ETV Bharat / state

ಬಿಜೆಪಿ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯನ್ನ ಬಲಹೀನಗೊಳಿಸುತ್ತಿದೆ : ಪ್ರಿಯಾಂಕ್ ಖರ್ಗೆ

author img

By

Published : Dec 7, 2021, 9:34 PM IST

ಗ್ರಾ.ಪಂ. ಗಳಿಗೆ ಅನುದಾನವನ್ನೇ ನೀಡುತ್ತಿಲ್ಲ. ಹಾಗಾಗಿ ನೌಕರರ‌ ಸಂಬಳಕ್ಕೆ ಸಂಚಕಾರ ಬಿದ್ದಿದೆ. ಈ ಹಿಂದೆ ಪ್ರತಿ ಗ್ರಾಮ ಪಂಚಾಯತಗಳಿಗೆ ರೂ‌. 2 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಈವರೆಗೆ ಆ ಅನುದಾನ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಮಾಡಿದ ಮೇಲೆ ಸ್ವರಾಜ್ ಹೆಸರಲ್ಲಿ ಬಿಜೆಪಿ ಕಾರ್ಯಕ್ರಮ ನಡೆಸಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಕಲಬುರಗಿ : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಂಚಾಯತ್​ ರಾಜ್ ವ್ಯವಸ್ಥೆಯನ್ನು ಬಲಹೀನಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್​ ಹಾಗೂ ತಾಲೂಕು ಪಂಚಾಯತ್​ಗಳಿಗೆ ಚುನಾವಣೆ ನಡೆಸದೆ ಮುಂದೂಡುವ ಮೂಲಕ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಸರ್ಕಾರವೇ ಖುದ್ದು ತೊಡರಗಾಲು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯ ವಾಣಿಜ್ಯ ಆಯೋಗದ ಶಿಫಾರಸು ಸೇರಿಸಿ ಶೇ.25 ಅನ್​​ ಟೈಡ್ ಫಂಡ್ ನ್ನು ನಿಗದಿ ಪಡಿಸಲಾಗಿತ್ತು. ಗ್ರಾಮ ಪಂಚಾಯತ್​ನಲ್ಲಿ ಭ್ರಷ್ಟಾಚಾರ ತಲೆ ಎತ್ತಬಾರದು ಹಾಗೂ ಉತ್ತಮ ಆಡಳಿತ ಒದಗಿಸುವ ಉದ್ದೇಶದಿಂದ ಗ್ರಾಮ ಪಂಚಾಯತ್​ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿಯನ್ನು 30 ತಿಂಗಳಿಗೆ ನಿಗದಿ ಮಾಡಲಾಗಿತ್ತು. ಜೊತೆಗೆ ಸದಸ್ಯರ ಭ್ರಷ್ಟಾಚಾರದಲ್ಲಿ ತೊಡಗಿದ್ದು ದಾಖಲೆ ಸಮೇತ ಸಾಬೀತಾದರೆ ಅವರ ಸದಸ್ಯತ್ವ ರದ್ದು ಮಾಡಲು ಅವಕಾಶ ಇತ್ತು. ಆದರೆ ಬಿಜೆಪಿ ಸರ್ಕಾರ ಪಂಚಾಯತ ರಾಜ್ ವಿಧೇಯಕ ಪಾಸ್ ಮಾಡುವ ಮೂಲಕ ಈ ಹಿಂದಿನ ಕಾಯ್ದೆಯನ್ನು ಜಾರಿಗೊಳಿಸಲು ಬಿಲ್ ಪಾಸ್ ಮಾಡಿದೆ. ಕನಿಷ್ಠ ಒಂದೂವರೆ ವರ್ಷ ಆದರೂ ಕೂಡಾ ತಾ.ಪಂ, ಜಿ.ಪಂ ಚುನಾವಣೆ ಯಾಕೆ ನಡೆಸಿಲ್ಲ.? ಸಂವಿಧಾನದಲ್ಲಿ ಹೇಳಿದಂತೆ ಆರ್ಟಿಕಲ್ 243 (E) ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕು. ಆದರೆ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಜೊತೆಗೆ ಮೀಸಲಾತಿ ಪ್ರಕಟವಾದ ಮೇಲೆ ಕ್ಷೇತ್ರಗಳಿಗ ಪುನರ್ವಿಂಗಡಣೆಗಾಗಿ ಆಯೋಗವನ್ನು ಸ್ಥಾಪಿಸಲಾಗಿದೆ ಎಂದರು.

ಬಿಜೆಪಿ ಸರ್ಕಾರಕ್ಕೆ ಸಂವಿಧಾನದಲ್ಲಿ ನಂಬಿಕೆ ಇಲ್ಲ :

ಅವರು ನೈಸರ್ಗಿಕ ವಿಕೋಪ ಅಥವಾ ಯುದ್ಧದಂತ ಪ್ರಮುಖ ಕಾರಣಗಳಿಲ್ಲದೇ ತಾ.ಪಂ‌, ಜಿ.ಪಂ. ಗಳಿಗೆ ಚುನಾವಣೆ ಸರ್ಕಾರ ನಡೆಸಲು ಹಿಂದೇಟು ಹಾಕುತ್ತಿದೆ. ಕೊರೊನಾ ಸಂದರ್ಭಲ್ಲಿ ಪ.ಬಂಗಾಳ, ಮಧ್ಯ ಪ್ರದೇಶದಲ್ಲಿ ಚುನಾವಣೆ ಈಗಲೂ ಇಲ್ಲಿಯೂ ಚುನಾವಣೆ ನಡೆಯುತ್ತಿದೆ‌. ಆದರೆ, ತಾ.ಪಂ, ಜಿ.ಪಂ. ಚುನಾವಣೆ ನಡೆಸಲು ಭಯ ಏಕೆ? ಈ ಮುಂಚೆ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲಾಗಿತ್ತು.

ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಮೀಸಲಾತಿ ಪ್ರಕಟಣೆ ಹೊರ ಬಂದ ಮೇಲೆ ಪುನರ್ ವಿಂಗಡನೆ ಮಾಡಲು ಆಯೋಗವನ್ನು ರಚಿಸಿದ್ದಾರೆ. ಬಿಲ್ ನಲ್ಲಿ ಪ್ರಸ್ತಾಪಿಸಿರುವಂತೆ ಚುನಾವಣೆ ಆಯೋಗದ ಮೇಲೆ ಆರೋಪ ಮಾಡಲಾಗಿದೆ. ಮೀಸಲಾತಿಯನ್ನು ನಿಯಮ ಮೀರಿ ಕೊಡಲಾಗಿದೆ ಎಂದು ಬಿಲ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ತಾ.ಪಂ, ಜಿ.ಪಂ. ಗಳಿಗೆ ಚುನಾವಣೆ ನಡೆಸಲು ಸರ್ಕಾರಕ್ಕೆ ಮನಸಿಲ್ಲ. ಈ ಹಿಂದೆ ಚುನಾವಣೆ ನಡೆದಾಗೆಲ್ಲ ಬಿಜೆಪಿಗೆ ನಿರೀಕ್ಷಿತ ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿಲ್ಲ. ಈಗಲೂ ಅದೇ ಸ್ಥಿತಿ ಇರುವುದರಿಂದ ಚುನಾವಣೆ ನಡೆಸುತ್ತಿಲ್ಲ ಎಂದು ಖರ್ಗೆ ಸಂಶಯ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತದಲ್ಲಿ ಕ್ರಿಯಾಯೋಜನೆ ಮಾಡಲು ಅನುದಾನವಿಲ್ಲ. 15 ನೇ ಹಣಕಾಸು ಆಯೋಗದ ಲಾಭ ಮೋದಿಯವರಿಗೆ ಹೋಗುತ್ತಿದೆ. ಕೇಂದ್ರದ ಯೋಜನೆಗಳಿಗೆ ಗ್ರಾಮ ಪಂಚಾಯತ ಹಣ ಬಸಲಾಗುತ್ತಿದೆ. ಜಲ ಜೀವನ ಮಿಷನ್ ಸೇರಿದಂತೆ (25%) ಬಹುತೇಕ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಗ್ರಾಮ ಪಂಚಾಯತ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಗ್ರಾಪಂ ಗಳಿಗೆ ಅನುದಾನವೇ ನೀಡುತ್ತಿಲ್ಲ ಹಾಗಾಗಿ ನೌಕರರ‌ ಸಂಬಳಕ್ಕೆ ಸಂಚಕಾರ ಬಿದ್ದಿದೆ. ಈ ಹಿಂದೆ ಪ್ರತಿ ಗ್ರಾಮ ಪಂಚಾತಗಳಿಗೆ ರೂ‌ 2 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇದೂವರೆಗೆ ಆ ಅನುದಾನ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಮಾಡಿದ ಮೇಲೆ ಸ್ವರಾಜ್ ಹೆಸರಲ್ಲಿ ಬಿಜೆಪಿ ಕಾರ್ಯಕ್ರಮ ನಡೆಸಿದೆ ಎಂದು ವ್ಯಂಗ್ಯವಾಡಿದರು.

1.11ಲಕ್ಷ ಕೋಟಿ ಅನುದಾನವನ್ನ ನರೇಗಾ ಯೋಜನೆಗಳಿಗೆ ಮೀಸಲಿಡಲಾಗಿತ್ತು. ಆದರೆ ಈ ಸಲ ಕೇವಲ 73 ಸಾವಿರ ಕೋಟಿ ಮಾತ್ರ ಮೀಸಲಿಡಲಾಗಿದೆ. ವಸತಿ ಯೋಜನೆಗಳಿಗೆ ಹೊಸ ಮನೆಗಳು ಮಂಜೂರಾಗಿಲ್ಲ. ಈ ಹಿಂದೆ ನಾವು ಅಧಿಕಾರದಲ್ಲಿರುವಾಗ ಮಂಜೂರು ಮಾಡಿದ ಯೋಜನೆಗಳಿಗೆ ಈ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದರು.

ಕೇರಳ ಮಾದರಿಯಲ್ಲಿ ಅಧ್ಯಕ್ಷರಿಗೆ ಕಾರ್ ಕೊಡುತ್ತೇವೆ ಎಂದಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ದುಡ್ಡು ಕೊಟ್ಟರೆ ಸಾಕು ನಡೆದುಕೊಂಡೆ ಹೋಗಿ ಕೆಲಸ ಮಾಡುತ್ತಾರೆ. ನಗರಸಭೆಗೆ ಅನುದಾನವಿಲ್ಲ.ಕಲಬುರಗಿ ಯನ್ನು ಸ್ಮಾರ್ಟ್ ಸಿಟಿ ಮಾಡುವುದಾಗಿ ಹೇಳಿದ್ದರು ಎಲ್ಲಿ ಹೋಯ್ತು ಸ್ಮಾರ್ಟ್ ಸಿಟಿ ಯೋಜನೆ? ಇದು ಸ್ಥಳೀಯ ಸಂಸ್ಥೆಗೆ ಬಿಜೆಪಿ ತೋರಿಸುವ ಬದ್ದತೆ ಎಂದರು.

ಬಿಜೆಪಿಯವರಿಗೆ ಚುನಾವಣೆ ಇದ್ದಾಗ ಮಾತ್ರ ಇಂತವೆಲ್ಲ ನೆನಪಿಗೆ ಬರ್ತಿವೆ. ಜಿಲ್ಲಾ ಉಸ್ತುವಾರಿಯನ್ನ ನೇಮಕ ಮಾಡದ ಸರ್ಕಾರ ಈ ಭಾಗದ ಅಭಿವೃದ್ಧಿ ಹೇಗೆ ತಾನೆ ಮಾಡುತ್ತಾರೆ. ಆರ್ಥಿಕ‌ ಸಬಲೀಕರಣದ ಯೋಜನೆಗಳನ್ನು ಬಿಜೆಪಿಯವರು ಮಾಡಿಲ್ಲ. ಇದು ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮುಗಿಸುವ ಸಂಚಾಗಿದೆ ಎಂದು ದೂರಿದ ಅವರು, ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಹೇಳಿದರು.

ಬಿ ಜಿ ಪಾಟೀಲ್ ಅವರ ಮೇಲೆ ಸ್ಥಳೀಯ ಶಾಸಕರ ಸಹಕಾರವಿಲ್ಲ ಹಾಗಾಗಿ ಹುಬ್ಬಳ್ಳಿ ಮೂಲದ ಪ್ರತಿಷ್ಠಿತ ಸಾರಿಗೆ ಸಂಸ್ಥೆಯ ನೌಕರರನ್ನು ಕರೆಸಿಕೊಂಡು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ‌ ಎನ್ನುವ ಮಾಹಿತಿ ಇದ್ದು ಈ‌ ಕುರಿತು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು ಎಂದರು.

ನೋಟ್ ದೋ ವೋಟ್ ಲೋ ಎನ್ನವ ಉಕ್ತಿ ಯನ್ನು ಪಾಲಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ್ ಅವರು ತಮ್ಮ ಅನುದಾನವನ್ನು ಹೇಗೆ ಎಲ್ಲಿ ಬಳಸಿಕೊಂಡಿದ್ದಾರೆ? ಎಷ್ಟು ಗ್ರಾಮ ಪಂಚಾಯತ್​ಗಳಿಗೆ ಭೇಟಿ ನೀಡಿದ್ದಾರೆ. ಸ್ಥಳೀಯ ಸಂಸ್ಥೆಯ ಬಲವರ್ಧನೆಗೆ ಶಿವಾನಂದ ಪಾಟೀಲ್ ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಪ್ರಿಯಾಂಕ್ ಖರ್ಗೆ , ಬಿ ಜಿ ಪಾಟೀಲ್ ಅವರನ್ನು ಬ್ಯುಸಿನೆಸ್ ಮ್ಯಾನ್ ಎಂದಿದ್ದೇವೆ, ಹೊರತು ಅವರು ಭ್ರಷ್ಟರು ಎಂದು ಹೇಳಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ವ್ಯವಸ್ಥೆ ಮಾಡುತ್ತಿಲ್ಲವೇ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕೈಮುಗಿದು ಮತ ಕೇಳುತ್ತಿದ್ದೇವೆ, ಆದರೆ, ಬಿಜೆಪಿಯವರು ಕೈ ಬಿಸಿ ಮಾಡಿ ವೋಟು ಕೇಳುತ್ತಿದ್ದಾರೆ. ಶಿವಾನಂದ ಅವರು ಪ್ರಾಮಾಣಿಕ ವ್ಯಕ್ತಿ, ಹಣ ಹಂಚುವಷ್ಟು ಶಕ್ತಿ‌ಯನ್ನು ಅವರು ಹೊಂದಿಲ್ಲ. ನಾನು ಕಾಂಗ್ರೆಸ್ ಪಕ್ಷದವನು, ಪಕ್ಷಕ್ಕಾಗಿ ನಾನು ಚುನಾವಣೆಯಲ್ಲಿ‌ ಕೆಲಸ ಮಾಡುತ್ತೇನೆ ಎಂದರು.

ಬಿಟ್ ಕಾಯಿನ್ ಪ್ರಕರಣ :

ಬಿಟ್ ಕಾಯಿನ್ ಪ್ರಮುಖ ಸ್ಕ್ಯಾಮ್ ನ ಪ್ರಮುಖ ಆರೋಪಿ ಶ್ರೀಕಿ ಎಲ್ಲಿದ್ದಾನೆ ಎನ್ನುವುದು ತಿಳಿಯುತ್ತಿಲ್ಲ. ಪೊಲೀಸ್ ವ್ಯವಸ್ಥೆ ಹೇಗಿದೆ ಎಂದು ಮೊನ್ನೆ ಗೃಹ ಸಚಿವರೇ ಖುದ್ದಾಗಿ ಹೇಳಿದ್ದಾರೆ ಎಂದ ಮೇಲೆ ಪೊಲೀಸ್ ಇಲಾಖೆ ಬಲಹೀನವಾಗಿದೆ ಎಂದು ಅವರೇ ಒಪ್ಪಿಕೊಂಡಾಗಿದೆ. ಹತ್ತನೆಯ ತಾರೀಖಿನ ನಂತರ ನಾನು ಮತ್ತೆ ಮಾಧ್ಯಮದ ಮುಂದೆ ಬರುತ್ತೇನೆ. ಅದು ಭಾಗ ಮೂರು ಆಗಲಿದೆ. ಇದರ ಬಗ್ಗೆ ಸರ್ಕಾರ ಸರಿಯಾದ ತನಿಖೆ ನಡೆಸುತ್ತಿಲ್ಲ, ನಡೆಸಿದರೆ ಸರ್ಕಾರಕ್ಕೆ‌ ಖಂಡಿತ ಆಪತ್ತಿದೆ ಎಂದು ಕೆಪಿಸಿಸಿ ವಕ್ತಾರ ಹೇಳಿದರು.

ಸರ್ಕಾರಕ್ಕೆ ಪತ್ರ :

ಕೊರೊನಾ ಮುಂದಿನ‌ ಅಲೆ ಬರಲಿದೆ ಎನ್ನುವ ಭೀತಿ ಇದೆ. ಜಿಲ್ಲೆಯಲ್ಲಿ ಅಧಿಕಾರಿಗಳು ಹೇಗೆ ತಯಾರಿ ನಡೆಸಿದ್ದಾರೆ ಎಂದು ಪ್ರಶ್ನಿಸಿದಾಗ, ನಾನು ಈಗಾಗಲೇ ಸಚಿವರಾದ ಸುಧಾರಕ್ ಅವರಿಗೆ ಪತ್ರ ಬರೆದು ಜೀನೋಮ್​​ ಸೀಕ್ವೆನ್ಸಿಂಗ್ ಲ್ಯಾಬ್ ಸ್ಥಾಪನೆಗೆ ಒತ್ತಾಯಿಸಿದ್ದೇನೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಕ್ಸಿಜನ್ ಸಮರ್ಪಕವಾಗಿ ಸರಬರಾಜು ಮಾಡಿಲ್ಲ. ಯಾವುದೇ ಸಮರ್ಪಕ ತಯಾರಿ ಮಾಡಲು ವಿಫಲವಾಗಿರುವ ಸರ್ಕಾರ ಯುದ್ಧಕಾಲೇ ಶಸ್ತ್ರಭ್ಯಾಸ ಮಾಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ಪ್ರಿಯಾಂಕ್​ ಖರ್ಗೆ ಟೀಕಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.