ETV Bharat / state

ಎಸ್ಸಿ-ಎಸ್ಟಿ ಮೀಸಲು ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ: ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪ

author img

By ETV Bharat Karnataka Team

Published : Sep 19, 2023, 7:10 AM IST

ಕೋಟಾ ಶ್ರೀನಿವಾಸ ಪೂಜಾರಿ
ಕೋಟಾ ಶ್ರೀನಿವಾಸ ಪೂಜಾರಿ

ರಾಜ್ಯ ಸರ್ಕಾರ ಒಂದೆಡೆ ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆ ಮಾಡಿದೆ ಮತ್ತೊಂದೆಡೆ, ಉಚಿತ ಭಾಗ್ಯಗಳನ್ನು ನೀಡುತ್ತಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕೋಟಾ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಕಲಬುರಗಿ: ಒಂದು ಕಡೆ ಕೆತ್ತೋದು ಮತ್ತೊಂದೆಡೆ ಮೆತ್ತೋದು ಮಾಡಿದ್ರೆ ಅರ್ಥವಿಲ್ಲ. ದಿನೋಪಯೋಗಿ ವಸ್ತುಗಳ ಬೆಲೆ ಏರಿಸಿ ಉಚಿತ ಕೊಡ್ತೀವಿ ಅಂದ್ರೆ ರಾಜಕೀಯ ಬುದ್ಧಿವಂತರು ಅನ್ನೋಲ್ಲ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾಪೂರ್ವ ಘೋಷಣೆ ಮಾಡಿದ ಭರವಸೆ ಈಡೇರಿಸಲು ಬೆಲೆ ಏರಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿದ್ದ ಅನುದಾನವನ್ನು ಗ್ಯಾರಂಟಿಗಳಿಗೆ ಉಪಯೋಗಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳು ಎಸ್ಸಿ-ಎಸ್ಟಿಗೆ ಮೀಸಲಿಟ್ಟ 34 ಸಾವಿರ ಕೋಟಿ ರೂಪಾಯಿಯಲ್ಲಿ 11 ಸಾವಿರ 150 ಕೋಟಿ ರೂ ಅನುದಾನ ಗ್ಯಾರಂಟಿಗಳಿಗೆ ಬಳಕೆ ಮಾಡಲಾಗಿದೆ ಎಂದರು.

ಸಾಮಾಜಿಕ ನ್ಯಾಯ, ಎಸ್ಸಿ-ಎಸ್ಟಿ ಹಿತಾಸಕ್ತಿ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡಬೇಕು. ಮೀಸಲಾತಿ ಹಣ ಬಳಕೆ ಮಾಡಿದ್ದನ್ನು ಖಜಾನೆಯಿಂದ ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದರು. ಗ್ಯಾರಂಟಿ ಯೋಜನೆಗಳು ಹೆಚ್ಚು ದಿನ ಮುಂದುವರೆಯಲ್ಲ. ಲೋಕಸಭೆ ಚುನಾವಣೆವರೆಗಾದ್ರೂ ಗ್ಯಾರಂಟಿಗಳು ಇರುತ್ತವೆ ಎಂಬ ಭರವಸೆಯೂ ಇಲ್ಲ ಎಂದು ಹೇಳಿದರು.

ಚೈತ್ರಾ ಕುಂದಾಪುರ ಪ್ರಕರಣ: ಮೋಸಕ್ಕೊಳಗಾಗುವವರು ಇರುವತನಕ ಮೋಸ ಮಾಡೋರು ಇದ್ದೇ ಇರ್ತಾರೆ. ಮೋಸ ಹೋಗದಂತೆ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು. ಇನ್ನು, ಚೈತ್ರಾ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಭಾರತೀಯ ಜನತಾ ಪಕ್ಷ ಹಣಕ್ಕಾಗಿ ಟಿಕೆಟ್ ನೀಡುವ ಪಕ್ಷವಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಕೂಲಿ ಮಾಡ್ತಿದ್ದ ನನ್ನನ್ನು ಗುರುತಿಸಿ ಟಿಕೆಟ್ ಕೊಟ್ಟು ಗೆಲ್ಲಿಸಿ 4 ಸಲ ಕ್ಯಾಬಿನೆಟ್ ಸಚಿವನನ್ನಾಗಿ ಮಾಡಿದ್ದಾರೆ. ಪ್ರಕರಣದ ಸೂಕ್ತ ತನಿಖೆ ಆಗಲಿ, ಯಾರೇ ಹಣ ತೆಗೆದುಕೊಂಡರೂ ತನಿಖೆಯಿಂದ ಪತ್ತೆ ಮಾಡಿ ಅವರ ವಿರುದ್ದ ಕಾನೂನಿನ ಪ್ರಕಾರ ಕ್ರಮವಾಗಲಿ ಎಂದು ಹೇಳಿದರು.

ಬರ ವಿಚಾರ: ರಾಜ್ಯದಲ್ಲಿ 195 ತಾಲೂಕು ಬರಪೀಡಿತ ಎಂದು ರಾಜ್ಯ ಸರ್ಕಾರ ಸಮೀಕ್ಷೆ ಮಾಡಿದೆ. ಡಿಸೆಂಬರ್​ನಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಎದುರಾಗಲಿದೆ. ಜಾನುವಾರುಗಳಿಗೆ ಮೇವು ಕೊರತೆ ಆಗಲಿದೆ. ಗೋಶಾಲೆಗಳನ್ನು ತೆರೆಯುವ ಅವಶ್ಯಕತೆಯಿದೆ. ಆದರೆ ಸಿಎಂ ಮತ್ತು ಕಂದಾಯ ಸಚಿವರು, ಬರ ಬರಲು ಕೇಂದ್ರ ಸರ್ಕಾರ ಕಾರಣ ಎಂಬ ಮನಸ್ಥಿತಿಯಲ್ಲಿದ್ದಾರೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ್ದಲ್ಲಿ ಕರ್ನಾಟಕದ ಜನ ಬದುಕು ಕಟ್ಟಿಕೊಳ್ಳಿ ಎಂಬ ಮನಸ್ಥಿತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಹಿಂದಿನ ನಮ್ಮ ಯಡಿಯೂರಪ್ಪ ಸರ್ಕಾರದಲ್ಲಿ ಒಂದು ಮನೆ ಕುಸಿದರೆ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದರು ಎಂದರು.

ರಾಜ್ಯದ ರೈತರು ಅತಂಕಪಡುವ ಅಗತ್ಯವಿಲ್ಲ ಅನ್ನೋದು ಮುಖ್ಯಮಂತ್ರಿ ರೈತರಿಗೆ ಮನವರಿಕೆ ಮಾಡಬೇಕು. ಅದು ಬಿಟ್ಟು ಕೇಂದ್ರ ಸರ್ಕಾರ ಕಡೆ ಬೊಟ್ಟು ಮಾಡಿ ತೋರಿಸ್ತಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದ ಮೇಲೆ ಜನ ಇಟ್ಟ ನಂಬಿಕೆ ಹುಸಿ ಆಗ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ತಾಕತ್ತಿದ್ದರೆ ಮೂವರು ಡಿಸಿಎಂಗಳನ್ನು ಮಾಡಲಿ: ಎನ್​ ರವಿಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.