ETV Bharat / state

ತೆಲಂಗಾಣದಲ್ಲಿ ಬಿಆರ್​ಎಸ್​ ಭ್ರಷ್ಟಾಚಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ: ಪ್ರಿಯಾಂಕ್ ಖರ್ಗೆ

author img

By ETV Bharat Karnataka Team

Published : Dec 3, 2023, 10:56 PM IST

Etv Bharatminister-priyank-kharge-reaction-on-4-states-assembly-election-result
ತೆಲಂಗಾಣದಲ್ಲಿ ಬಿಆರ್​ಎಸ್​ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ: ಪ್ರಿಯಾಂಕ್ ಖರ್ಗೆ

ಕರ್ನಾಟಕದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ತೆಲಂಗಾಣದಲ್ಲಿ ಪ್ರಭಾವ ಬೀರಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ತೆಲಂಗಾಣದಲ್ಲಿ ಬಿಆರ್​ಎಸ್​ ಭ್ರಷ್ಟಾಚಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ತೆಲಂಗಾಣದಲ್ಲಿ ಬಿಎಸ್​ಆರ್​ ಸರ್ಕಾರ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತ‌ನಾಡಿದ ಅವರು, "ನಾನು ಖುದ್ದಾಗಿ ತೆಲಂಗಾಣಕ್ಕೆ ಭೇಟಿ ನೀಡಿದ್ದೇನೆ. 10 ವರ್ಷದ ಕೆಸಿಆರ್ ಆಡಳಿತದಲ್ಲಿ 10 ಸ್ಕ್ಯಾಮ್ ಗಳಲ್ಲಿ 10 ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿದೆ. ಕಾಳೇಶ್ವರಂ ನೀರಾವರಿ ಯೋಜನೆಯೊಂದರಲ್ಲೇ 1.50 ಲಕ್ಷ ಕೋಟಿ ಅವ್ಯವಹಾರ ಆಗಿರುವ ಬಗ್ಗೆ ಅಲ್ಲಿನ ಜನರೇ ಮಾತ‌ನಾಡಿಕೊಳ್ಳುತ್ತಿದ್ದರು. ಇದನ್ನು ಮನಗಂಡ ಜನರು ತೆಲಂಗಾಣ ಉಳಿಯಬೇಕಾದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ನಮಗೆ ಆಶೀರ್ವಾದ ಮಾಡಿದ್ದಾರೆ " ಎಂದರು.

"ಕರ್ನಾಟಕದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಕೂಡಾ ತೆಲಂಗಾಣದಲ್ಲಿ ಪ್ರಭಾವ ಬೀರಿವೆ. ಜನರ ಪರವಾದ, ಅಭಿವೃದ್ಧಿ ಪರವಾದ ಹಾಗೂ ಆರ್ಥಿಕ ಸ್ಥಿರತೆ ನಿರ್ಮಾಣ ಮಾಡುವ ಯೋಜನೆಗಳನ್ನು ಇಟ್ಟುಕೊಂಡೇ ನಾವು ಛತ್ತೀಸ್​ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಪ್ರಣಾಳಿಕೆ ತಯಾರು ಮಾಡಿದ್ದೆವು. ಬಿಜೆಪಿ ಪ್ರಣಾಳಿಕೆಯಲ್ಲಿ ಜನಪರ ಹಾಗೂ ಆರ್ಥಿಕ‌ ಸಬಲತೆ ಮೂಡಿಸುವ ಕಾರ್ಯಕ್ರಮಗಳು ಇಲ್ಲ" ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಪಕ್ಷ ಹಿನ್ನೆಡೆ ಅನುಭವಿಸಿದ ಬಗ್ಗೆ ಮಾತನಾಡಿ, "ನಾಲ್ಕು ರಾಜ್ಯಗಳ ಈ ಚುನಾವಣಾ ಫಲಿತಾಂಶ ಲೋಕಸಭೆಯ ಚುನಾವಣೆಯ ಮೇಲೆ ಪರಿಣಾಮ ಬೀರದು. ಲೋಕಸಭೆ ಚುನಾವಣೆಯಲ್ಲಿಯೂ ಕೂಡಾ ಆರ್ಥಿಕ‌ ಸ್ಥಿರತೆ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು‌ ಚುನಾವಣೆ ಎದುರಿಸುತ್ತೇವೆ" ಎಂದರು.

ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳಷ್ಟೇ ಪಕ್ಷಕ್ಕೆ ಗೆಲುವು ತಂದು ಕೊಟ್ಟಿಲ್ಲ - ಲಕ್ಷ್ಮೀ ಹೆಬ್ಬಾಳ್ಕರ್: ಮತ್ತೊಂದೆಡೆ, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ತೆಲಂಗಾಣದಲ್ಲಿನ ಚುನಾವಣಾ ಪ್ರಚಾರದ ವೇಳೆ ಅಲ್ಲಿನ ಜನರು ಕಾಂಗ್ರೆಸ್ ಬಗ್ಗೆ ವಿಶೇಷ ಒಲವು ಹೊಂದಿದ್ದು ಎದ್ದು ಕಾಣುತ್ತಿತ್ತು. ಆ ಒಲವು ಇಂದು ನಮ್ಮ ಪಕ್ಷದ ಗೆಲುವಾಗಿದೆ. ಕಳೆದ 10 ವರ್ಷಗಳಿಂದ ಬಿಆರ್​ಎಸ್ ಆಡಳಿತದಿಂದ ರೋಸಿಹೋಗಿದ್ದ ಜನರು ಕಾಂಗ್ರೆಸ್ಸಿಗೆ ಗೆಲುವು ತರಲು ಕಾರಣಕರ್ತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳಷ್ಟೇ ಪಕ್ಷಕ್ಕೆ ಗೆಲುವು ತಂದು ಕೊಟ್ಟಿಲ್ಲ, ಕಳೆದ ಹತ್ತು ವರ್ಷಗಳಿಂದ ತೆಲಂಗಾಣ ರಾಜ್ಯದಲ್ಲಿ ಏನು ಆಗಿದೆ ಎಂದು ನೋಡಿದ್ದೇವೆ. ಹಾಲಿ ಮುಖ್ಯಮಂತ್ರಿ ಕೆಸಿಆರ್ ಜನಸ್ನೇಹಿ ಸರ್ಕಾರ ಆಗಲಿರಲಿಲ್ಲ. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಅಭೂತಪೂರ್ವ ಗೆಲುವು ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮತದಾರರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು : ಸಚಿವ ಎಂ ಬಿ ಪಾಟೀಲ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.