ETV Bharat / state

ಐಟಿಎಫ್​ ಕಲಬುರಗಿ ಓಪನ್‍ ಟೆನ್ನಿಸ್:​ ವ್ಲಾಡಿಸ್ಲಾವ್ ಮಣಿಸಿದ ಮನೀಶ್​ ಸುರೇಶ್​ ಕುಮಾರ್

author img

By ETV Bharat Karnataka Team

Published : Nov 30, 2023, 9:19 AM IST

Manish Suresh Kumar
ಮನೀಶ್​ ಸುರೇಶ್​ ಕುಮಾರ್

ITF Kalaburagi men's open tennis: ಅಂತರರಾಷ್ಟ್ರೀಯ ಟೆನ್ನಿಸ್​ ಫೆಡರೇಶನ್​ ವತಿಯಿಂದ ಕಲಬುರಗಿಯಲ್ಲಿ ಪುರುಷರ ಓಪನ್ ಟೆನ್ನಿಸ್​ ಪಂದ್ಯಾವಳಿ ನಡೆಯುತ್ತಿದೆ. ಬುಧವಾರದ ಫಲಿತಾಂಶ ಇಲ್ಲಿದೆ.

ಕಲಬುರಗಿ: ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಮಂಗಳವಾರದಿಂದ ಐಟಿಎಫ್‌ ಪುರುಷರ ಓಪನ್ ಟೆನ್ನಿಸ್​ ಟೂರ್ನಿ ನಡೆಯುತ್ತಿದೆ. ನಿನ್ನೆ (ಬುಧವಾರ) ನಡೆದ ಮೊದಲ ಸುತ್ತಿನ ಮುಖ್ಯ ಪಂದ್ಯದಲ್ಲಿ ಮನೀಶ್​ ಸುರೇಶ್​ ಕುಮಾರ್ ಅವರು ಅಗ್ರ ಶ್ರೇಯಾಂಕದ ವ್ಲಾಡಿಸ್ಲಾವ್ ಓರ್ಲೋವ್ ಅವರನ್ನು ಸೋಲಿಸಿದರು.

24 ವರ್ಷದ ಮನೀಶ್​ ಸುರೇಶ್​ ಕುಮಾರ್ ಉತ್ತಮ ಹೊಡೆತಗಳಿಂದ ಮೊದಲ ಸೆಟ್​ ಅನ್ನು 6-3ರಿಂದ ಗೆದ್ದರು. ಎರಡನೇ ಸೆಟ್‍ನಲ್ಲಿ 2-0 ಮುನ್ನಡೆ ಸಾಧಿಸಿದಾಗ ಉಕ್ರೇನಿಯನ್​ ಪ್ರತಿಸ್ಪರ್ಧಿ ಭುಜದ ಗಾಯದಿಂದ ಪಂದ್ಯ ತೊರೆದರು. ಬಳಿಕ ನಡೆದ ಕ್ವಾಲಿಫೈಯರ್‌ನಲ್ಲಿ​ ರಿಷಿ ರೆಡ್ಡಿ ಅವರು ಕೊನೆಯ 16 ಹಂತ ಪ್ರವೇಶಿಸಿದ ಕರ್ನಾಟಕದ ಎರಡನೇ ಆಟಗಾರರಾದರಲ್ಲದೆ, ಪಾರ್ಥ್ ಅಗರ್ವಾಲ್ ವಿರುದ್ಧ 6-4, 7-5 ಅಂತರದಿಂದ ಗೆಲುವು ಸಾಧಿಸಿದರು.

Men's Open Tennis Tournament
ಪುರುಷರ ಓಪನ್ ಟೆನ್ನಿಸ್​ ಪಂದ್ಯಾವಳಿ

ಇನ್ನು, ಶ್ರೇಯಾಂಕಿತ ಆಟಗಾರರು ಫ್ರೀ ಕ್ವಾರ್ಟರ್ ಫೈನಲ್‍ಗೆ ಸಾಗಿದರು. ನಾಲ್ಕನೇ ಶ್ರೇಯಾಂಕದ ಭಾರತೀಯ ಆಟಗಾರ ಸಿದ್ಧಾರ್ಥ್ ರಾವತ್ ಅವರು ಜಪಾನಿನ ತೈಸಿ ಇಚಿಕಾವಾರನ್ನು 6-3, 6-4 ಸೆಟ್‍ಗಳಿಂದ ಸೋಲಿಸಿದರೆ, 5ನೇ ಶ್ರೇಯಾಂಕದ ರಾಮ್‍ಕುಮಾರ್ ರಾಮನಾಥನ್ ಅವರು ಕ್ವಾಲಿಫೈಯರ್ ಅಜಯ್ ಮಲಿಕ್ ಅವರನ್ನು 40 ನಿಮಿಷಗಳಲ್ಲಿ 6-0, 6-0 ಅಂತರದಿಂದ ಪರಾಭವಗೊಳಿಸಿದರು.

ಆರನೇ ಶ್ರೇಯಾಂಕದ ರಿಷಬ್​ ಅಗರ್ವಾಲ್​ ಅವರು ವೈಲ್ಡ್​​ ಕಾರ್ಡ್​ ಮೂಲಕ ಪ್ರವೇಶ ಪಡೆದ ಜಗ್ಮೀತ್​ ಸಿಂಗ್​ ಅವರ ತೀವ್ರ ಪ್ರತಿರೋಧದ ನಡುವೆಯೂ 6-4, 3-6, 6-4 ರಿಂದ ಜಯ ಸಾಧಿಸಿ ಮುನ್ನಡೆ ಪಡೆದರು. ಡಬಲ್ಸ್ ಸ್ಪರ್ಧೆಯಲ್ಲಿ ಅಗ್ರ ಶ್ರೇಯಾಂಕದ ಜೋಡಿಯಾದ ಪುರವ್ ರಾಜಾ ಮತ್ತು ರಾಮ್‍ಕುಮಾರ್ ರಾಮನಾಥನ್ ವಿರುದ್ಧ ಸಾಯಿ ಕಾರ್ತಿಕ್ ರೆಡ್ಡಿ ಗಂಟಾ ಮತ್ತು ಕಬೀರ್ ಹನ್ಸ್ ಜೋಡಿ 7-5, 6-3 ನೇರ ಸೆಟ್‍ಗಳಿಂದ ಗೆದ್ದು ಕ್ವಾರ್ಟರ್ ಫೈನಲ್‍ಗೆ ಪ್ರವೇಶಿಸಿದರು.

ಮನೀಶ್ ಮತ್ತು ಓರ್ಲೋವ್ ಪರಸ್ಪರ ಐದನೇ ಬಾರಿ ಮುಖಾಮುಖಿಯಾಗಿದ್ದು, ತಲಾ ಎರಡು ಬಾರಿ ಗೆದ್ದಿದ್ದಾರೆ. ಚೆನ್ನೈನ ಹುಡುಗ 2ನೇ ಮತ್ತು 4ನೇ ಎರಡು ಬ್ರೇಕ್‍ಗಳಲ್ಲಿ 4-0 ಮುನ್ನಡೆ ಸಾಧಿಸಿದರು.

ಐಟಿಎಫ್ ಶ್ರೇಯಾಂಕದಲ್ಲಿ 45ನೇ ಸ್ಥಾನದಲ್ಲಿರುವ ಓರ್ಲೋವ್ ಅವರು ಐದನೇ ಗೇಮ್‍ನಲ್ಲಿ ಮನೀಶ್​ ಅವರ ಸರ್ವ್ ಬ್ರೇಕ್​ ಮಾಡುವ ಮೂಲಕ ಚೇತರಿಕೆಯ ಲಕ್ಷಣಗಳನ್ನು ತೋರಿದರು. ಇಬ್ಬರೂ ಆಟಗಾರರಿಂದ ಕೆಲವು ಅತ್ಯುತ್ತಮ ಹೊಡೆತಗಳು ಬಂದವು. ವಿಶೇಷವಾಗಿ ಮನೀಶ್ ಅವರು ಅನೇಕ ಸಂದರ್ಭಗಳಲ್ಲಿ ನೆಟ್‍ನ ಮೇಲೆ ದಾಳಿ ಮಾಡುವ ಎದುರಾಳಿಯ ಪ್ರಯತ್ನವನ್ನು ವಿಫಲಗೊಳಿಸಿದರು. ಅಂತಿಮವಾಗಿ ಓರ್ಲೋವ್ ಮೊದಲ ಸೆಟ್​ ಅನ್ನು 3-6 ಅಂತರದಿಂದ ಕಳೆದುಕೊಂಡರು.

Men's Open Tennis Tournament
ಪುರುಷರ ಓಪನ್ ಟೆನ್ನಿಸ್​ ಪಂದ್ಯಾವಳಿ

ಎರಡನೇ ಸೆಟ್‍ನಲ್ಲಿ, ಭಾರತೀಯ ಆಟಗಾರ ತನ್ನ ಮೊದಲ ಗೇಮ್‍ನಲ್ಲಿ ತನ್ನ ಎದುರಾಳಿಯ ಸರ್ವ್ ಬ್ರೆಕ್ ಮಾಡಿದ್ದಲ್ಲದೆ, 2-0 ರಿಂದ ಮುನ್ನಡೆ ಸಾಧಿಸಿದಾಗ ಓರ್ಲೋವ್ ಪಂದ್ಯ ತೊರೆದರು. "ಇದು ಅಗ್ರ ಶ್ರೇಯಾಂಕಿತರನ್ನು ಸೋಲಿಸುವ ಉತ್ತಮ ಆರಂಭ. ನಾವು ಮೊದಲು ಆಡಿದಂತೆ ಅವರ ಆಟ ನನಗೆ ತಿಳಿದಿತ್ತು. ಮೊದಲ ಕೆಲವು ಪಂದ್ಯಗಳಲ್ಲಿ ಆತ್ಮವಿಶ್ವಾಸ ಬೆಳೆಸಿಕೊಂಡೆ. ಚೆಂಡನ್ನು ಅಂಕಣದಲ್ಲಿ ಇಡುವುದು ನನ್ನ ಗುರಿಯಾಗಿತ್ತು ಮತ್ತು ನಾನು ಅದನ್ನು ನಿಭಾಯಿಸಿದೆ" ಎಂದು ಮನೀಶ್​ ಹೇಳಿದರು.

ಪುರುಷರ ಸಿಂಗಲ್ಸ್​​ (32ರ ಸುತ್ತು) ಫಲಿತಾಂಶಗಳು: 7-ಡೇವಿಡ್ ಪಿಚ್ಲರ್ (ಆಸ್ಟ್ರೀಯನ್) ಅವರು ಅರ್ಜುನ್ ಮಹಾದೇವನ್ ಅವರನ್ನು 6-0,6-3 ರಿಂದ, ರಾಮ್‍ಕುಮಾರ್ ರಾಮನಾಥನ್ ಅವರು ಅಜಯ್ ಮಲಿಕ್ ಅವರನ್ನು 6-0, 6-0ರಿಂದ, ರಿಷಿ ರೆಡ್ಡಿ ಅವರು ಪಾರ್ಥ್ ಅಗರ್ವಾಲ್ ಅವರನ್ನು 6-4, 7-5ರಿಂದ, ಮನೀಶ್ ಸುರೇಶ್‍ಕುಮಾರ್ ಅವರು 1-ವ್ಲಾಡಿಸ್ಲಾವ್ ಓರ್ಲೋವ್ (ಯುಕ್ರೇನ್) ಅವರನ್ನು 6-3, 2-0 (ನಿವೃತ್ತ)ರಿಂದ, ಭರತ್ ನಿಶೋಕ್ ಕುಮಾರನ್ ಅವರು ನಿತಿನ್ ಕುಮಾರ್ ಸಿನ್ಹಾ ಅವರನ್ನು 6-4, 6-4ರಿಂದ, ಸೀತಾ ವಟನಬೆ (ಜಪಾನ್) ಅವರು ಧ್ರುವ್ ಹಿರ್ಪಾರಾ ಅವರನ್ನು 6-2,2-0 (ನಿವೃತ್ತ)ರಿಂದ, ಹ್ಯಾರಿಸನ್ ಆಡಮ್ಸ್ (ಯು.ಎಸ್.ಎ) ಅವರು ದೇವ್ ಜಾವಿಯಾ ಅವರನ್ನು 7-5, 6-1ರಿಂದ, ರಿಷಬ್ ಅಗರ್ವಾಲ್ ಅವರು ಜಗ್ಮೀತ್ ಸಿಂಗ್ ಅವರನ್ನು 6-4, 3-6, 6-4ರಿಂದ, ಸಿದ್ಧಾರ್ಥ್ ರಾವತ್ ಅವರು ತೈಸಿ ಇಚಿಕಾವಾ (ಜಪಾನ್) ಅವರನ್ನು 6-3, 6-4 ಅಂತರದಿಂದ ಜಯಗಳಿಸಿದರು.

ಡಬಲ್ಸ್ (16ರ ಸುತ್ತು) ಫಲಿತಾಂಶಗಳು: ಸಾಯಿ ಕಾರ್ತಿಕ್​ ರೆಡ್ಡಿ ಗಂಟಾ ಮತ್ತು ಕಬೀರ್​ ಹನ್ಸ್​​ ಅವರು ಪುರವ್ ರಾಜಾ ಮತ್ತು ರಾಮ್‍ಕುಮಾರ್ ರಾಮನಾಥನ್ ಜೋಡಿಯನ್ನು 7-5, 6-3ರಿಂದ, ರ್ಯೂಕಿ ಮತ್ಸುದಾ (ಜಪಾನ್) ಮತ್ತು ರಿಯೊಟಾರೊ ತಗುಚಿ (ಜಪಾನ್) ಅವರು ಭಾರತದ ಸಿದ್ಧಾಂತ್ ಬಂಥಿಯಾ ಮತ್ತು ಮನೀಶ್​ ಸುರೇಶ್‍ಕುಮಾರ್ ಅರವನ್ನು 6-4, 6-2 ಅಂತರದಿಂದ ಸೋಲಿಸಿದರು.

Men's Open Tennis Tournament
ಪುರುಷರ ಓಪನ್ ಟೆನ್ನಿಸ್​ ಪಂದ್ಯಾವಳಿ

ಇದನ್ನೂ ಓದಿ: 150 ರನ್, 5 ವಿಕೆಟ್ ಗೊಂಚಲು: ಲಿಸ್ಟ್​ ಎ ಕ್ರಿಕೆಟ್​ನಲ್ಲಿ ದಾಖಲೆ ಬರೆದ ಛತ್ತೀಸ್​ಗಢದ ಶಶಾಂಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.