀಸ್ ಸ್ಟೇಷನ್‌ಗಳಿಂದ ನಮ್ಮಿಬ್ಬರು‌ ಸಚಿವರಿಗೆ 20,000 ಕೊಡಬೇಕು ಎಂದು ವದಂತಿಗಳಿವೆ. ಯಾರಾದ್ರು ನಮ್ಮ ಹೆಸರು ಹೇಳಿ ವಸೂಲಿಗೆ ಇಳಿದರೆ ಅಂತವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು‌ ಎಚ್ಚರಿಸಿದ್ರು. ಅಕ್ರಮ ಮರಳು ಸಾಗಣೆ ಮಾಡುವ ಜಾಲದಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮಾಮೂಲು ನೀಡುವ ದರಪಟ್ಟಿ ಓದಿ ಹೇಳಿದ ಸಚಿವರು ಈ ಪಟ್ಟಿ ಪ್ರಕಾರ ಅಕ್ರಮ ಮರುಳುದಾರರಿಂದ ವಸೂಲಿ ಮಾಡುವುದನ್ನು ನಿಲ್ಲಿಸಬೇಕೆಂದು ಖಡಕ್ ಸೂಚನೆ ನೀಡಿದರು. ಅಲ್ಲದೆ ಜಿಲ್ಲೆಯಲ್ಲಿ ಯಾರ ವಿರುದ್ದ ಗಡಿಪಾರು ಆದೇಶಗಳು ಇವೆಯೋ ಅವುಗಳನ್ನು ಹಾಗೆ ಮುಂದುವರೆಸಿ ಎಂದು ಎಸ್ಪಿ ಸಲಹೆ ನೀಡಿದರು.

ಸರ್ಕಾರದ ಬಗ್ಗೆ ತಪ್ಪು ಮಾಹಿತಿ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವವರನ್ನು ಪತ್ತೆ ಮಾಡಿ. ಇತ್ತೀಚೆಗೆ ನಡೆದ ಪೇದೆ ಹತ್ಯೆ ನಾನೇ ಮಾಡಿರುವಂತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಲಾಗುತ್ತಿದೆ. ಹಾಗಾಗಿ‌ ಸೋಷಿಯಲ್ ಮೀಡಿಯಾದಲ್ಲಿ ಹಬ್ಬುವ ಪೋಸ್ಟಗಳನ್ನು ನಿರಂತರವಾಗಿ ನೋಡಲು ಒಂದು ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಿ ಸುಳ್ಳು ಸುದ್ದಿ‌ ಹರಡುವವರ ವಿರುದ್ದ ತೀಕ್ಷ್ಣ ಕಾನೂನು ಕ್ರಮ ಕೈಗೊಳ್ಳಿ. ಗೋವು ರಕ್ಷಕರು ಎಂದು ಹೇಳಿಕೊಂಡು ಕೆಲ ಸಂಘಟನೆಗಳ ವ್ಯಕ್ತಿಗಳು ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಎಂದು ಖರ್ಗೆ ತಾಕೀತು ಮಾಡಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಓವರ್ ಲೋಡ್ ಮರುಳು ಸಾಗಾಣಿಕೆ ಮಾಡುವ ವಾಹನಗಳನ್ನು ಸೀಜ್ ಮಾಡಿ ಕೇಸು ದಾಖಲಿಸಿ ಎಂದು ಸೂಚಿಸಿದ್ರು. ನಗರದಲ್ಲಿ 22 ಕ್ಲಬ್‌ಗಳು ನಡೆಯುತ್ತಿವೆ. ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿವೆ ಪಟ್ಟಿ ಮಾಡಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ನಾನು ಮಾಹಿತಿ ಕೊಡುತ್ತೇನೆ. ಅಂತಹ ಕ್ಲಬ್ ಗಳ ಮೇಲೆ ದಾಳಿ ಮಾಡಿ ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ. ಅಕ್ರಮ ಚಟುವಟಿಕೆ ನಡೆಸುವ ಯಾವ ಕ್ಲಬ್ ಕೂಡ ನಗರ ವ್ಯಾಪ್ತಿಯಲ್ಲಿ ಇರಬಾರದು ಎಂದು ಡಿಸಿಪಿ ಶ್ರೀನಿವಾಸಲು ಅವರಿಗೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದನ್ನೂಓದಿ:Kalaburagi crime : ಮೃತ ಹೆಡ್ ಕಾನ್ಸ್​ಟೇಬಲ್ ಮಯೂರ ನಿವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ; 1 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.